ADVERTISEMENT

ಪಾಳ್ಯ: ಸೀಗಮಾರಮ್ಮನ ಬಲಿ ಹಬ್ಬಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 6 ಮೇ 2022, 16:05 IST
Last Updated 6 ಮೇ 2022, 16:05 IST
ಕೊಳ್ಳೇಗಾಲ ತಾಲ್ಲೂಕಿನ ಪಾಳ್ಯ ಗ್ರಾಮದಲ್ಲಿ ಸೋಮವಾರ ನಡೆಯಲಿರುವ ಸೀಗಮಾರಮ್ಮನ ಬಲಿ ಹಬ್ಬಕ್ಕೆ ಗ್ರಾಮದ ಬೀದಿಗಳನ್ನು ಅಲಂಕರಿಸುವ ಕೆಲಸ ನಡೆಯುತ್ತಿದೆ
ಕೊಳ್ಳೇಗಾಲ ತಾಲ್ಲೂಕಿನ ಪಾಳ್ಯ ಗ್ರಾಮದಲ್ಲಿ ಸೋಮವಾರ ನಡೆಯಲಿರುವ ಸೀಗಮಾರಮ್ಮನ ಬಲಿ ಹಬ್ಬಕ್ಕೆ ಗ್ರಾಮದ ಬೀದಿಗಳನ್ನು ಅಲಂಕರಿಸುವ ಕೆಲಸ ನಡೆಯುತ್ತಿದೆ   

ಕೊಳ್ಳೇಗಾಲ: ತಾಲ್ಲೂಕಿನ ಪಾಳ್ಯ ಗ್ರಾಮದಲ್ಲಿ 19 ವರ್ಷಗಳ ಬಳಿಕ ನಡೆಯುತ್ತಿರುವ ಸೀಗಮಾರಮ್ಮನ ಬಲಿ ಹಬ್ಬಕ್ಕೆ ಎರಡನೇ ದಿನ ಬಾಕಿ ಉಳಿದಿದ್ದು, ಗ್ರಾಮದಲ್ಲಿ ಸಿದ್ಧತೆ ಜೋರಾಗಿದೆ.

21 ದಿನಗಳ ಕಾಲ ನಡೆಯುವ ಈ ಹಬ್ಬಕ್ಕೆ ಏಪ್ರಿಲ್‌ 24ರಂದೇ ಚಾಲನೆ ಸಿಕ್ಕಿದೆ. ಮೇ 18ರವರೆಗೂ ನಡೆಯಲಿದೆ. ನರ ಬಲಿ ಆಚರಣೆ ಸೋಮವಾರ (ಮೇ 9) ತಡ ರಾತ್ರಿ ನಡೆಯಲಿದೆ.

ಏಪ್ರಿಲ್‌ 24ರಂದು ಗ್ರಾಮದಲ್ಲಿರುವ ಎಲ್ಲ ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿದೆ. ಎಬ್ರದ (ದೊಡ್ಡ ಡೋಲು) ಮೆರವಣಿಗೆ ಪ್ರತಿ ದಿನ ಗ್ರಾಮದ ಬೀದಿಗಳಲ್ಲಿ ನಡೆಯುತ್ತಿದೆ.

ADVERTISEMENT

9ರ ರಾತ್ರಿ ನಡೆಯುವ ಬಲಿ ಆಚರಣೆಗೆ ಈಗ ಸಿದ್ಧತೆ ನಡೆಯುತ್ತಿದ್ದ ಗ್ರಾಮದ ಬೀದಿಗಳನ್ನು ಸಿಂಗಾರ ಮಾಡಲಾಗುತ್ತಿದೆ. ನಿವಾಸಿಗಳು ಚಪ್ಪರ ಹಾಗೂ ವಿದ್ಯುತ್‌ ದೀಪಗಳ ಅಲಂಕಾರ ಮಾಡುವುದರಲ್ಲಿ ನಿರತರಾಗಿದ್ದಾರೆ.

ಬಲಿ ಆಚರಣೆ:ಈ ಹಬ್ಬದಲ್ಲಿ ವಿಶಿಷ್ಟ ಆಚರಣೆಯೊಂದು ಚಾಲ್ತಿಯಲ್ಲಿದೆ. ಆಡು ಮಾತಿನಲ್ಲಿ ಈ ಉತ್ಸವಕ್ಕೆ ನರಬಲಿ ಹಬ್ಬ ಎಂದು ಹೇಳುತ್ತಾರೆ.

ಸೀಗಮಾರಮ್ಮ ದೇವಾಲಯದ ಅರ್ಚಕರು, ದೇವಿಗೆ ನಡೆದುಕೊಳ್ಳುವ ಒಕ್ಕಲಿನ ವ್ಯಕ್ತಿಯೊಬ್ಬರ (ನಾಯಕ ಜನಾಂಗದವರು) ಎದೆ ಮೇಲೆ ಕಾಲಿಟ್ಟಾಗ ಅವರ ಪ್ರಾಣ ಪಕ್ಷಿ ಹಾರಿಹೋಗುತ್ತದೆ (ಇದನ್ನೇ ಬಲಿ ಎಂದು ಹೇಳಲಾಗುತ್ತದೆ). ಆ ವ್ಯಕ್ತಿಯ ಮೆರವಣಿಗೆಯನ್ನು ಶವ ಮೆರವಣಿಗೆ ರೀತಿಯಲ್ಲಿ ಮಾಡಲಾಗುತ್ತದೆ. ಮೆರವಣಿಗೆ ಎಲ್ಲ ಮುಗಿದ ಬಳಿಕ ದೇವಿಯ ತೀರ್ಥವನ್ನು ಪ್ರೋಕ್ಷಣೆ ಮಾಡಿದಾಗ ವ್ಯಕ್ತಿಗೆ ಮತ್ತೆ ಜೀವ ಬರುತ್ತದೆ ಎಂಬ ನಂಬಿಕೆ ಗ್ರಾಮಸ್ಥರದ್ದು. ಇದನ್ನು ಆಚರಣೆ ಮಾಡಿದರೆ ಗ್ರಾಮಕ್ಕೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ.

ಮೇ 9 ರಂದು ಮಧ್ಯರಾತ್ರಿ 12.30ರಿಂದ ಮರುದಿನ ಬೆಳಿಗ್ಗೆ 10 ಗಂಟೆಯವರೆಗೂ ಈ ಆಚರಣೆ ನಡೆಯಲಿದೆ. ಹಬ್ಬದ ಆಚರಣೆಗಾಗಿ ತಾಲ್ಲೂಕು ಹಲವು ಮಾರ್ಗಸೂಚಿಗಳನ್ನು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.