ADVERTISEMENT

ಕೇಂದ್ರ ಸರ್ಕಾರ, ಐಟಿ ವಿರುದ್ಧ ಪೊರಕೆ ಚಳವಳಿ

ಪ್ಯಾನ್‌ಕಾರ್ಡ್‌ಗೆ ಆಧಾರ್ ಜೋಡಣೆಗೆ ₹1000 ಸಾವಿರ ದಂಡಕ್ಕೆ ಖಂಡನೆ‌

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 5:19 IST
Last Updated 30 ಮಾರ್ಚ್ 2023, 5:19 IST
ಪ್ಯಾನ್‌ ಕಾರ್ಡ್‌ಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡಲು ₹1000 ದಂಡ ವಿಧಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಬುಧವಾರ ಚಾಮರಾಜನಗರದಲ್ಲಿ ಪೊರಕೆ ಚಳವಳಿ ನಡೆಸಿದರು
ಪ್ಯಾನ್‌ ಕಾರ್ಡ್‌ಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡಲು ₹1000 ದಂಡ ವಿಧಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಬುಧವಾರ ಚಾಮರಾಜನಗರದಲ್ಲಿ ಪೊರಕೆ ಚಳವಳಿ ನಡೆಸಿದರು   

ಚಾಮರಾಜನಗರ: ಪ್ಯಾನ್‌ಕಾರ್ಡ್‌ಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಲು ಕೇಂದ್ರ ಸರ್ಕಾರ, ಐಟಿ ಇಲಾಖೆ ₹1,000 ದಂಡ ವಿಧಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ನಗರದಲ್ಲಿ ಬುಧವಾರ ಪೊರಕೆ ಚಳವಳಿ ನಡೆಸಿದರು.

ಚಾಮರಾಜೇಶ್ವರ ಉದ್ಯಾನದ ಮುಂಭಾಗದಲ್ಲಿ ಸೇರಿದ ಪ್ರತಿಭಟನಕಾರರು, ಪೊರಕೆ ಹಿಡಿದು, ತಮಟೆ ಹೊಡೆಯುತ್ತಾ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿ ಕೆಲಕಾಲ ರಾಷ್ಟ್ರೀಯ ಹೆದ್ದಾರಿ ತಡೆದು ಕೇಂದ್ರ ಸರ್ಕಾರ, ಆದಾಯ ತೆರಿಗೆ ಇಲಾಖೆ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಕರ್ನಾಟಕ ಸೇನಾಪಡೆಯ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ‘ಕೇಂದ್ರ ಸರ್ಕಾರ ಮತ್ತು ಆದಾಯ ತೆರಿಗೆ ಇಲಾಖೆಯು ಪ್ಯಾನ್‌ ಕಾರ್ಡ್‌ಗೆ ಆಧಾರ್‌ ಜೋಡಣೆ ಮಾಡಲು ಮಾರ್ಚ್‌ 31ರವರೆಗೆ ಗಡುವು ನೀಡಿದೆ. ಅಲ್ಲಿಯವರೆಗೂ ಜೋಡಣೆ ಮಾಡದಿದ್ದರೆ, ಈಗ ಇರುವ ₹1000 ದಂಡವನ್ನು ₹10 ಸಾವಿರ ಮಾಡಲಾಗುವುದು ಎಂದು ಹೇಳುತ್ತಿದೆ. ಇದು ಖಂಡನೀಯ’ ಎಂದರು.

ADVERTISEMENT

‘ಈಗ ಜೋಡಣೆಗೆ ದಿನಾಂಕ ವಿಸ್ತರಿಸಿದ್ದರೂ, ₹1000 ದಂಡ ಮುಂದುವರಿದಿದೆ. ದೇಶದಲ್ಲಿ ಬಡಜನರವಿದ್ದು ಕೂಲಿ ಮಾಡಿಕೊಂಡು ಜೀವನ ಸಾಗುತ್ತಿದ್ದಾರೆ. ಕಾರ್ಮಿಕರು ಇದ್ದಾರೆ. ಜನತೆ ಎಲ್ಲಿಂದ ಹಣ ತಂದು ಕಟ್ಟಬೇಕು? ಜನರು ನಿರೀಕ್ಷೆ ಇಟ್ಟು ಕೊಟ್ಟ ಅಧಿಕಾರವನ್ನು ಬಿಜೆಪಿ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಜನರಿಗೆ ಅನುಕೂಲವಾಗುವ ಒಂದೇ ಒಂದು ಕೆಲಸವನ್ನು ಮಾಡುತ್ತಿಲ್ಲ. ಆಹಾರ ಪದಾರ್ಥಗಳ ಬೆಲೆ ಹೆಚ್ಚಳ, ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಳ, ಪೆಟ್ರೋಲ್ ಬೆಲೆ ಹೆಚ್ಚಳ ಮಾಡತ್ತಲೇ ಬಂದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಇದೀಗ ಪ್ಯಾನ್‌ ಕಾರ್ಡ್‌ಗೆ ಆಧಾರ್ ಜೋಡಣೆ ಮಾಡಲು ಜನಸಾಮಾನ್ಯರಿಗೆ ₹1000 ದಂಡ ಹಾಕುವುದು ಸರಿಯಲ್ಲ. ಇಂತಹ ಜನ ವಿರೋಧಿ ನೀತಿಯನ್ನು ಕೂಡಲೇ ಕೈ ಬಿಡಬೇಕು ಇಲ್ಲದಿದ್ದರೆ ರಾಜ್ಯ, ದೇಶದಾದ್ಯಂತ ಜನಾಂದೋಲನ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಚಾ.ವೆಂ.ರಾಜ್ ಗೋಪಾಲ್, ನಿಜಧ್ವನಿ ಗೋವಿಂದರಾಜು, ಕಂಡಕ್ಟರ್ ಚಾ.ಸಿ.ಸೋಮನಾಯಕ
ಚಾ.ರಾ.ಕುಮಾರ್, ಚಾ.ಹ.ಶಿವರಾಜ್, ಲಿಂಗರಾಜು, ಚಾ.ಹ.ರಾಮು, ಮೂರ್ತಿ, ಪಣ್ಯದಹುಂಡಿ ರಾಜು, ಚಾ.ಸಿ.ಸಿದ್ದರಾಜು, ಧನಂಜಯ್, ಶಿವಶಂಕರನಾಯಕ, ತಾಂಡವಮೂರ್ತಿ, ನಂಜುಂಡಸ್ವಾಮಿ, ಕೃಷ್ಣಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.