ಚಾಮರಾಜನಗರ: ಅಪ್ರಾಪ್ತರು ವಾಹನ ಚಾಲನೆ ಮಾಡುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ ಆರಂಭಿಸಿದೆ.
ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯ ಶಾಲಾ ಕಾಲೇಜುಗಳು ಹಾಗೂ ಪ್ರಮುಖ ರಸ್ತೆಗಳಲ್ಲಿ ವಾಹನಗಳ ತಪಾಸಣೆಗೆ ಇಳಿದಿರುವ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸುತ್ತಿದ್ದ ಅಪ್ರಾಪ್ತರನ್ನು ಪತ್ತೆ ಹಚ್ಚುತ್ತಿದ್ದಾರೆ.
ಜನವರಿಯಲ್ಲಿ ನಡೆದ ವಿಶೇಷ ಕಾರ್ಯಾಚರಣೆ ವೇಳೆ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 14, ಗ್ರಾಮಾಂತರ ಠಾಣೆಯಲ್ಲಿ 6, ಪೂರ್ವ ಠಾಣೆಯಲ್ಲಿ 5, ಸಂಚಾರ ಠಾಣೆ ಹಾಗು ಕುದೇರು ಠಾಣೆಯಲ್ಲಿ 2, ಸಂತೇಮರಹಳ್ಳಿ ಠಾಣೆಯಲ್ಲಿ 5, ಗುಂಡ್ಲುಪೇಟೆಯಲ್ಲಿ 6, ಬೇಗೂರಿನಲ್ಲಿ 9, ತೆರಕಣಾಂಬಿ ವ್ಯಾಪ್ತಿಯಲ್ಲಿ 3, ಯಳಂದೂರು, ಮಾಂಬಳ್ಳಿ, ಕೊಳ್ಳೇಗಾಲ ನಗರ ಠಾಣಾ ವ್ಯಾಪ್ತಿಯಲ್ಲಿ ತಲಾ 2, ಕೊಳ್ಳೇಗಾಲ ಗ್ರಾಮಾಂತರ ಭಾಗದಲ್ಲಿ 9, ಹನೂರಿನಲ್ಲಿ 7, ರಾಮಾಪುರ 2, ಮಲೆ ಮಹದೇಶ್ವರ ಬೆಟ್ಟ ಠಾಣಾ ವ್ಯಾಪ್ತಿಯಲ್ಲಿ ನಾಲ್ವರು ಅಪ್ತಾಪ್ತರು ವಾಹನ ಚಲಾಯಿಸಿರುವುದು ಕಂಡುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಸಂಚಾರ ನಿಯಮ ಉಲ್ಲಂಘಿಸಿದ ಮಕ್ಕಳ ಬಳಿ ಪೋಷಕರ ಮಾಹಿತಿ ಪಡೆದು ಅವರನ್ನು ಸ್ಥಳಕ್ಕೆ ಕರೆಸಿಕೊಂಡು ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸಲಾಗುತ್ತಿದೆ. ಮಕ್ಕಳಿಗೆ ವಾಹನಗಳನ್ನು ಓಡಿಸಲು ಅವಕಾಶ ನೀಡಿದರೆ ಕಾನೂನಿನಡಿ ₹ 25,000ದವರೆಗೂ ದಂಡ ವಿಧಿಸುವ ಹಾಗೂ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುವ ಬಗ್ಗೆ ತಿಳಿಸಿ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಎಸ್‌ಪಿ ಬಿ.ಟಿ.ಕವಿತಾ ತಿಳಿಸಿದರು.
ಮೊದಲಸಲ ಸಿಕ್ಕಿಬಿದ್ದವರಿಗೆ ಮಾನವೀಯ ನೆಲೆಯಲ್ಲಿ ದಂಡ ವಿಧಿಸದೆ ಪ್ರಕರಣ ದಾಖಲಿಸದೆ ಎಚ್ಚರಿಕೆ ನೀಡಲಾಗುತ್ತಿದೆ. ಮತ್ತೆ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದರೆ ದಂಡ ವಿಧಿಸುವುದರ ಜೊತೆಗೆ ಪ್ರಕರಣ ದಾಖಲಿಸಲಾಗುವುದು. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಪೋಷಕರು ವಾಹನಗಳನ್ನು ಓಡಿಸಲು ಕೊಡಬಾರದು. ಅಪ್ರಾಪ್ತರು ವಾಹನಗಳನ್ನು ಓಡಿಸುವಷ್ಟು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಮರ್ಥರಾಗಿರುವುದಿಲ್ಲ, ಸಾರ್ವಜನಿಕರ ಜೀವಕ್ಕೂ ಹಾನಿಯಾಗುವ ಸಂಭವ ಇರುವುದರಿಂದ ಜವಾಬ್ದಾರಿಯಿಂದ ವರ್ತಿಸಬೇಕು. 18 ವರ್ಷ ತುಂಬಿದ ನಂತರ ಸಾರಿಗೆ ಇಲಾಖೆಯಿಂದ ಚಾಲನಾ ಪರವಾನಗಿ ಪಡೆದು ವಾಹನ ಓಡಿಸಲು ಅನುಮತಿ ನೀಡಬೇಕು ಎಂದು ಎಂದು ಎಸ್‌ಪಿ ಪೋಷಕರಿಗೆ ಕಿವಿಮಾತು ಹೇಳಿದರು.
