ADVERTISEMENT

ಹನೂರು: ಗ್ರಾ.ಪಂ ಸದಸ್ಯರಿಗೆ ಜೆಡಿಎಸ್‌ ಮುಖಂಡ ಹಣ ನೀಡುತ್ತಿರುವ ಫೋಟೊ ವೈರಲ್‌

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 16:28 IST
Last Updated 25 ಜನವರಿ 2021, 16:28 IST
ವೈರಲ್‌ ಆಗಿರುವ ಫೋಟೊ
ವೈರಲ್‌ ಆಗಿರುವ ಫೋಟೊ   

ಹನೂರು: ಗ್ರಾಮ ಪಂಚಾಯಿತಿಯ ಅಧಿಕಾರಕ್ಕಾಗಿ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಾಲಯದ ಮುಂದೆ ಆಣೆ -ಪ್ರಮಾಣ ಮಾಡುತ್ತಿರುವ ವಿಡಿಯೊ ವೈರಲ್ ಆಗಿರುವ ಬೆನ್ನಲ್ಲೇ, ತಾಲ್ಲೂಕಿನ ಕೌದಳ್ಳಿ ಗ್ರಾಮದ ನಾಯಕರ ಬಡಾವಣೆಯ ಹುಚ್ಚಪ್ಪನ ದೇವಾಲಯದ ಮುಂಭಾಗ ಗ್ರಾಮ ಪಂಚಾಯಿತಿಯ ನೂತನ ಸದಸ್ಯರಿಗೆ ಜೆಡಿಎಸ್ ಜಿಲ್ಲಾ ಘಟಕದ ಮಂಜುನಾಥ್ ಅವರು ಹಣ ನೀಡುತ್ತಿರುವ ಫೋಟೊಗಳು ವೈರಲ್ ಆಗಿವೆ.

ಕೌದಳ್ಳಿ ಗ್ರಾಮ ಪಂಚಾಯಿತಿಯಲ್ಲಿ 23 ಸದಸ್ಯರಿದ್ದು, ಕಾಂಗ್ರೆಸ್ ಬೆಂಬಲಿತ 15, ಬಿಜೆಪಿ ಬೆಂಬಲಿತ ಆರು ಮತ್ತು ಜೆಡಿಎಸ್ ಬೆಂಬಲಿತರು ಇಬ್ಬರು ಗೆಲುವು ಸಾಧಿಸಿದ್ದಾರೆ.

ಈ ಪಂಚಾಯಿತಿಯ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೂ ಉಪಾಧ್ಯಕ್ಷ ಹುದ್ದೆ ಪರಿಶಿಷ್ಠ ಜಾತಿ ಮಹಿಳೆಗೂ ಮೀಸಲಾಗಿದೆ. ಇದೇ 28ರಂದು ಚುನಾವಣೆ ನಿಗದಿಯಾಗಿದೆ. ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತರಿಗೆ ಬಹುಮತ ಲಭಿಸಿದೆ.

ADVERTISEMENT

ಈ‌ ನಡುವೆ, ಮಂಜುನಾಥ್ ಅವರು ಕೆಲ ಸದಸ್ಯರಿಗೆ ಹಣವನ್ನು ನೀಡಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಬಹುಮತಕ್ಕೆ ಬೇಕಾದ ಇನ್ನಷ್ಟು ಸದಸ್ಯರನ್ನು ಮೈತ್ರಿ ಪಕ್ಷಕ್ಕೆ ಕರೆತರಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಆದರೆ, ಮಂಜುನಾಥ್‌ ಅವರು ಇದನ್ನು ನಿರಾಕರಿಸಿದ್ದಾರೆ. ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಅವರು, ‘ನಾನು ಕ್ಷೇತ್ರದಲ್ಲಿ ಮೂರು ವರ್ಷಗಳಿಂದ ಸುತ್ತಾಡುತ್ತಿದ್ದೇನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಡವರಿಗೆ, ನಿರ್ಗತಿಕರಿಗೆ ಮತ್ತು ಗ್ರಾಮಗಳಲ್ಲಿ ದೇವಾಲಯಗಳ ಅಭಿವೃದ್ಧಿಗೆ ನನ್ನ ಕೈಲಾದಷ್ಟು ಸಹಾಯ ಮಾಡುತ್ತಾ ಬಂದಿದ್ದೇನೆ’ ಎಂದರು.

‘ಕೌದಳ್ಳಿ ಗ್ರಾಮದಲ್ಲಿ ದೇವಾಲಯದ ಕಾಮಕಾರಿ ಅರ್ಧಕ್ಕೆ ನಿಂತಿರುವ ಬಗ್ಗೆ ಅಲ್ಲಿನ ಸ್ಥಳೀಯರು‌ ಮಾಹಿತಿ ನೀಡಿದ್ದರು. ಆದ್ದರಿಂದ ದೇವಾಲಯದ ಕಾಮಗಾರಿಯನ್ನು ಮುಂದುವರೆಸಲು ನಾನು ಹಣ ನೀಡಿರುವುದು ನಿಜ. ಆದರೆ, ಕೆಲವರು ಹೇಳುವಂತೆ ನಾನು ರಾಜಕೀಯ ಕಾರಣಕ್ಕೆ ಧನ ಸಹಾಯ‌ ಮಾಡಿಲ್ಲ. ಕ್ಷೇತ್ರದಲ್ಲಿ ನನ್ನ ಏಳಿಗೆಯನ್ನು ಸಹಿಸದೇ ಕೆಲವರು ಇದಕ್ಕೆ ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.