ಚಾಮರಾಜನಗರ: ಜಿಲ್ಲೆಯಲ್ಲಿ ಮೈಸೂರು ಮಹಾರಾಜರ ಹೆಸರಿನಲ್ಲಿರುವ 5 ಸಾವಿರ ಎಕರೆಗೂ ಹೆಚ್ಚಿನ ಖಾಸಗಿ ಸ್ವತ್ತನ್ನು ಖಾತೆ ಮಾಡಿಕೊಡುವಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಜಿಲ್ಲಾಡಳಿತಕ್ಕೆ ಬರೆದಿರುವ ಪತ್ರದಿಂದ ನೂರಾರು ರೈತರು ಆತಂಕದಲ್ಲಿದ್ದಾರೆ.
‘ದಶಕಗಳಿಂದ ಬದುಕು ಕಟ್ಟಿಕೊಂಡಿರುವ ನೆಲವನ್ನು ಬಲವಂತವಾಗಿ ಕಸಿದುಕೊಂಡರೆ ಆತ್ಮಹತ್ಯೆ ಹೊರತಾಗಿ ಬೇರೆ ದಾರಿ ಕಾಣುತ್ತಿಲ್ಲ’ ಎನ್ನುತ್ತಾರೆ ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮಸ್ಥರು.
‘ಗ್ರಾಮದಲ್ಲಿ 800 ಕುಟುಂಬಗಳಿದ್ದು 4 ಸಾವಿರಕ್ಕೂ ಹೆಚ್ಚು ಮಂದಿ ವಾಸವಿದ್ದಾರೆ.ಈಗ ಭೂಮಿ ಬಿಟ್ಟುಕೊಡಿ ಎಂದರೆ ಎಲ್ಲರೂ ಬೀದಿಗೆ ಬೀಳಬೇಕಾಗುತ್ತದೆ’ ಎಂಬುದು ಅವರ ಆತಂಕ.
‘ಪ್ರಮೋದಾದೇವಿ ಅವರ ಒತ್ತಡಕ್ಕೆ ಮಣಿದು ಒಕ್ಕಲೆಬ್ಬಿಸಿದರೆ ಗ್ರಾಮಸ್ಥರು ಊರು ತೊರೆಯಬೇಕು. ಅಂತಹ ಪರಿಸ್ಥಿತಿ ಬಂದರೆ, ಮೈಸೂರು ಅರಮನೆ ಎದುರು ಠಿಕಾಣಿ ಹೂಡುತ್ತೇವೆ, ನ್ಯಾಯ ಸಿಗದಿದ್ದರೆ ಅಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
‘ಮಹಾರಾಜರಾಗಿದ್ದ ಜಯರಾಮರಾಜೇಂದ್ರ ಒಡೆಯರ್ 1,035 ಎಕರೆ ಜಮೀನನ್ನು ಸಿದ್ದಯ್ಯನಪುರ ಗ್ರಾಮಸ್ಥರಿಗೆ ದಾನ ನೀಡಿದ್ದರು. 1982ರಲ್ಲಿ ಸಚಿವರಾಗಿದ್ದ ಬಿ.ರಾಚಯ್ಯನವರು ಸಾಗುವಳಿ ಚೀಟಿ ಕೊಡಿಸಿದ್ದರು’ ಎಂದು ಗ್ರಾಮದ ಮುಖಂಡ ನಾಗರಾಜ್ ಹೇಳುತ್ತಾರೆ.
‘ರಾಜರು ಕೊಟ್ಟಿರುವ ದಾನಪತ್ರ, ಭೂದಾಖಲೆಗಳು ಇವೆ. ಕೊಳವೆಬಾವಿ ಕೊರೆಯಿಸಿ, ಬ್ಯಾಂಕ್ ಸಾಲ ಪಡೆದು ಕೃಷಿ ಮಾಡುತ್ತಿದ್ದೇವೆ. ರಾಜರು ಕೊಟ್ಟಿದ್ದ ಬೆದ್ದಲು ಜಮೀನನ್ನು ಕೃಷಿಯೋಗ್ಯ ಭೂಮಿಯಾಗಿ ಮಾಡಿಕೊಂಡು ಜೀವನಕ್ಕೊಂದು ದಾರಿ ಮಾಡಿಕೊಂಡಿದ್ದೇವೆ’ ಎನ್ನುತ್ತಾರೆ ಗ್ರಾಮದ ಮಹದೇವಯ್ಯ.
