ADVERTISEMENT

ಚಾಮರಾಜನಗರ: ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಮಹಿಳೆಯರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 11:17 IST
Last Updated 19 ಡಿಸೆಂಬರ್ 2020, 11:17 IST
ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ವುಮೆನ್ ಇಂಡಿಯಾ ಮೂವ್‌ಮೆಂಟ್ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು
ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ವುಮೆನ್ ಇಂಡಿಯಾ ಮೂವ್‌ಮೆಂಟ್ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು   

ಚಾಮರಾಜನಗರ:ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ವುಮೆನ್ ಇಂಡಿಯಾ ಮೂವ್‌ಮೆಂಟ್ (ವಿಮ್‌) ಕಾರ್ಯಕರ್ತೆಯರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಇರುವ ಲಾರಿ ನಿಲ್ದಾಣದಲ್ಲಿ ಸಮಾವೇಶಗೊಂಡ ಪ್ರತಿಭಟನಕಾರರು, ಅಲ್ಲಿಂದ ಭುವನೇಶ್ವರಿ ವೃತ್ತದ ವರೆಗೆ ಮೆರವಣಿಗೆಯಲ್ಲಿ ತೆರಳಿದರು. ವೃತ್ತದಲ್ಲಿ ಸೌದೆ ಒಲೆಗೆ ಬೆಂಕಿ ಹಾಕಿ, ಖಾಲಿ ಸಿಲಿಂಡರ್‌ಗಳನ್ನು ಇರಿಸಿ ಪ್ರತಿಭಟನೆ ನಡೆಸಿದರು. ಸ್ವಲ್ಪ ಹೊತ್ತು ಮಾನವ ಸರಪಣಿ ನಿರ್ಮಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದವುಮೆನ್ ಇಂಡಿಯಾ ಮೂವ್‌ಮೆಂಟ್‌ನ ಜಿಲ್ಲಾ ಘಟಕದ ಅಧ್ಯಕ್ಷೆ ತೌಸಿಯಾ ಬಾನು ಅವರು, ‘ಅಡುಗೆ ಅನಿಲ ಈಗಾಗಲೇ ದುಬಾರಿಯಾಗಿದೆ. ಹಾಗಿದ್ದರೂ, ಕೇಂದ್ರ ಸರ್ಕಾರ ಈ ತಿಂಗಳಲ್ಲಿ ಎರಡು ಬಾರಿ ಅಡುಗೆ ಅನಿಲ ಬೆಲೆ ಏರಿಕೆ ಮಾಡಿದೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ’ ಎಂದರು.

ADVERTISEMENT

‘ಉಜ್ವಲ ಯೋಜನೆಯಡಿ ಉಚಿತವಾಗಿ ಸಿಲಿಂಡರ್ ನೀಡುತ್ತೇವೆ ಎಂದು ನಾಟಕವಾಡುವ ಸರ್ಕಾರ, ಬಡವರ ಕಿಸೆಗೆ ಕತ್ತರಿ ಹಾಕಿ ತನ್ನ ಜೇಬು ತುಂಬಿಸಿಕೊಳ್ಳುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ದೇಶದಲ್ಲಿ ಬಡತನ, ನಿರುದ್ಯೋಗ ಹಿಂದೆಂದಿಗಿಂಗಲೂ ಭೀಕರವಾಗಿದೆ. ನೋಟು ನಿಷೇಧ, ಜಿಎಸ್‌ಟಿ, ಲಾಕ್‌ಡೌನ್ ಜನರನ್ನು ತೀವ್ರ ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಕೋವಿಡ್ ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸುವ ಬದಲು ಕೇಂದ್ರ, ರಾಜ್ಯ ಸರ್ಕಾರಗಳು ಜನ ವಿರೋಧಿ, ರೈತ ವಿರೋಧಿ ಮಸೂದೆಗಳನ್ನು ಜಾರಿಗೊಳಿಸಿವೆ’ ಎಂದು ಹೇಳಿದರು.

‘ದಿನ ಬಳಕೆಯ ವಸ್ತುಗಳ ಜೊತೆಗೆ ಇಂಧನ ಬೆಲೆಯೂ ಗಗನಕ್ಕೇರಿದೆ. ಅಡುಗೆ ಅನಿಲ ಬೆಲೆ ಏರಿಕೆಯಿಂದ ಜನರನ್ನು ಬಾಣಲೆಯಿಂದ ಬೆಂಕಿಗೆ ಎಸೆದಂತಾಗಿದೆ. ಕೇಂದ್ರ ಸರ್ಕಾರವು ಮಹಿಳಾ ವಿರೋಧಿಯಾಗಿದ್ದು, ವುಮೆನ್ ಇಂಡಿಯಾ ಮೂವ್‌ಮೆಂಟ್ ವತಿಯಿಂದ ದೇಶಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ’ ಎಂದರು.

ರುಮಾನ ತಾಜ್, ರೇಷ್ಮಾಬಾನು, ಫೌಜಿಯಾ ಬಾನು, ನಿಲೂಫರ್, ಸುಮಾ ರಾಜೇಂದ್ರ, ನೂರ್ ಅಸ್ಮಾ, ಸುಮಯ, ಆಸೀಫಾ, ಸುಮೇರಾಬಾನು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.