ಶಾಲಾ ಕಾಲೇಜುಗಳಿಗೆ ಬೈಕ್: ನಗರ, ಪಟ್ಟಣ ಪ್ರದೇಶಗಳಲ್ಲಿರುವ ಶಾಲಾ–ಕಾಲೇಜುಗಳಿಗೆ ಮಕ್ಕಳು ದ್ವಿಚಕ್ರ ವಾಹನಗಳಲ್ಲಿ ಬರುತ್ತಿರುವುದು ಹೆಚ್ಚಾಗಿದೆ. ಈ ಬಗ್ಗೆ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಅಪ್ತಾಪ್ತರು ವಾಹನಗಳನ್ನು ತರುವುದಕ್ಕೆ ಕಡಿವಾಣ ಹಾಕಬೇಕು. ಪೋಷಕರಿಗೂ ವಾಹನಗಳನ್ನು ನೀಡದಂತೆ ತಾಕೀತು ಮಾಡಬೇಕು ಎನ್ನುತ್ತಾರೆ ರಾಮಸಮುದ್ರ ನಿವಾಸಿ ಪ್ರಶಾಂತ್.
ಬಿ.ರಾಚಯ್ಯ ಜೋಡಿ ರಸ್ತೆ, ಸಂತೇಮರಹಳ್ಳಿ ವೃತ್ತ, ಸೇಂಟ್ ಫ್ರಾನ್ಸಿಸ್ ಶಾಲೆ, ಚೆನ್ನಾಪುರದ ಮೊಳೆ ರಸ್ತೆಗಳಲ್ಲಿ ಪ್ರತಿನಿತ್ಯ ಅಪ್ತಾಪ್ತರು ಬೈಕ್‌ನಲ್ಲಿ ಸವಾರಿ ಮಾಡುವುದು ಹೆಚ್ಚಾಗಿದೆ. ಒಂದು ಬೈಕ್‌ನಲ್ಲಿ ಮೂವರು ಕುಳಿತು ಅಪಾಯಕಾರಿಯಾಗಿ ವಾಹನ ಓಡಿಸುವುದನ್ನು ನೋಡಿದರೆ ಆತಂಕವಾಗುತ್ತದೆ. ಪೊಲೀಸರು ವಾಹನ ಮಾಲೀಕರಿಗೆ ದಂಡ ವಿಧಿಸಿ ಪ್ರಕರಣ ದಾಖಲಿಸಿದರೆ ಅಪ್ತಾಪ್ತರು ವಾಹನ ಚಾಲನೆ ಮಾಡುವ ಪ್ರಕರಣಗಳು ಕಡಿಮೆಯಾಗುತ್ತವೆ ಎನ್ನುತ್ತಾರೆ ಪ್ರಶಾಂತ್.
ಮಕ್ಕಳಿಗೆ ವಾಹನ ಕೊಡುವ ಮುನ್ನ ಇರಲಿ ಎಚ್ಚರ ಮಕ್ಕಳು ಸಿಕ್ಕಿಬಿದ್ದರೆ ಪೋಷಕರಿಗೆ ₹ 25,000 ದಂಡ ಸಾರ್ವಜನಿಕರ ಜೀವಹಾನಿಯಾದರೆ ಜೈಲು ಶಿಕ್ಷೆ
ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಜಿಲ್ಲೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಅಪ್ರಾಪ್ತ ಮಕ್ಕಳ ವಾಹನ ಚಾಲನೆಗೆ ಕಡಿವಾಣ ಹಾಕಲಾಗುತ್ತಿದೆ. ಮಕ್ಕಳ ಸುರಕ್ಷತೆ ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಪೋಷಕರು ಮಕ್ಕಳಿಗೆ ವಾಹನ ಓಡಿಸಲು ಅವಕಾಶ ನೀಡಬಾರದುಬಿ.ಟಿ.ಕವಿತಾ ಎಸ್‌ಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.