ADVERTISEMENT

ಗುಂಡ್ಲುಪೇಟೆ | ಕುಸಿದ ಬೆಲೆ: ಕೊಳೆಯುತ್ತಿದೆ ಆಲೂಗಡ್ಡೆ

ಉತ್ತಮ ಇಳುವರಿ ಬಂದರೂ ಖರೀದಿಗೆ ಉತ್ಸಾಹ ತೋರದ ವ್ಯಾಪಾರಿಗಳು

ಮಲ್ಲೇಶ ಎಂ.
Published 30 ಸೆಪ್ಟೆಂಬರ್ 2025, 2:16 IST
Last Updated 30 ಸೆಪ್ಟೆಂಬರ್ 2025, 2:16 IST
ಗುಂಡ್ಲುಪೇಟೆ ತಾಲ್ಲೂಕಿನ ಮೇಲುಕಾಮನಹಳ್ಳಿ ಗ್ರಾಮದ ಜಮೀನೋಂದರಲ್ಲಿ ಬೆಳೆದಿರುವ ಆಲೂಗಡ್ಡೆ
ಗುಂಡ್ಲುಪೇಟೆ ತಾಲ್ಲೂಕಿನ ಮೇಲುಕಾಮನಹಳ್ಳಿ ಗ್ರಾಮದ ಜಮೀನೋಂದರಲ್ಲಿ ಬೆಳೆದಿರುವ ಆಲೂಗಡ್ಡೆ   

ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ನಿರೀಕ್ಷೆಗೂ ಮೀರಿ ಆಲೂಗಡ್ಡೆ ಬೆಳೆಯಲಾಗಿದ್ದು, ಸೂಕ್ತ ಬೆಲೆ ದೊರೆಯದೆ ರೈತರು ಕಂಗಾಲಾಗಿದ್ದಾರೆ.

ಕಷ್ಟಪಟ್ಟು ಬೆಳೆದ ಆಲೂಗಡ್ಡೆಯನ್ನು ವ್ಯಾಪಾರಿಗಳು ಖರೀದಿ ಮಾಡಲು ಉತ್ಸಾಹ ತೋರದ ಪರಿಣಾಮ ರೈತರ ಜಮೀನುಗಳಲ್ಲಿ ಆಲೂಗಡ್ಡೆಗಳನ್ನು ರಾಶಿ ಹಾಕಲಾಗಿದೆ.

ಮಳೆ ಹಾಗೂ ಬಿಸಿಲಿನ ಹೊಡೆತಕ್ಕೆ ಆಲೂಗಡ್ಡೆ ಬೆಳೆ ಕೊಳೆಯುವ ಸ್ಥಿತಿಗೆ ಬಂದಿದ್ದು, ಅನ್ನದಾತರು ಕಂಗಾಲಾಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಆಲೂಗಡ್ಡೆ ಬೆಳೆಯಲು ಹಾಕಿದ ಬಂಡವಾಳ ಕೂಡ ರೈತರ ಕೈಸೇರದ ಪರಿಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 3,000 ಹೆಕ್ಟೇರ್ ಪ್ರದೇಶದಲ್ಲಿ ಪ್ರಸ್ತುತ ಆಲೂಗಡ್ಡೆ ಬೆಳೆಯಲಾಗಿದೆ. ಉತ್ತಮ ಬೆಳೆ ಬಂದಿದ್ದು, ಇಳುವರಿಯೂ ಚೆನ್ನಾಗಿ ಬಂದಿದೆ. ಆದರೆ, ಸೂಕ್ತ ಬೆಲೆ ಮಾತ್ರ ಸಿಗುತ್ತಿಲ್ಲ. ಒಂದು ಮೂಟೆ ಬಿತ್ತನೆ ಆಲೂಗಡ್ಡೆಗೆ ₹1,000 ಕೊಟ್ಟು ಖರೀದಿಸಿ ಬಿತ್ತನೆ ಮಾಡಿದ್ದ ರೈತರು, ಇದೀಗ 45 ಕೆ.ಜಿ ತೂಕದ ಮೂಟೆ ಆಲೂಗಡ್ಡೆಯನ್ನು ಕೇವಲ ₹650ರಿಂದ ರಿಂದ ₹700ಕ್ಕೆ ಮಾರುವ ಅನಿವಾರ್ಯತೆಗೆ ಸಿಲುಕಿದ್ದಾರೆ.

