ADVERTISEMENT

ಯಳಂದೂರು | ಬರಡು ನೆಲದಲ್ಲಿ ಅರಳಿತು 'ಕಪ್ಪು ಬಂಗಾರ'!

ಬಯಲು ಸೀಮೆಯಲ್ಲಿ ಮಲೆನಾಡಿನ ಬೆಳೆ ಬೆಳೆದು ಕೃಷಿಯಲ್ಲಿ ಸೈ ಎನಿಸಿಕೊಂಡ ಕೀರ್ತಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 19:30 IST
Last Updated 1 ಡಿಸೆಂಬರ್ 2022, 19:30 IST
ತಮ್ಮ ತೋಟದಲ್ಲಿ ಬೆಳೆದಿರುವ ಕರಿಮೆಣಸನ್ನು ಪ್ರದರ್ಶಿಸುತ್ತಿರುವ ಕೀರ್ತಿ ರಂಗಸ್ವಾಮಿ
ತಮ್ಮ ತೋಟದಲ್ಲಿ ಬೆಳೆದಿರುವ ಕರಿಮೆಣಸನ್ನು ಪ್ರದರ್ಶಿಸುತ್ತಿರುವ ಕೀರ್ತಿ ರಂಗಸ್ವಾಮಿ   

ಯಳಂದೂರು: ‘ತಾಕಿನ ಸುತ್ತ ಕಣ್ಣಾಯಿಸಿದರೆ, ನಳನಳಿಸುವ ಅರಿಸಿನ ಮತ್ತು ತೊಗರಿ ಬೆಳೆಗಳ ವೈವಿಧ್ಯ. ಮುಂದಡಿ ಇಟ್ಟರೆ ಅಡಕೆ ತೋಟ. ತಂಪಾದ ನೆಲದಲ್ಲಿ ಏಲಕ್ಕಿ ಗಿಡಗಳ ಸ್ವಾಗತ. ಸಮೀಪದಲ್ಲಿ ದುತ್ತನೆ ಕೈಬೀಸಿ ಕರೆಯುವ ಸಿಲ್ವರ್ ಓಕ್ ಮರಗಳು. ಆ ಮರಗಳನ್ನು ಅಪ್ಪಿದ ಮೆಣಸು. ಈ ಬಳ್ಳಿಯ ತೊಟ್ಟುಗಳಲ್ಲಿ ಗೇಣುದ್ದದ ಮೆಣಸಿನ ಎರೆಗಳು..,

ತಾಲ್ಲೂಕಿನ ಹೊನ್ನೂರು-ದುಗ್ಗಹಟ್ಟಿ ಸಮೀಪದ ರೈತ ಮಹಿಳೆ ಕೀರ್ತಿ ರಂಗಸ್ವಾಮಿ ಅವರು ತನ್ನ ಮನೆಯ ಸುತ್ತ ಮಲೆನಾಡಿನ ಬೆಳೆಗಳನ್ನು ಬೆಳೆದಿದ್ದಾರೆ. ಕೀರ್ತಿ ಅವರದ್ದು ಬಯಲು ಸೀಮೆಯಲ್ಲಿ ‘ಕಪ್ಪು ಬಂಗಾರ’ತೆಗೆದ ಕಥೆ.

ಕೀರ್ತಿ ಅವರು ಮೂರೂವರೆ ಎಕರೆ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿದ್ದಾರೆ. ಬಯಲು ಪ್ರದೇಶದಲ್ಲೂ ಮಸಾಲೆ ವಾಸನೆ ತುಂಬಲು ಸಾಧ್ಯ ಎಂಬುದನ್ನು ನಿರೂಪಿಸಿದ್ದಾರೆ. ಏಕ ಬೆಳೆಯ ನಷ್ಟವನ್ನು, ಬಹುಬೆಳೆ ಪದ್ಧತಿಯಿಂದ ತಪ್ಪಿಸಲು, ಈ ವರ್ಷ ಹಲವು ಬೆಳೆಗಳ ಕೊಯ್ಲು ಮುಗಿಸಿದ್ದಾರೆ.

ADVERTISEMENT

‘ಮೂರ್ನಾಲ್ಕು ಕಾರ್ಮಿಕರನ್ನು ಬಳಸಿಕೊಂಡು ಕನಸಿನ ತೋಟ ಸೃಷ್ಟಿಸಿದ್ದೇನೆ. ಪ್ರತಿ ಗಿಡಕ್ಕೂ ಹನಿ ಮತ್ತು ತುಂತುರು ನೀರಾವರಿ ವ್ಯವಸ್ಥೆ ಮಾಡಿದ್ದು, ವಾಣಿಜ್ಯ ಬೆಳೆಗಳಿಗೆ ಬೇಕಾದ ತಂಪು ಹವೆ ಸೃಷ್ಟಿಸಿದ್ದೇನೆ. ಬೆಳೆಗಳು ಕಟಾವಿಗೂ ಬರುವ ಮೊದಲೇ ಮತ್ತೊಂದು ಗಿಡ ತಾಕಿನಲ್ಲಿ ಅರಳಿರುತ್ತದೆ. ಇದರಿಂದ ಶ್ರಮ ಮತ್ತು ಹೆಚ್ಚಿನ ಖರ್ಚಿನ ಅಪವ್ಯಯ ತಪ್ಪುತ್ತದೆ’ ಎಂದು ಹೇಳುತ್ತಾರೆ ಕೀರ್ತಿ ರಂಗಸ್ವಾಮಿ.

