
ಯಳಂದೂರು: ತಾಲ್ಲೂಕಿನ ಬಿಳಿಗಿರಿಬೆಟ್ಟದ ಕಾಳು ಮೆಣಸು ಬೆಳೆಗಾರರಿಗೆ ಈ ಬಾರಿ ಸೊರಗು ರೋಗದ ಆತಂಕ ಎದುರಾಗಿದೆ. ಇಳುವರಿ ತೀವ್ರವಾಗಿ ಕುಸಿದಿದೆ.
ಬಳ್ಳಿಗಳಲ್ಲಿ ಎಲೆ ಉದುರುತ್ತಿದ್ದು, ಬಳ್ಳಿ ಸಂಪೂರ್ಣವಾಗಿ ನಶಿಸುವ ಆತಂಕ ರೈತರಲ್ಲಿದೆ. ಮೆಣಸು ಕಾಳಿಗೆ ಬೆಲೆ ಇದ್ದರೂ, ಫಸಲು ಕೈಸೇರದ್ದರಿಂದ ವರಮಾನ ಕೈತಪ್ಪಲಿದೆ.
‘ ಬಿಆರ್‌ಟಿ ಸುತ್ತ ಮೆಣಸು ಬಳ್ಳಿಗಳನ್ನು ವಿವಿಧ ಮರಗಳಿಗೆ ಹಬ್ಬಿಸಲಾಗಿದೆ. ನಾಟಿ ಮಾಡಿದ ನಾಲ್ಕು ವರ್ಷಗಳ ನಂತರ ಗಿಡದಿಂದ ಮೆಣಸು ಫಲ ಕೊಡುತ್ತದೆ. ಉತ್ತಮ ಮಳೆ ಹಾಗೂ ರೋಗದ ಹಾವಳಿ ಇಲ್ಲದಿದ್ದರೆ, ಮಾತ್ರ ಫಸಲನ್ನು ನಿರೀಕ್ಷೆ ಮಾಡಬಹುದು. ಅತಿಯಾದ ಚಳಿಯಿಂದ ಸೊರಗು ರೋಗ ಹಾವಳಿಯಿಂದ ಫಸಲು ಕುಸಿಯಲಿದೆ’ ಎನ್ನುತ್ತಾರೆ ಬೆಳೆಗಾರರು.
‘ಪ್ರತಿವರ್ಷ ಜನವರಿ-ಮಾರ್ಚ್ ನಡುವೆ ಮೆಣಸು ಕೊಯಿಲು ಆರಂಭವಾಗುತ್ತದೆ. ಮೆಣಸು ಹಣ್ಣಾಗುತ್ತಿದ್ದಂತೆ ಫಸಲು ಸಂಗ್ರಹಿಸಲಾಗುತ್ತದೆ. ಬಹುತೇಕ ಕಾಫಿ ಕೃಷಿಕರು ಮಿಶ್ರ ಬೆಳೆಯಾಗಿ ಮೆಣಸು ಅಭಿವೃದ್ಧಿ ಪಡಿಸಿದ್ದಾರೆ. ಅಡಿಕೆ, ಸಿಲ್ವರ್ ಓಕ್ ಮರಗಳಿಗೆ ಮೆಣಸು ಬಳ್ಳಿ ಹಬ್ಬಿಸಿದ್ದಾರೆ. ಈಗ ಬೇಸಿಗೆ ಕಾಲಿಡುತ್ತಿದ್ದು ಬಳ್ಳಿ ಒಣಗಲು ಆರಂಭಿಸಿವೆ. ಶೀಘ್ರ ಸೊರಗು ಬಾಧೆಯಿಂದ ಎಲೆಗಳು ಉದುರುತ್ತಿದ್ದು, ಬಳ್ಳಿ ನಾಶವಾಗಲಿದೆ’ ಎಂದು ಬಿಳಿಗಿರಿಬೆಟ್ಟದ ವಾಣಿಜ್ಯ ಬೆಳೆಗಾರ ವಾದಿರಾಜು ಕಳವಳ ವ್ಯಕ್ತಪಡಿಸಿದರು.
