ADVERTISEMENT

ಕೊಳ್ಳೇಗಾಲ: ನಿಯಮ ಉಲ್ಲಂಘನೆಯೇ ಪರಮ ಗುರಿ

ಮಾಸ್ಕ್‌, ಹೆಲ್ಮೆಟ್‌ ಧರಿಸದ ಜನ, ಪೊಲೀಸರ ಪ್ರಯತ್ನ ನೀರಿನಲ್ಲಿ ಹೋಮ‌

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2020, 15:00 IST
Last Updated 18 ನವೆಂಬರ್ 2020, 15:00 IST
ಬಹುತೇಕ ದ್ವಿಚಕ್ರವಾಹನ ಸವಾರರು ಹೆಲ್ಮೆಟ್‌ ಧರಿಸದೆಯೇ ಸಂಚರಿಸುತ್ತಾರೆ
ಬಹುತೇಕ ದ್ವಿಚಕ್ರವಾಹನ ಸವಾರರು ಹೆಲ್ಮೆಟ್‌ ಧರಿಸದೆಯೇ ಸಂಚರಿಸುತ್ತಾರೆ   

ಕೊಳ್ಳೇಗಾಲ: ಕೋವಿಡ್‌ನಿಂದ ರಕ್ಷಣೆ ಪಡೆಯಲು ಮಾಸ್ಕ್‌ ಹಾಗೂ ಅಪಘಾತದಿಂದ ತಲೆ ಏಟಾಗುವುದನ್ನು ತಪ್ಪಿಸಲು ಹೆಲ್ಮೆಟ್‌ ಧರಿಸುವುದನ್ನು ಕಡ್ಡಾಯಗೊಳಿಸಿದ್ದರೂ, ನಗರದ ಜನರು ಅದರಲ್ಲೂ ಯುವಕರು ಎರಡೂ ನಿಯಮಗಳನ್ನು ಪಾಲಿಸುತ್ತಿಲ್ಲ.

ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿಸ್ಥಳೀಯ ನಗರಸಭೆ ಹಾಗೂ ಪೊಲೀಸರು ಕಾರ್ಯಕ್ರಮಗಳನ್ನು ನಡೆಸುತ್ತಿದ್ದರೂ, ಪ್ರಯೋಜನ ಆಗುತ್ತಿಲ್ಲ.

ಕಡ್ಡಾಯವಾಗಿ ಹೆಲ್ಮೆಟ್ ಮತ್ತು ಮಾಸ್ಕ್‌ ಧರಿಸಬೇಕಾದ ಬಗ್ಗೆ ಪೊಲೀಸರು ಪ್ರತಿನಿತ್ಯ ನಗರದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡವನ್ನೂ ವಿಧಿಸುತ್ತಿದ್ದಾರೆ. ಆದರೂ, ಕೆಲವರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಉದಾಸೀನ ತೋರುತ್ತಿದ್ದಾರೆ.

ADVERTISEMENT

ಪೊಲೀಸರು ಎಲ್ಲಿ ತಪಾಸಣೆ ನಡೆಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಕೆಲವರು, ಬೇರೆ ದಾರಿಗಳಲ್ಲಿ ಸಂಚರಿಸಿ ದಂಡದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಇನ್ನೂಕೆಲವು ಮಂದಿ, ಪೊಲೀಸರು ತಪಾಸಣೆ ನಡೆಸುತ್ತಿರುವ ಸ್ಥಳದ ವಿವರಗಳು ಹಾಗೂ ಚಿತ್ರಗಳನ್ನು ವಾಟ್ಸ್‌ ಆ್ಯಪ್‌ ಗ್ರೂಪುಗಳಲ್ಲೂ ಹಾಕುತ್ತಿದ್ದಾರೆ. ಇದನ್ನು ನೋಡುವ ಮಂದಿ ಬೇರೆ ರಸ್ತೆಯಲ್ಲಿ ಸಂಚರಿಸಿ ದಂಡದಿಂದ ಪಾರಾಗುತ್ತಿದ್ದಾರೆ. ಅಡ್ಡದಾರಿ, ಸಂದಿಗೊಂದಿಗಳಲ್ಲಿ ಬೈಕ್‌ ಸವಾರಿ ಮಾಡಿ ಅಪಘಾತಕ್ಕೆ ಕಾರಣವಾಗುತ್ತಿದ್ದಾರೆ ಎಂದು ಹೇಳುತ್ತಾರೆ ನಗರ ವಾಸಿಗಳು.

‘ಕೆಲವರು ಬೈಕ್‌ ಓಡಿಸುವ ವೇಗ ನೋಡಿ ನಮಗೇ ಪ್ರಾಣ ಹೋದಂತಾಗುತ್ತದೆ’ ಎಂದು ಹೇಳುತ್ತಾರೆ ಹಿರಿಯ ಮಹಿಳೆ ವೆಂಕಟಮ್ಮ.

