ADVERTISEMENT

ಎಸ್‌ಸಿ, ಎಸ್‌ಟಿ ವಿರೋಧಿ ನೀತಿ: ಕೇಂದ್ರ, ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 11:18 IST
Last Updated 19 ಫೆಬ್ರುವರಿ 2021, 11:18 IST
ಅಂಬೇಡ್ಕರ್‌ ಸೇನೆಯ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಪ್ರತಿಭಟನೆ ನಡೆಸಿದರು
ಅಂಬೇಡ್ಕರ್‌ ಸೇನೆಯ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯಗಳ ಬಗ್ಗೆ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿ ಅಂಬೇಡ್ಕರ್ ಸೇನೆಯ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಅಲ್ಲಿಂದ ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು. ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಅಂಬೇಡ್ಕರ್‌ ಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ಪ್ರಸಾದ್ ಅವರು ಮಾತನಾಡಿ, ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂವಿಧಾನಾತ್ಮಕ ಹಕ್ಕುಗಳು ಹಾಗೂ ಯೋಜನೆಗಳನ್ನು ಹಂತ ಹಂತವಾಗಿ ತೆಗೆದು ಹಾಕಲು ಷಡ್ಯಂತ್ರಗಳನ್ನು ರೂಪಿಸಿ ಕಾಯ್ದೆಗಳಿಗೆ ತಿದ್ದುಪಡಿ ತಂದು ಪರಿಶಿಷ್ಟರನ್ನು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸೌಲಭ್ಯಗಳಿಂದ ವಂಚಿಸುತ್ತಿವೆ’ ಎಂದು ಆರೋಪಿಸಿದರು.

ADVERTISEMENT

‘2018–19ನೇ ಸಾಲಿನಿಂದ ಮ್ಯಾನೇಜ್ಮೆಂಟ್ ಕೋಟಾದಡಿಯಲ್ಲಿ ಪ್ರವೇಶಾತಿ ಪಡೆದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಕಾಲೇಜು ಶುಲ್ಕ ಹಾಗೂ ವಿದ್ಯಾರ್ಥಿವೇತನವನ್ನು ರದ್ದುಪಡಿಸಲಾಗಿದೆ. ರಾಜ್ಯ ಸರ್ಕಾರ ಎಸ್‌ಇಪಿ ಹಾಗೂ ಟಿಎಸ್‌ಪಿ ಕಾಯ್ದೆಗೆ ತಿದ್ದುಪಡಿ ಮಾಡಿ ಸೆಕ್ಷನ್ 7(ಡಿ) ಅಳವಡಿಸಿ ಬಜೆಟ್‌ನಲ್ಲಿ ಪರಿಶಿಷ್ಟರ ಕಾರ್ಯಕ್ಕೆ ಮೀಸಲಾಗಿರಿಸಿರುವ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಪರಿಶಿಷ್ಟರಿಗೆ ಮೀಸಲಾದ ಸಾವಿರಾರು ಕೋಟಿ ರೂಪಾಯಿ ಹಣ ಅನ್ಯ ಕಾರ್ಯಗಳಿಗೆ ದುರುಪಯೋಗವಾಗುತ್ತಿದೆ’ ಎಂದು ದೂರಿದರು.

‘ಸರ್ಕಾರಿ ನೇಮಕಾತಿಗಳಲ್ಲಿ ಮೀಸಲಾತಿಯನ್ನು ತೆಗೆದುಹಾಕಬೇಕು ಎಂಬ ಹುನ್ನಾರದಿಂದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಲಾಗುತ್ತಿದೆ. ಈಗಾಗಲೇ ಹಲವು ಬ್ಯಾಂಕುಗಳು, ರೈಲ್ವೆ, ವಿದ್ಯುತ್ ಪೂರೈಕೆ ಕಂಪನಿಗಳು, ಎಲ್‌ಐಸಿ, ಬಿಎಸ್‌ಎನ್‌ಎಲ್ ಹಾಗೂ ವಿಮಾನಯಾನ ಸಂಸ್ಥೆಗಳನ್ನು ಹಂತ ಹಂತವಾಗಿ ಖಾಸಗೀಕರಣಗೊಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

ಹೊಸ ಶಿಕ್ಷಣ ನೀತಿ 2020 ಅನ್ನು ಜಾರಿಗೆ ತರುವ ಮೂಲಕ ಪರಿಶಿಷ್ಟರ ಶಿಕ್ಷಣ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ದಲಿತರ ಪರ ಧ್ವನಿ ಎತ್ತುವ ನೂರಾರು ವಿಚಾರವಾದಿಗಳು ಹಾಗೂ ಅಂಬೇಡ್ಕರ್ ವಾದಿಗಳನ್ನು ಯುಎಪಿಎ ಕಾಯ್ದೆಯಡಿ ಬಂಧಿಸಿ ಜಾಮೀನು ಸಿಗದಂತೆ ಷಡ್ಯಂತರ ರೂಪಿಸಿ ಅವರು ಜೈಲುಗಳಲ್ಲಿ ಕೊಳೆಯುವಂತೆ ಮಾಡಲಾಗಿದೆ ಎಂದು ಅವರು ಆಪಾದಿಸಿದರು.

’ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ ಮೂಲಕದಲಿತರ ಆಹಾರದ ಹಕ್ಕನ್ನು ಕಸಿಯಲಾಗಿದೆ. ರಾಜ್ಯದಲ್ಲಿ 70 ಸಾವಿರಕ್ಕೂ ಅಧಿಕ ಎಸ್‌ಸಿ, ಎಸ್‌ಟಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡದೆ ಸಾವಿರಾರು ನಿರುದ್ಯೋಗಿಗಳನ್ನು ವಂಚಿಸಲಾಗಿದೆ. ಭೂಸುಧಾನರಣಾ ಕಾಯ್ದೆಗೆ ತಿದ್ದುಪಡಿ ಮಾಡಿ ಪಿಟಿಸಿಎಲ್ ಕಾಯ್ದೆಯನ್ನು ದುರ್ಬಲಗೊಳಿಸಿ ಪರಿಶಿಷ್ಟರ ಅಲ್ಪ ಸ್ವಲ್ಪ ಜಮೀನುಗಳನ್ನು ಶ್ರೀಮಂತರು ಸುಲಭವಾಗಿ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯ ಪಡೆಯುವ ಫಲಾನುಭವಿಗಳಿಗೆ ನೀಡಲಾಗುವ ಸಹಾಯಧನವನ್ನು ₹1ಲಕ್ಷಕ್ಕೆ ಸೀಮಿತಗೊಳಿಸಲಾಗಿದೆ’ ಎಂದರು.

‘ಪರಿಶಿಷ್ಟರ ಗುತ್ತಿಗೆದಾರರಿಗೆ ₹50 ಲಕ್ಷವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿ ತಪ್ಪಿಸುವುದಕ್ಕಾಗಿ ಟೆಂಡರ್ ಕರೆಯದೆ ₹2 ಕೋಟಿವರೆಗಿನ ಕಾಮಗಾರಿಗಳನ್ನು ನೇರವಾಗಿ ನಿರ್ಮಿತಿ ಕೇಂದ್ರಕ್ಕೆ ವಹಿಸುವ ನಿಯಮಗಳನ್ನು ಜಾರಿಗೆ ತರಲಾಗಿದೆ. ಹೀಗೆ ಪರಿಶಿಷ್ಟರ ಅಭಿವೃದ್ಧಿಗೆ ಪೂರಕವಾಗಿರುವ ಹಲವಾರು ಕಾಯ್ದೆಗಳು, ನಿಯಮಗಳನ್ನು ತಿದ್ದುಪಡಿ ಮಾಡಲಾಗುತ್ತಿದೆ. ಈ ಎಲ್ಲ ಅನ್ಯಾಯಗಳ ವಿರುದ್ಧ ಗಟ್ಟಿಧ್ವನಿ ಎತ್ತಬೇಕಾಗಿರುವ ಪರಿಶಿಷ್ಟ ಜನಪ್ರತಿನಿಧಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ’ ಎಂದು ಟೀಖಿಸಿದರು.

ಅಂಬೇಡ್ಕರ್ ಸೇನೆಯ ಜಿಲ್ಲಾ ಗೌರವಾಧ್ಯಕ್ಷ ಉಮೇಶ್‌ಕುದರ್, ಕಾರ್ಯಾಧ್ಯಕ್ಷ ಅಮಚವಾಡಿ ಶಿವಣ್ಣ, ಮುಖಂಡ ಮಹೇಶ್‌ಕುದರ್, ತಾಲ್ಲೂಕು ಅಧ್ಯಕ್ಷ ನಲ್ಲೂರು ಮಹದೇವಸ್ವಾಮಿ, ಟೌನ್ ಅಧ್ಯಕ್ಷ ಮೋಹನ್, ಕೊಳ್ಳೇಗಾಲ ತಾಲ್ಲೂಕು ಅಧ್ಯಕ್ಷ ತೇಜು, ನಗರಸಭಾ ಸದಸ್ಯ ಎಂ.ಮಹೇಶ್, ದಲಿತ ಮುಖಂಡರಾದ ಸಿ.ಎಂ.ಕೃಷ್ಣಮೂರ್ತಿ, ಕೆ.ಎಂ.ನಾಗರಾಜು, ಆಲೂರು ನಾಗೇಂದ್ರ, ಟೈಲ್ಸ್ ಗುಂಡಣ್ಣ, ಸ್ವಾಮಿ, ಗೌತಮ್, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.