ಭಾರತೀಯ ಕಿಸಾನ್ ಸಂಘ ಗ್ರಾಮಸ್ಥರ ನೆರವಿಗೆ ಧಾವಿಸಿದೆ. ‘ಸರ್ಕಾರ ಕೂಡಲೇ ಮಧ್ಯಸ್ಥಿಕೆ ವಹಿಸಿ ನ್ಯಾಯ ಕಲ್ಪಿಸಬೇಕು. ಭೂಮಿ ಬಿಟ್ಟುಕೊಡಲೇಬೇಕು ಎಂದಾದರೆ ಸರ್ಕಾರ ಪರ್ಯಾಯವಾಗಿ ಭೂಮಿ ಕೊಡಲಿ. ಇಲ್ಲವೇ ಹೋರಾಟ ಅನಿವಾರ್ಯ’ ಎನ್ನುತ್ತಾರೆ ಕಿಸಾನ್ ಸಂಘದ ಕೋಶಾಧ್ಯಕ್ಷ ಲಿಂಗರಾಜು.
ಮಹಾರಾಜರ ಕುಟುಂಬ ತಣ್ಣಗಿರಲಿ...
‘ಸಿದ್ದಯ್ಯನಪುರ ಹಿಂದೆ ಜಯಚಾಮರಾಜೇಂದ್ರ ಪುರವಾಗಿತ್ತು. ಮಹಾರಾಜರು ಭೂಮಿ ದಾನ ಕೊಟ್ಟಿದ್ದಕ್ಕೆ ಕೃತಜ್ಞತೆಯಾಗಿ ಅವರ ಹೆಸರನ್ನೇ ಗ್ರಾಮಕ್ಕೆ ಇರಿಸಲಾಯಿತು. ಇಂದಿಗೂ ಊರಿನ ಚಾವಡಿ ಮನೆಗಳಲ್ಲಿ ಜಯಚಾಮರಾಜ ಒಡೆಯರ್ ಚಿತ್ರವಿದೆ. ವಿವಾದ ಏನೇ ಇರಲಿ ಕಷ್ಟದ ದಿನಗಳಲ್ಲಿ ಅನ್ನಕೊಟ್ಟ ರಾಜರ ಕುಟುಂಬ ತಣ್ಣಗಿರಲಿ’ ಎಂದು ಹಾರೈಸಿದರು ಗ್ರಾಮದ ಮಹದೇವಯ್ಯ.
ರಾಜರು ನೀಡಿರುವ ದಾನಪತ್ರ ಸಾಗುವಳಿ ಪತ್ರ ಕೂಡ ರೈತರೇ ಭೂಮಾಲೀಕರೆಂಬುದನ್ನು ಸಾಬೀತುಪಡಿಸುತ್ತವೆ. ಸರ್ಕಾರ ಒತ್ತಡಕ್ಕೆ ಮಣಿದು ರೈತ ವಿರೋಧಿ ನಿಲುವು ತೆಗೆದುಕೊಂಡರೆ ಹೋರಾಟ ಅನಿವಾರ್ಯ.ಶಿವಪ್ರಕಾಶ್ ಕೊಡಸೋಗೆ, ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ
ಪ್ರಮೋದಾದೇವಿ ಒಡೆಯರ್ ಪೂರಕ ದಾಖಲೆ ಸಲ್ಲಿಸಿಲ್ಲ. ನಮ್ಮಲ್ಲೂ ಪೂರಕ ಕಡತಗಳು ದೊರೆತಿಲ್ಲ. ಸಿದ್ದಯ್ಯನಪುರವನ್ನು ಕಂದಾಯ ಗ್ರಾಮವನ್ನಾಗಿಸಲು ಪ್ರಸ್ತಾವ ಸಲ್ಲಿಸಲಿದ್ದು ಒಪ್ಪಿಗೆ ಸಿಕ್ಕರೆ ರೈತರಿಗೆ ಪ್ರತ್ಯೇಕ ಪಹಣಿ ಸಹಿತ ದಾಖಲೆಗಳು ಸಿಗಲಿವೆ.ಸಿ.ಟಿ.ಶಿಲ್ಪಾನಾಗ್, ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.