ADVERTISEMENT

ಮೀಟರ್‌ ಅಳವಡಿಕೆ ವಿರೋಧಿಸಿ ಪ್ರತಿಭಟನೆ

ದಿನದ 24 ಗಂಟೆ ಶಾಶ್ವತ ಕುಡಿಯುವ ನೀರಿನ ಯೋಜನೆ:

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 19:23 IST
Last Updated 5 ಅಕ್ಟೋಬರ್ 2019, 19:23 IST
ಕೊಳ್ಳೇಗಾಲದಲ್ಲಿ ತಾಲ್ಲೂಕು ಪ್ರಗತಿಪರ ಸಂಘಟನೆಗಳು ಮತ್ತು ಸಾರ್ವಜನಿಕರು ಪ್ರತಿಭಟನೆ ನಡೆಸಿದರು
ಕೊಳ್ಳೇಗಾಲದಲ್ಲಿ ತಾಲ್ಲೂಕು ಪ್ರಗತಿಪರ ಸಂಘಟನೆಗಳು ಮತ್ತು ಸಾರ್ವಜನಿಕರು ಪ್ರತಿಭಟನೆ ನಡೆಸಿದರು   

ಕೊಳ್ಳೇಗಾಲ: ದಿನದ 24 ಗಂಟೆ ಶಾಶ್ವತ ಕುಡಿಯುವ ನೀರಿನ ಯೋಜನೆ ಬೇಕು. ಆದರೆ. ನಲ್ಲಿಗಳಿಗೆ ಮೀಟರ್ ಅಳವಡಿಸುವುದು ಬೇಡ ಎಂದು ತಾಲ್ಲೂಕು ಪ್ರಗತಿಪರ ಸಂಘಟನೆಗಳು ಮತ್ತು ಸಾರ್ವಜನಿಕರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಬಸ್ ನಿಲ್ದಾಣ ಬಳಿ ಜಮಾವಣೆಗೊಂಡ ಪ್ರತಿಭಟನಕಾರರು ಅಲ್ಲಿಂದ ಡಾ.ರಾಜಕುಮಾರ್ ರಸ್ತೆ, ಡಾ.ಅಂಬೇಡ್ಕರ್ ರಸ್ತೆ ಮೂಲಕ ಮೆರವಣಿಗೆ ಹೊರಟು ಪ್ರಮುಖ ರಸ್ತೆಗಳಲ್ಲಿ ಶಾಸಕ ಎನ್.ಮಹೇಶ್ ಅವರ ವಿರುದ್ಧ ಹಾಗೂ ನಗರಸಭೆ ಆಡಳಿತದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಂತರ ತಾಲ್ಲೂಕು ಕಚೇರಿಗೆ ಬಂದು ಧರಣಿ ಕುಳಿತು ‘ನೀರು ಬೇಕು. ಆದರೆ, ಮೀಟರ್ ಬೇಡ. ಅಂದು ಹೋರಾಟ ಇಂದು ಮಾರಾಟ, ಮಾತಿಗೆ ತಪ್ಪಿದ ಶಾಸಕ’ ಎಂದು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ನಂತರ ಉಪವಿಭಾಗಾಧಿಕಾರಿ ನಿಖಿತಾ ಚಿನ್ನಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ADVERTISEMENT

ನಂತರ ಮಾತನಾಡಿದ ಮುಖಂಡ ಶಿವಮಲ್ಲು, ‘ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಜಾರಿ ಮಾಡಲು ಬಿಡುವುದಿಲ್ಲ. ಹಿಂದೆ ಹೋರಾಟ ಮಾಡಿದ್ದ ಶಾಸಕರೇ ಇವತ್ತು ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಇದು ದುರಂತ. ದಿನದ 24 ಗಂಟೆ ಶಾಶ್ವತ ಕುಡಿಯುವ ನೀರಿನ ಯೋಜನೆ ಬೇಕು. ಆದರೆ, ನಲ್ಲಿಗಳಿಗೆ ಮೀಟರ್ ಅಳವಡಿಸುವುದು ನಮ್ಮ ವಿರೋಧ’ ಎಂದರು.

ನಂತರ ಇತಿಹಾಸ ತಜ್ಞ ನಂಜರಾಜೇ ಅರಸ್ ಮಾತನಾಡಿ, ‘ಶಾಸಕ ಎನ್.ಮಹೇಶ್ ಅವರು ಹಿಂದೆ ನನ್ನ ಆಪ್ತಮಿತ್ರರು. ಆದರೆ ಇಂದು ಲಂಚಕೋರರು. ಅವರು ಢೋಂಗಿ ಹೋರಾಟಗಾರರು’ ಎಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ಸ್ವರಾಜ್ ಸಂಘಟನೆಯ ರಾಜ್ಯ ಸಂಚಾಲಕಿ ನಂದಿನಿ, ದೊಡ್ಡಲಿಂಗಯ್ಯ, ಸಾಹಿತಿ ಮಂಜುನಾಥ್ ಬಾಳಗುಣಸೇ, ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಟರಾಜ್ ಮಾಳಿಗೆ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಗೌಡೇಗೌಡ, ರೈತ ಮುಖಂಡ ಶೈಲೇಂದ್ರ, ಜೋಯೆಲ್ ನಿವಾಸ್, ಬಸವರಾಜು, ಮಹದೇವ್, ಜಯಕರ್ನಾಟಕ ಸಂಘದ ಅಧ್ಯಕ್ಷ ಪ್ರಭುಸ್ವಾಮಿ, ಹೋರಾಟಗಾರ ಶೇಖರ್ ಬುದ್ಧ, ನೀಲಯ್ಯ, ಗ್ಯಾಬ್ರಿಯಲ್, ಇರ್ಫಾನ್, ದಶರಥ, ದಿಲೀಪ್, ಶಿವರಾಜು, ಶಿವಮ್ಮ, ಶಾರದಾ, ಪುಟ್ಟಗೌರಿ, ಯಶೋದಾ, ಪುಟ್ಟಮ್ಮ, ರಾಣಿ ಸೇರಿದಂತೆ ನೂರಾರು ಮಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.