ಚಾಮರಾಜನಗರ: ಪೊಲೀಸರ ಏಕಪಕ್ಷೀಯ ವರ್ತನೆಯಿಂದ ವಕೀಲರಿಗೆ ರಕ್ಷಣೆ ನೀಡಬೇಕು, ವಕೀಲರ ಸಂರಕ್ಷಣೆ ಕಾಯ್ದೆಗೆ (2024) ತಿದ್ದುಪಡಿ ಮಾಡಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ವಕೀಲರ ಒಕ್ಕೂಟದ ವತಿಯಿಂದ ಜಿಲ್ಲಾಡಳಿತ ಭವನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ವಕೀಲರಿಗೆ ರಕ್ಷಣೆ ನೀಡುವ ಸಂಬಂಧ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಮಾರ್ಗಸೂಚಿಗಳನ್ನು ಪಾಲಿಸಬೇಕು, ಅವೈಜ್ಞಾನಿಕ ಅಖಿಲ ಭಾರತ ಬಾರ್ ಪರೀಕ್ಷೆ (ಎಐಬಿಇ) ರದ್ದು ಪಡಿಸಬೇಕು, ಕಿರಿಯ ವಕೀಲರಿಗೆ 2 ವರ್ಷಗಳ ಕಾಲ ಮಾಸಿಕ ₹ 10,000 ವೇತನ ನೀಡಬೇಕು, ತಾಲ್ಲೂಕು ವಕೀಲರ ಸಂಘಗಳಿಗೆ ವರ್ಷಕ್ಕೆ ₹ 5 ಲಕ್ಷ, ಜಿಲ್ಲಾ ವಕೀಲರ ಸಂಘಗಳಿಗೆ ₹10 ಲಕ್ಷ ಅನುದಾನ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ವಕೀಲರಿಗೆ ಕಡ್ಡಾಯವಾಗಿ ವೈದ್ಯಕೀಯ ಮತ್ತು ಜೀವ ವಿಮಾ ಸೌಲಭ್ಯ ಒದಗಿಸಬೇಕು. ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣಗಳಲ್ಲಿ ವಕೀಲರ ಅಕಾಡೆಮಿ ಸ್ಥಾಪಿಸಬೇಕು. ರಾಜ್ಯದಲ್ಲಿ ಹೆಚ್ಚುವರಿ ನ್ಯಾಯಾಲಯಗಳನ್ನು ಸ್ಥಾಪಿಸಬೇಕು, ನ್ಯಾಯಾಲಯಗಳಿಗೆ ಮೂಲಸೌಲಭ್ಯ ಒದಗಿಸಬೇಕು, ನ್ಯಾಯಾಲಯಗಳಲ್ಲಿ ವಕೀಲರಿಗೆ ಚೇಂಬರ್ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಉಪ ವಿಭಾಗಾಧಿಕಾರಿ, ಜಿಲ್ಲಾ ನ್ಯಾಯಾಲಯಗಳಲ್ಲಿ ನಡೆಯುವ ಕಂದಾಯ ಪ್ರಕರಣಗಳಲ್ಲಿ ಒತ್ತಡ ಹಾಗೂ ವಿಳಂಬದ ಕಾರಣದಿಂದ ವಿಚಾರಣೆ ಸಮರ್ಪಕವಾಗಿ ನಡೆಯದೆ ತೀರ್ಪು ಹೊರಬರುವ ಕಾರಣ ಕಂದಾಯ ಪ್ರಕಣಗಳನ್ನು ಸಿವಿಲ್ ನ್ಯಾಯಾಲಯಗಳಿಗೆ ವರ್ಗಾಯಿಸಲು ಕ್ರಮ ತೆಗೆದುಕೊಳ್ಳಬೇಕು, ವಕೀಲರಿಗೆ ಟೋಲ್ ಶುಲ್ಕ ರಹಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು ಎಂದರು.
ಜಿಲ್ಲೆಗೊಂದು ಸರ್ಕಾರಿ ಕಾನೂನು ಕಾಲೇಜು ಸ್ಥಾಪಿಸಬೇಕು, ಅನುದಾನಿತ ಹಾಗೂ ಖಾಸಗಿ ಕಾನೂನು ಕಾಲೇಜುಗಳ ಶುಲ್ಕವನ್ನು ಸರ್ಕಾರ ನಿಯಂತ್ರಣ ಮಾಡಬೇಕು. ಹಾಲಿ ಸರ್ಕಾರಿ ಕಾಲೇಜುಗಳಲ್ಲಿ ಮೂಲಸೌಕರ್ಯ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ರಾಜ್ಯ ವಕೀಲರ ಪರಿಷತ್ತಿನ ಕಚೇರಿಯನ್ನು ವಿಭಾಗೀಯ ಮಟ್ಟದಲ್ಲಿ ಸ್ಥಾಪಿಸಿ, ಚುನಾವಣೆಯಲ್ಲಿ ಮಹಿಳಾ ವಕೀಲರಿಗೆ ಶೇ 33 ರಷ್ಟು ಮೀಸಲಾತಿ ನೀಡಬೇಕು. ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ಸಿಗಬೇಕು. ಒಂದು ತಿಂಗಳೊಳಗೆ ಬೇಡಿಕೆ ಈಡೇರಿಸದಿದ್ದರೆ ವಕೀಲರ ಹೋರಾಟ ತೀವ್ರಗೊಳ್ಳಲಿದೆ ಎಂದು ಅಖಿಲ ಭಾರತ ವಕೀಲರ ಒಕ್ಕೂಟದ ಜಿಲ್ಲಾಧ್ಯಕ್ಷ ಪುಟ್ಟಸ್ವಾಮಿ ರಾಮಸಮುದ್ರ ತಿಳಿಸಿದರು.
ಮನವಿ ಸಲ್ಲಿಕೆ ಸಂದರ್ಭ ವಕೀಲರಾದ ಪ್ರಸನ್ನ ಕುಮಾರ್ ಬಿ, ದೇವರಾಜು, ಶಶಿಕಲಾ, ಕಾವ್ಯಾ, ಎಂ.ಆರ್.ಸವಿತಾ, ಅಭಿಷೇಕ್, ಶಶಿಕುಮಾರ್, ಸಿ.ಎನ್.ರವಿಕುಮಾರ್, ಗುಲ್ಜಾರ್, ಮಲ್ಲು, ಆರ್. ಅಭಿಷೇಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.