‘ಒಂದು ಮೂಟೆ ಆಲೂಗಡ್ಡೆಯನ್ನು ಕನಿಷ್ಠ ₹1000-1200ರವರೆಗೆ ಮಾರಾಟವಾದರೆ ಮಾತ್ರ ಬೆಳದಿದ್ದಕ್ಕೆ ಸ್ವಲ್ಪ ಲಾಭ ಕಾಣಬಹುದು. ಇಲ್ಲವಾದರೆ ಹಾಕಿದ ಬಂಡವಾಳವೂ ಕೈಸೇರದೆ ಸಾಲ ಹೆಗಲೇರುತ್ತದೆ’ ಎಂದು ತಾಲ್ಲೂಕಿನ ರೈತರಾದ ಸ್ವಾಮಿ ಆತಂಕ ವ್ಯಕ್ತಪಡಿಸಿದರು.

ಮೂರು ಎಕರೆಯಲ್ಲಿ ಆಲೂಗಡ್ಡೆ ಬಿತ್ತನೆ ಮಾಡಿದ್ದೇನೆ. ಬೀಜ, ಗೊಬ್ಬರ, ಕೂಲಿ, ನಿರ್ವಹಣೆ ಸೇರಿದಂತೆ ₹4 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದೇನೆ. ಈಗ ಆಲೂಗಡ್ಡೆಯನ್ನು ಭೂಮಿಯಿಂದ ಹೊರತೆಗೆಯಲು ಎಕರೆಗೆ ₹35,000 ಕೂಲಿ ನೀಡಬೇಕು, ವ್ಯಾಪಾರಸ್ಥರಿಗೆ ಮಾರಾಟ ಮಾಡಲು ನಾವೇ ಚೀಲಗಳನ್ನು ತಂದು ಗಡ್ಡೆಗಳನ್ನು ತುಂಬಿಸಿಕೊಟ್ಟರೆ ಚೀಲಕ್ಕೆ ₹700 ನೀಡಿ ಖರೀದಿಸುತ್ತಾರೆ. ಹೊಸ ಚೀಲಕ್ಕೆ ಹೆಚ್ಚುವರಿಯಾಗಿ ₹100 ಖರ್ಚಾಗುತ್ತಿದ್ದು ದಿಕ್ಕು ತೋಚದಂತಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ತಾಲ್ಲೂಕಿನಲ್ಲಿ ಕಳೆದ ಬಾರಿಯಷ್ಟೆ ಆಲೂಗಡ್ಡೆಗೆ ಬೆಲೆ ಸಿಗುತ್ತದೆ ಎಂಬ ಭರವಸೆಯೊಂದಿಗೆ ರೈತರು ಖಾಲಿ ಬಿಟ್ಟಿದ್ದ ಭೂಮಿಯನ್ನು ಉಳುಮೆ ಮಾಡಿ ಆಲೂಗಡ್ಡೆ ಬಿತ್ತನೆ ಮಾಡಿದ್ದರು. ಈ ಬಾರಿ ವಾತಾವರಣವೂ ಬೆಳೆಗೆ ಪೂರಕವಾಗಿದ್ದರಿಂದ ಹೆಚ್ಚಿನ ಕಾಯಿಲೆಗಳು ಕಾಣಿಸಿಕೊಂಡಿರಲಿಲ್ಲ. ಇಳುವರಿಯೂ ನಿರೀಕ್ಷಿತ ಪ್ರಮಾಣದಲ್ಲಿ ಬಂದಿದೆ. ಆದರೆ ಮುಖ್ಯವಾಗಿ ಬೆಲೆಯೇ ಇಲ್ಲದಂತಾಗಿದೆ. ಮಾರುಕಟ್ಟೆಯಲ್ಲಿ ಬೇಡಿಕೆಗಿಂತ ಹೆಚ್ಚು ಆಲೂಗಡ್ಡೆ ಪೂರೈಕೆಯಾಗುತ್ತಿರುವುದು ಆಲೂಗಡ್ಡೆ ಬೆಲೆ ಇಳಿಕೆಗೆ ಕಾರಣ ಎನ್ನುತ್ತಾರೆ ವ್ಯಾಪಾರಿಗಳು.

