ADVERTISEMENT

ದೇಶದ ರಕ್ಷಣೆಗೆ ಹಿಂದೂಗಳು ಒಂದಾಗಬೇಕು: ಪ್ರಮೋದ್‌ ಮುತಾಲಿಕ್‌

ಚಾಮರಾಜನಗರದಲ್ಲಿ ಆಜಾದ್‌ ಹಿಂದೂ ಸೇನೆಯ ಕಾರ್ಯಾಲಯ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 3:56 IST
Last Updated 25 ನವೆಂಬರ್ 2022, 3:56 IST
ಆಜಾದ್‌ ಹಿಂದೂ ಸೇನೆಯ ಕಾರ್ಯಾಲಯ ಉದ್ಘಾಟನಾ ಸಮಾರಂಭದಲ್ಲಿ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಮಾತನಾಡಿದರು. ಉಪ್ಪಾರ ಸಮುದಾಯದ 88 ಗಡಿಕಟ್ಟೆಮನೆಪೀಠದ ಮಂಜುನಾಥ ಸ್ವಾಮೀಜಿ, ವಾಟಾಳು ಶ್ರೀಗಳು, ಆಜಾದ್‌ ಹಿಂದೂ ಸೇನೆಯ ರಾಜ್ಯಾಧ್ಯಕ್ಷ ಎಂ.ಎಸ್‌.ಪೃಥ್ವಿರಾಜ್‌ ಇದ್ದರು
ಆಜಾದ್‌ ಹಿಂದೂ ಸೇನೆಯ ಕಾರ್ಯಾಲಯ ಉದ್ಘಾಟನಾ ಸಮಾರಂಭದಲ್ಲಿ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಮಾತನಾಡಿದರು. ಉಪ್ಪಾರ ಸಮುದಾಯದ 88 ಗಡಿಕಟ್ಟೆಮನೆಪೀಠದ ಮಂಜುನಾಥ ಸ್ವಾಮೀಜಿ, ವಾಟಾಳು ಶ್ರೀಗಳು, ಆಜಾದ್‌ ಹಿಂದೂ ಸೇನೆಯ ರಾಜ್ಯಾಧ್ಯಕ್ಷ ಎಂ.ಎಸ್‌.ಪೃಥ್ವಿರಾಜ್‌ ಇದ್ದರು   

ಚಾಮರಾಜನಗರ: ಇಸ್ಲಾಮಿಕ್ ಶಕ್ತಿ, ಕ್ರಿಶ್ಚಿಯನ್ ಶಕ್ತಿ, ನಾಸ್ತಿಕವಾದಿಗಳು ಹಾಗೂ ಭ್ರಷ್ಟ ವ್ಯವಸ್ಥೆ ಈ ದೇಶಕ್ಕೆ ಅಪಾಯಕಾರಿಯಾಗಿದ್ದು ಇವುಗಳ ನಿರ್ಮೂಲನೆಗೆ ಹಿಂದೂಗಳೆಲ್ಲರೂ ಸಂಘಟಿತರಾಗಬೇಕಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಗುರುವಾರ ಅಭಿಪ್ರಾಯ ಪಟ್ಟರು.

ಆಜಾದ್‌ ಹಿಂದೂ ಸೇನೆಯ ಕಾರ್ಯಾಲಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ನಮ್ಮ ದೇಶದಲ್ಲಿ ಹಿಂದೂಗಳನ್ನು ಸಂಘಟನೆ ಮಾಡಲು ನೂರಾರು ವಿಘ್ನಗಳು ಎದುರಾಗುತ್ತಿರುವುದು ದುರ್ದೈವದ ಸಂಗತಿ. ಜಾತಿ ಸಂಘಟನೆ ಮಾಡುತ್ತೇವೆ ಎಂದಾಗ ಯಾರೂ ಕಿರಿ ಕಿರಿ ಮಾಡುವುದಿಲ್ಲ. ಕ್ರೀಡಾ ಸಂಘಟನೆ, ವ್ಯಾಪಾರಿಗಳ ಸಂಘಟನೆ ಮಾಡುವಾಗ ಯಾರೂ ತೊಂದರೆ ಕೊಡುವುದಿಲ್ಲ. ಆದರೆ, ಎಲ್ಲರನ್ನೂ ಸೇರಿಸಿ ಹಿಂದೂ ಸಂಘಟನೆ ಮಾಡಲು ಹೊರಟಾಗ ಕಿರಿ ಕಿರಿ ಶುರುವಾಗುತ್ತವೆ. ನಾವು ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾನ್‌ ಸೇರಿದಂತೆ ಬೇರೆ ದೇಶಗಳಲ್ಲಿ ಸಂಘಟನೆ ಮಾಡುತ್ತಿಲ್ಲ. ನಮ್ಮ ದೇಶದಲ್ಲಿ ಮಾಡುತ್ತಿದ್ದೇವೆ. ಇಲ್ಲಿನವರೇ ನಮಗೆ ತೊಂದರೆ ಕೊಡುತ್ತಾರೆ’ ಎಂದು ದೂರಿದರು.

‘50 ವರ್ಷಗಳ ಹಿಂದೆ ಚಾಮರಾಜನಗರದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಅಡ್ಡಿ ಪಡಿಸಿದ್ದರು. ಮುಂದಿನ ದಿನಗಳಲ್ಲಿ ದೇವಸ್ಥಾನಗಳಿಗೆ, ನಮ್ಮ ಹಬ್ಬ ಆಚರಣೆಗೂ ಅಡ್ಡಿ ಪಡಿಸಬಹುದು. ಇದನ್ನು ತಡೆಯಲು ಹಿಂದೂಗಳು ಒಂದಾಗಬೇಕು’ ಎಂದು ಹೇಳಿದರು.

