ADVERTISEMENT

ಗುಂಡ್ಲುಪೇಟೆಯಲ್ಲಿ ಅನುಮತಿ ಇಲ್ಲದೆ ಕೊಳವೆಬಾವಿ ಕೊರೆದರೆ ಕ್ರಮಕ್ಕೆ ಡಿಸಿ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 11:15 IST
Last Updated 12 ಡಿಸೆಂಬರ್ 2020, 11:15 IST
   

ಚಾಮರಾಜನಗರ: ‘ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕನ್ನು ಅಂತರ್ಜಲ ಅತೀ ಬಳಕೆ ತಾಲ್ಲೂಕು ಎಂದು ಘೋಷಿಸಿರುವುದರಿಂದ ತಾಲ್ಲೂಕಿನಲ್ಲಿ ಕೊಳವೆಬಾವಿ ಕೊರೆಸಲು ಜಿಲ್ಲಾ ಅಂತರ್ಜಲ ಪ್ರಾಧಿಕಾರದ ಅನುಮತಿ ಪಡೆಯುವುದು ಕಡ್ಡಾಯ. ಅನುಮತಿ ಪಡೆಯದೆ ಕೊಳವೆ ಬಾವಿ ಕೊರೆಸಿದರೆ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಅಂತರ್ಜಲ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ರಾಜ್ಯದ ಅಂತರ್ಜಲ ಸಂಪನ್ಮೂಲ ಮೌಲೀಕರಣ ಕುರಿತ ಅಧಿಸೂಚನೆ ಪ್ರಕಾರ, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಅಂತರ್ಜಲ ಬಳಕೆಯ ಪ್ರಮಾಣ ಶೇ 127ರಷ್ಟು ಇದೆ. ತಾಲ್ಲೂಕಿನಅಂತರ್ಜಲ ಬಳಕೆದಾರರು ಅರ್ಜಿ ಸಲ್ಲಿಸಿ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯ. ಪ್ರಾಧಿಕಾರದ ಅನುಮತಿ ಇಲ್ಲದೇ ಕೊಳವೆಬಾವಿ ಕೊರೆಸಿದರೆ ದಂಡ ವಿಧಿಸಲು ಅವಕಾಶ ಇದೆ’ ಎಂದರು.

‘ಕುಡಿಯುವ ನೀರಿನ ಮೂಲಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಅಂತರ್ಜಲ ಬಳಕೆದಾರರು ವೈಯಕ್ತಿಕ ಅಥವಾ ಸಮುದಾಯ ಬಳಕೆ ಯಾವುದೇ ಉದ್ದೇಶಕ್ಕಾಗಲಿ, ಅಧಿಸೂಚಿತ ಪ್ರದೇಶದಲ್ಲಿ ಕೊಳವೆಬಾವಿ ತೋಡಲು ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕು. ನಂತರ ಅಧಿಕಾರಿಗಳು ಪ್ರದೇಶಗಳ ಸ್ಥಳ ತಪಾಸಣೆ ನಡೆಸಿ ವರದಿ ನೀಡಬೇಕು’ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ADVERTISEMENT

‘ಜಿಲ್ಲೆಯ ಯಾವುದೇ ಭಾಗದಲ್ಲಿ ಕೈಗಾರಿಕೆ, ವಾಣಿಜ್ಯ, ಮನರಂಜನೆ, ಇನ್‌ಫ್ರಾಸ್ಟ್ರಕ್ಚರ್‌ ಮೈನಿಂಗ್ ಉದ್ದೇಶಕ್ಕಾಗಿ ಅಂತರ್ಜಲ ಬಳಸಲು ಅಂತರ್ಜಲ ಪ್ರಾಧಿಕಾರದಿಂದ ಅನುಮತಿ, ನಿರಾಕ್ಷಣಾ ಪತ್ರ ಪಡೆಯುವುದು ಕಡ್ಡಾಯ. ಅಂತರ್ಜಲ ಬಳಕೆ ಪ್ರಮಾಣ 25 ಸಾವಿರ ಲೀಟರ್‌ಗೂ ಹೆಚ್ಚಿದ್ದರೆ, ಕರ್ನಾಟಕ ಅಂತರ್ಜಲ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ಈ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಬೇಕು’ ಎಂದು ಅವರು ತಿಳಿಸಿದರು.

ಏಜೆನ್ಸಿಗಳ ನೋಂದಣಿ ಕಡ್ಡಾಯ

ಕೊಳವೆಬಾವಿ ಕೊರೆಯುವ ರಿಗ್ ಯಂತ್ರಗಳನ್ನು ಹೊಂದಿರುವ ಏಜೆನ್ಸಿಗಳು ಕಡ್ಡಾಯವಾಗಿ ಪ್ರಾಧಿಕಾರದಲ್ಲಿ ನೋಂದಣಿಯಾಗಿರಬೇಕು. ಅನಧಿಕೃತವಾಗಿ ಕಾರ್ಯನಿರ್ವಹಿಸುವುದು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಡಾ.ಎಂ.ಆರ್.ರವಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಧರಣೇಶ್, ಭೂ ವಿಜ್ಞಾನಿ ಧನಲಕ್ಷ್ಮಿ, ಹಿರಿಯ ಪೊಲೀಸ್ ಅಧಿಕಾರಿ ಅನ್ಸರ್ ಅಲಿ, ಸೆಸ್ಕ್‌ ಕಾರ್ಯಪಾಲಕ ಎಂಜಿನಿಯರ್ ಪೂರ್ಣಚಂದ್ರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಎಂಜಿನಿಯರ್ ವಿಜಯಕುಮಾರ್, ಜಿಲ್ಲಾ ಪರಿಸರ ಅಧಿಕಾರಿ ರಘುರಾಂ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.