ಆಲೂಗಡ್ಡೆಗೆ ಉತ್ತಮ ಬೆಲೆ ಬರಬಹುದು ಎಂಬ ಲೆಕ್ಕಾಚಾರದೊಂದಿಗೆ ಹಲವು ರೈತರು ತೋಟದಲ್ಲೇ ನೆರಳಿನಡಿ ಆಲೂಗಡ್ಡೆ ರಾಶಿ ಮಾಡಿ, ಕೆಡದಂತೆ ಕ್ರಮ ಕೈಗೊಂಡಿದ್ದರೂ ಬಿಸಿಲಿನ ತಾಪಕ್ಕೆ ಆಲೂಗಡ್ಡೆ ಕೊಳೆಯುತ್ತಿದೆ. ಬೆಳೆ ನಾಶವಾಗುವ ಆತಂಕ ಒಂದೆಡೆಯಾದರೆ, ಬೆಲೆ ಕುಸಿತ ಆರ್ಥಿಕವಾಗಿ ಪೆಟ್ಟುನೀಡಿದೆ. ವ್ಯಾಪಾರಸ್ಥರು ಕೇಳಿದ ಬೆಲೆಗೆ ಆಲೂಗಡ್ಡೆ ಮಾರಾಟ ಮಾಡಲಾಗದ ಸ್ಥಿತಿ ಎದುರಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದರು. 

‘ಬೇಡಿಕೆಗಿಂತ ಪೂರೈಕೆ ಹೆಚ್ಚು’

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಲೂಗಡ್ಡೆ ಬೆಳೆದಿರುವುದರಿಂದ ವ್ಯಾಪಾರಸ್ಥರು ಖರೀದಿಗೆ ಹೆಚ್ಚು ಆಸಕ್ತಿ ತೋರುತ್ತಿಲ್ಲ. ಸ್ಥಳೀಯ ರೈತರು ಅನಿವಾರ್ಯವಾಗಿ ತಮಿಳುನಾಡಿನ ಮೇಟುಪಾಳ್ಯಂ ಮಾರುಕಟ್ಟೆಗೆ ಆಲೂಗಡ್ಡೆಯನ್ನು ಕೊಂಡೊಯ್ದು ಮಾರಾಟ ಮಾಡುತ್ತಿದ್ದಾರೆ. ಅಲ್ಲಿನ ಗೋದಾಮುಗಳಲ್ಲೂ ಸ್ಥಳಾವಕಾಶ ಇಲ್ಲದೆ ಬೇರೆ ಮಾರುಕಟ್ಟೆಗಳಿಗೆ ಮೂಟೆಗಳನ್ನು ಕೊಂಡೊಯ್ಯುವಂತೆ ಮಾಲೀಕರು ಹೇಳುತ್ತಿದ್ದಾರೆ. ಇದರಿಂದಾಗಿ ಆಲೂಗಡ್ಡೆ ಮೂಟೆಗಳನ್ನು ತಮಿಳುನಾಡಿನಲ್ಲೂ ಕಾಯುವಂತಾಗಿದೆ ಎಂದು ರೈತ ಚಿನ್ನಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.