ADVERTISEMENT

ಜಾರಿಯಾಗದ ಕಾನೂನು: ‘ಗೋಮಾತೆಯ ರಕ್ಷಣೆ ಮಾಡಲು ನಮಗೆ ಇನ್ನೂ ಸಾಧ್ಯವಾಗಿಲ್ಲ. ಗೋಕಳ್ಳರು ಈಗ ಲಾರಿಗಳಲ್ಲಿ ಗೋವುಗಳನ್ನು ಸಾಗಣೆ ಮಾಡುತ್ತಿಲ್ಲ. ಬದಲಿಗೆ, ಪ್ರಯಾಣಿಕ ವಾಹನಗಳು ಸೇರಿದಂತೆ ಬೇರೆ ಬೇರೆ ತಂತ್ರಗಳನ್ನು ಮಾಡಿ ಸಾಗಣೆ ಮಾಡುತ್ತಿದ್ದಾರೆ. ಪೊಲೀಸರೇ ಅವರನ್ನು ಬೆಂಬಲಿಸುತ್ತಿದ್ದಾರೆ. ಗೋಸಾಗಣೆಯನ್ನು ತಡೆಯಲು ಹೋದ ಹಿಂದೂ ಕಾರ್ಯಕರ್ತರ ವಿರುದ್ಧವೇ ಪ್ರಕರಣ ದಾಖಲಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ವಿಧಾಸೌಧದಲ್ಲಿ ಮಾತ್ರ ಜಾರಿಯಾಗಿದೆ. ಆದೇಶ ಕಾಗದದಲ್ಲಿ ಮಾತ್ರ ಇದೆ. ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ. ಹತ್ಯೆ ನಿರಂತರವಾಗಿ ನಡೆಯುತ್ತಿದೆ. ಗೋವುಗಳ ರಕ್ಷಣೆ, ಹಿಂದೂಗಳ ರಕ್ಷಣೆಗಾಗಿ ಕೆಲಸ ಮಾಡಿದ್ದಕ್ಕೆ ನನ್ನ ಮೇಲೆ 17 ಪ್ರಕರಣಗಳನ್ನು ದಾಖಲಿಸಿದ್ದಾರೆ. 1000 ಪ್ರಕರಣ ದಾಖಲಿಸಿದರೂ ನಾನೂ ಹೆದರುವುದಿಲ್ಲ. ಆರ್‌ಎಸ್‌ಎಸ್‌ ಹಾಗೂ ಇತರ ಹಿಂದೂ ಸಂಘಟನೆಗಳಲ್ಲಿ 1000ಕ್ಕೂ ಹೆಚ್ಚು ಮುತಾಲಿಕರು ಇದ್ದಾರೆ’ ಎಂದರು.

ತಿ.ನರಸೀಪುರದ ವಾಟಾಳು ಸೂರ್ಯ ಸಿಂಹಾಸನ ಮಠದ ಸಿದ್ಧಲಿಂಗಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಎಲ್ಲ ಧರ್ಮಕ್ಕಿಂತಲೂ ಶ್ರೇಷ್ಠ ಹಿಂದೂ ಧರ್ಮ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಅದು ನಶಿಸಿ ಹೋಗಲು ಯಾರೂ ಬಿಡಬಾರದು. ಪ್ರಮೋದ್‌ ಮುತಾಲಿಕ್‌ ಹಿಂದೂ ಧರ್ಮದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರಿಗೆ ರಾಜಕೀಯ ಬೆಂಬಲ ಇಲ್ಲ. ಏಕಾಂಗಿಯಾಗಿ ಹೋರಾಡುತ್ತಿದ್ದಾರೆ’ ಎಂದರು.

‘ನಮಗಿರುವುದು ಒಂದೇ ದೇಶ’

‘ನಾವು ಸಾಕಷ್ಟು ಕಳೆದುಕೊಂಡಿದ್ದೇವೆ. ಅಫ್ಘಾನಿಸ್ತಾನ, ಪಾಕಿಸ್ತಾನ, ಇರಾನ್‌, ಬಾಂಗ್ಲಾದೇಶ, ಮ್ಯಾನ್ಮಾರ್‌, ಇಂಡೊನೇಷ್ಯಾ ಹೀಗೆ ತುಂಬಾ ಕಳೆದುಕೊಂಡಿದ್ದೇವೆ. ಹಿಂದೂಗಳಿಗಾಗಿ ಇರುವ ದೇಶ ಭಾರತ ಒಂದೇ. ಇದನ್ನು ನಾವು ರಕ್ಷಿಸಬೇಕು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು500 ವರ್ಷಗಳು ಬೇಕಾಯಿತು. ಅದಕ್ಕಾಗಿ ಮತ್ತೊಬ್ಬ ರಾಮ ಪ್ರಧಾನಿ ನರೇಂದ್ರ ಮೋದಿ ಅವರು ಬರಬೇಕಾಯಿತು. ನಾವು ಅವರ ಕೈ ಬಲಪಡಿಸಬೇಕು. ಇದಕ್ಕಾಗಿ ಹಿಂದೂಗಳೆಲ್ಲರೂ ಒಗ್ಗಟ್ಟಾಗಬೇಕು’ ಎಂದು ಮುತಾಲಿಕ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.