‘ಮೂರು ವರ್ಷಗಳಿಂದ ಬೆಟ್ಟದಲ್ಲಿ ಸರಿಯಾಗಿ ಮಳೆ ಬಂದಿಲ್ಲ. ಹವಾಮಾನ ವೈಪರಿತ್ಯವೂ ಕಾಡುತ್ತಿದೆ. ಒಮ್ಮೆ ಹೆಚ್ಚಾದರೆ, ಮುಂದಿನ ಮಳೆ ಕೈತಪ್ಪುತ್ತದೆ. ಅಕಾಲಿಕ ಹಾಗೂ ಅನಿರೀಕ್ಷಿತ ಮಳೆ ವೈಪರಿತ್ಯ ಹಾಗೂ ಔಷಧಿ ಸಿಂಪಡಿಸಲು ಶ್ರಮಿಕರ ಕೊರತೆ ಮೊದಲಾದ ಕಾರಣಗಳಿಂದ ಬೆಳೆ ಉಳಿಸಿಕೊಳ್ಳುವುದು ಸವಾಲಾಗಿದೆ’ ಎನ್ನುತ್ತಾರೆ ಜಿಲ್ಲಾ ಬುಟಕಟ್ಟು ಸಂಘದ ಕಾರ್ಯದರ್ಶಿ ಮಾದೇಗೌಡ.
ಬೆಟ್ಟದಲ್ಲಿ ಬೆಳೆಯುವ ಕಾಳು ಮೆಣಸಿಗೆ ಬಹು ಬೇಡಿಕೆ ಇದೆ. ಇಲ್ಲಿನ ಬಹುವಾರ್ಷಿಕ ಬಳ್ಳಿ ಮೆಣಸು ಕಾಳಿನ ಉತ್ಪಾದನೆ, ಬಳಕೆ ಮತ್ತು ರಫ್ತಿಗೆ ಬಹು ಬೇಡಿಕೆ ಇದೆ. ಕೆಜಿಗೆ ₹700 ಧಾರಣೆ ಇದೆ. ಚಿಕ್ಕಟ ದುಂಬಿ, ಹಿಟ್ಟು ತಿಗಣೆ, ಥ್ರಿಪ್ಸ್ ನುಸಿ, ಶೀಘ್ರ ಸೊರಗು, ಶೀತದಿಂದ ಹೆಚ್ಚಾಗುವ ಕೀಟ ಬಾಧೆಯಿಂದ ಗಿಡದಲ್ಲಿ ಈ ಸಲ ಹೂವು ಕಳಚಿದೆ, ಶೇ 90 ಭಾಗದ ಮೆಣಸು ಇಳುವರಿ ಕೈತಪ್ಪಿದೆ. ಇದರಿಂದ 200ಕ್ಕೂ ಹೆಚ್ಚಿನ ಅಂಚಿನ ಕೃಷಿಕರು ಕರಿ ಮೆಣಸು ಕೃಷಿಯಿಂದ ಕಂಗೆಟ್ಟಿದ್ದಾರೆ’ ಎಂದು ಬೆಳೆಗಾರ ವಾಸು ಹೇಳಿದರು.
‘ಬೋರ್ಡೋ ದ್ರಾವಣ ಬಳಸಿ’
‘ಮಣ್ಣಿನಲ್ಲಿ ತೇವಾಂಶ ಹೆಚ್ಚಾದರೆ ಸೊರಗು ರೋಗ ಕಾಣಿಸಿಕೊಳ್ಳುತ್ತದೆ. ಒಂದೂವರೆ ತಿಂಗಳಲ್ಲಿ ಎಲ್ಲ ಸಸಿಗಳಿಗೆ ಆವರಿಸುತ್ತದೆ. ಇದನ್ನು ತಪ್ಪಿಸಲು ಬಳ್ಳಿಗೆ ಬೋರ್ಡೋ ದ್ರಾವಣ ಸಿಂಪಡಿಸಬೇಕು. ಮಳೆಗಾಲಕ್ಕೂ ಮೊದಲು ಕಾಂಪೋಸ್ಟ್ ಗೊಬ್ಬರ ಜೊತಗೆ ಟ್ರೈಕೋಡರ್ಮ ಸಿಂಪಡಿಸಿದರೆ ಕಾಳು ಮೆಣಸು ಬಳ್ಳಿಗಳ ರೋಗನಿರೋಧಕ ಶಕ್ತಿ ಹೆಚ್ಚಾಗಲಿದೆ’ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್.ರಾಜು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.