ರಾಸಾಯನಿಕ ಮುಕ್ತ ಫಸಲು: ಚಾಮರಾಜನಗರ ತಾಲ್ಲೂಕಿನ ಹೊಂಡರಬಾಳುವಿನಲ್ಲಿರುವ ಅಮೃತ ಭೂಮಿಯಲ್ಲಿ ತರಬೇತಿ ಪಡೆದ ಕೀರ್ತಿ ಅವರು, ಸಾವಯವ ಬೇಸಾಯ ಅಪ್ಪಿದ್ದಾರೆ. ಬಳ್ಳಿ ನಾಟಿಯಿಂದ ಹಿಡಿದು, ಗಿಡಕ್ಕೆ ಗೊಬ್ಬರ, ನೀರು ಹನಿಸುವ ತನಕ ಕಣ್ಣಿಟ್ಟು ಕಾಯುತ್ತಾರೆ. ಕಳೆಗಿಡ, ತೆಂಗಿನ ಸಿಪ್ಪೆಯ ಹೊದಿಕೆ ಮಾಡಿ, ಭೂಮಿಯಲ್ಲಿ ತೇವಾಂಶಉಳಿಸಿದ್ದಾರೆ.

'ಬೆಳೆಗಳಿಗೆ ಹಸಿರು, ಕೊಟ್ಟಿಗೆ ಗೊಬ್ಬರ ಮತ್ತು ರೇಷ್ಮೆ ಹುಳುವಿನ ತ್ಯಾಜ್ಯ ಬಿಟ್ಟು ಬೇರೆ ಏನು ಕೊಡುವುದಿಲ್ಲ. ರಾಸಾಯನಿಕ ಗೊಬ್ಬರ ಹಾಕಿದರೆ ಬಳ್ಳಿಗೆ ರೋಗ ಬೇಗ ತಗುಲುತ್ತದೆ. ಹಾಗಾಗಿ, ಬೇವಿನೆಣ್ಣೆ, ಸಸ್ಯದ ಕಷಾಯ ಮಾಡಿ ತಡೆಗಟ್ಟಿದ್ದೇನೆ. ತೋಟದಲ್ಲಿ ನೆರಳು-ಬಿಸಿಲು ಸರಿಯಾದ ಪ್ರಮಾಣದಲ್ಲಿ ಬೀಳುವುದರಿಂದ ಬಳ್ಳಿ ಬೆಳವಣಿಗೆಗೆ ಪೂರಕ ವಾತಾವರಣ ಸಿಕ್ಕಿದೆ' ಎಂದು ಅವರು ವಿವರಿಸಿದರು.

‘ಗೇಲಿ ಮಾಡುವವರಿಗೆ ಪಾಠ’
ಕೃಷಿ ಕುಟುಂಬದ ಹನೂರಿನ ಕೀರ್ತಿ ಬಿಇಡಿ ಪದವೀಧರೆ. ಐದು ವರ್ಷಗಳ ಹಿಂದೆ ರಂಗಸ್ವಾಮಿ ಅವರನ್ನು ವಿವಾಹವಾಗಿ ಹೊನ್ನೂರಿಗೆ ಬಂದರು. ಆರಂಭದಲ್ಲಿ ಏಲಕ್ಕಿ, ಮೆಣಸು ಕೃಷಿ ಕೈಗೊಂಡಾಗ ಹೀಯಾಳಿಸಿದವರು ಹೆಚ್ಚು.

'ಎಲ್ಲ ಬಿಟ್ಟು ಬಂಗಿ ನೆಟ್ಟರು ಎಂದು ಜರಿದರು. ಆದರೆ, ಗಂಡ, ಅತ್ತೆ, ಶ್ರಮಿಕರು ಆತ್ಮ ವಿಶ್ವಾಸ ತುಂಬಿದರು. ಇದರಿಂದ ಅರೆ ಕಾಲಿಕ ಶಿಕ್ಷಕಿ ವೃತ್ತಿಯನ್ನು ತ್ಯಜಿಸಿ, ಪೂರ್ಣ ಪ್ರಮಾಣದಲ್ಲಿ ಕೃಷಿ ಕಲಿಕೆಯನ್ನು ಅಪ್ಪಿದೆ’ ಎನ್ನುತ್ತಾರೆ ಕೀರ್ತಿ ರಂಗಸ್ವಾಮಿ.

‘ಎರಡು ಪಂಪ್‌ಸೆಟ್‌ಗಳ ಮೂಲಕ ನೀರಾವರಿ ಕಲ್ಪಿಸಿದ್ದೇವೆ. ಎರಡು ಎಕೆರೆಯಲ್ಲಿ ಅರಿಸಿನ, ಕಾಳುಬೆಳೆ, ವೀಳ್ಯೆದಲೆ ಇದೆ. 1 ಎಕರೆಯಲ್ಲಿ 365 ಮರಕ್ಕೆ 10x10 ಅಡಿ ಅಂತರದಲ್ಲಿ ಪಣಿಯೂರ್-4 ತಳಿಯ ಕಾಳು ಮೆಣಸು ಹಬ್ಬಿಸಿದ್ದೇವೆ. ಬೆಳೆಗೆ ಜೀವಾಮೃತ ಬಳಕೆ ಮಾಡುತ್ತೇವೆ. ಮೊದಲ ಬಾರಿ ಮೆಣಸು 25 ಕೆಜಿ. 3ನೇ ವರ್ಷ ಒಂದು ಕ್ವಿಂಟಲ್‌, 5ನೇ ವರ್ಷ 5 ಕ್ವಿಂಟಲ್ ಫಸಲು ಬಂದಿದೆ. ಕೆಜಿಗೆ ₹500 ಧಾರಣೆ ಇದೆ. 'ನಮ್ದು ಮಳಿಗೆ' ಮೂಲಕ ಮಾರಾಟ ಮಾಡುಲು ಪ್ರಯತ್ನ ಮಾಡುತ್ತೇವೆ’ ಎಂದು ಕೀರ್ತಿ ವಿವರಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.