‘ನಾವು ಪ್ರತಿ ನಿತ್ಯ ವಾಹನ ತಪಾಸಣೆ ಮಾಡುತ್ತಿದ್ದೇವೆ. ನಿಯಮ ಮೀರಿ ನಡೆದವರಿಗೆ ದಂಡವನ್ನೂ ವಿಧಿಸುತ್ತಿದ್ದೇವೆ’ ಎಂದು ಪಟ್ಟಣ ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್ ತಾಜುದ್ದೀನ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಅಡ್ಡಾದಿಡ್ಡಿ ವಾಹನ ನಿಲುಗಡೆ: ಮಾಸ್ಕ್‌, ಹೆಲ್ಮೆಟ್‌ ಧರಿಸುವ ನಿಯಮ ಮಾತ್ರವಲ್ಲ; ಪಾರ್ಕಿಂಗ್‌ ನಿಯಮಗಳ ಪಾಲನೆಯೂ ಸರಿಯಾಗಿ ಆಗುತ್ತಿಲ್ಲ.

ನಗರಸಭೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಡಾ.ರಾಜ್ ಕುಮಾರ್ ರಸ್ತೆ, ಡಾ.ವಿಷ್ಣುವರ್ಧನ್ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಹಳೇ ನಗರಸಭೆ ರಸ್ತೆ, ದೊಡ್ಡ ಮಸೀದಿ ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್‌ಗೆ ಸ್ಥಳ ಗುರುತಿಸಿ ನಾಮಫಲಕ ಹಾಕಿವೆ. ವಾರದಲ್ಲಿ ಮೂರು ದಿನ ಒಂದು ಕಡೆ ಪಾರ್ಕಿಂಗ್ ಮಾಡಿದರೆ, ಉಳಿದ ಮೂರು ದಿನ ಮತ್ತೊಂದೆಡೆ ಪಾರ್ಕಿಂಗ್‌ಗೆ ಜಾಗ ನಿಗದಿ ಮಾಡಲಾಗಿದೆ.

‘ನಿಗದಿ ಮಾಡಿದ ಜಾಗದಲ್ಲಿ ಜನರು ವಾಹನಗಳನ್ನು ನಿಲುಗಡೆ ಮಾಡುತ್ತಿಲ್ಲ. ಮನ ಬಂದಂತೆ ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿದ್ದಾರೆ. ಪೊಲೀಸರು ಕೂಡ ಈ ಬಗ್ಗೆ ಗಮನಹರಿಸುತ್ತಿಲ್ಲ. ಬೇಕಾಬೆಟ್ಟಿ ವಾಹನಗಳನ್ನು ನಿಲ್ಲಿಸುವುದರಿಂದ ಇತರ ಸವಾರರಿಗೆ ತೊಂದರೆಯಾಗುತ್ತಿದೆ. ಜನರ ಓಡಾಟಕ್ಕೂ ಕಷ್ಟವಾಗುತ್ತಿದೆ’ ಎಂದು ವಾಹನ ಸವಾರ ಗೌತಮ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿಯಮಗಳನ್ನು ಉಲ್ಲಂಘಿಸುವುದಕ್ಕಾಗಿಯೇ ಕೆಲವು ಪುಂಡರು ಇದ್ದಾರೆ. ಅವರ ನಿಯಂತ್ರಣ ಇದುವರೆಗೆ ಸಾಧ್ಯವಾಗಿಲ್ಲ. ದ್ವಿಚಕ್ರವಾಹನದಲ್ಲಿ ಮೂವರು ಪ್ರವಾಣಿಸಬಾರದು ಎಂಬ ಇದ್ದರೂ, ಇವರು ಇಬ್ಬರನ್ನು ಕೂರಿಸಿಕೊಂಡು ಸವಾರಿ ಮಾಡುತ್ತಾರೆ. ನಗರದಲ್ಲಿ ವೀಲಿಂಗ್‌ ಎಗ್ಗಿಲ್ಲದೇ ನಡೆಯುತ್ತದೆ. ನಿಯಮ ಮೀರಿ ವೇಗವಾಗಿ ಬೈಕ್‌ ಓಡಿಸುವವರು ಹಲವು ಮಂದಿ ಸಿಗುತ್ತಾರೆ. ಕರ್ಕಶ ಶಬ್ದ ಉಂಟುಮಾಡುವ ಸೈಲೆಂನ್ಸರ್‌ಗಳನ್ನು ಅಳವಡಿಸಿದವರು ನಗರದಲ್ಲಿ ಇದ್ದಾರೆ. ಪೊಲೀಸರು ಇಂತಹವರನ್ನು ಹುಡುಕಿ ಪ್ರಕರಣ ದಾಖಲಿಸಬೇಕು’ ಎಂದು ನಗರದ ಜೋಯೆಲ್‌ ನಿವಾಸ್‌ ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.