ADVERTISEMENT

ಬೆಲೆಯೇರಿಕೆ ವಿರೋಧಿಸಿ ದಸಂಸ ಪ್ರತಿಭಟನೆ

ಕೇಂದ್ರ–ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 3:55 IST
Last Updated 1 ಅಕ್ಟೋಬರ್ 2021, 3:55 IST
ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ದಲಿತ ಸಂಘರ್ಷ ಸಮಿತಿಯ (ಡಿ.ಜಿ.ಸಾಗರ್‌ಬಣ) ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಗುರುವಾರ ಜಿಲ್ಲಾಡಳಿತದ ಭವನದ ಎದುರು ಪ್ರತಿಭಟನೆ ನಡೆಸಿದರು
ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ದಲಿತ ಸಂಘರ್ಷ ಸಮಿತಿಯ (ಡಿ.ಜಿ.ಸಾಗರ್‌ಬಣ) ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಗುರುವಾರ ಜಿಲ್ಲಾಡಳಿತದ ಭವನದ ಎದುರು ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ಅಗತ್ಯ ವಸ್ತುಗಳ ಬೆಲೆಯೇರಿಕೆ ಖಂಡಿಸಿ, ದಲಿತ ಸಂಘರ್ಷ ಸಮಿತಿಯ (ಡಿ.ಜಿ.ಸಾಗರ್‌ ಬಣ) ಪದಾಧಿಕಾರಿಗಳು, ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿತ ಭವನದ ಆವರಣದಲ್ಲಿ ಸೇರಿದ ಪ್ರತಿಭಟನಕಾರರು ಕೇಂದ್ರ–ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.

ದಸಂಸ ಜಿಲ್ಲಾ ಸಂಚಾಲಕ ಸಿ.ಎಂ.ಶಿವಣ್ಣ ಮಾತನಾಡಿ, ‘ಅಂತರರಾಷ್ಟ್ರೀಯ ಕಚ್ಚಾತೈಲದ ಬೆಲೆ ಬ್ಯಾರಲ್‌ಗೆ 100 ಡಾಲರ್‌ ಇದ್ದಾಗ, ಪೆಟ್ರೋಲ್ ದರ ಲೀಟರ್‌ಗೆ ₹ 72 ಇತ್ತು. ಕಚ್ಚಾ ತೈಲದ ಬೆಲೆ ಈಗ ಕುಸಿದಿದೆ. ಹಾಗಿದ್ದರೂ ಪೆಟ್ರೋಲ್‌ ಬೆಲೆ ಶತಕ ದಾಟಿದ್ದು, ಡೀಸೆಲ್‌ ಬೆಲೆಯೂ ಶತಕದ ಆಸುಪಾಸಿನಲ್ಲಿದೆ. ಇದರ ಜೊತೆಗೆ ಇತರ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಾಗಿ ಜನ ಸಾಮಾನ್ಯರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಅಡುಗೆ ಅನಿಲ ಬೆಲೆ ಸಿಲಿಂಡರ್‌ಗೆ ₹ 1000 ತಲುಪಿದ್ದು, ಮಹಿಳೆಯರು ಅಡುಗೆ ಅನಿಲದ ಬದಲಿಗೆ ಮತ್ತೆ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡಲು ಆರಂಭಿಸಿದ್ದಾರೆ. ಜನರ ಹಿತ ಕಾಪಾಡಬೇಕಾದ ಸರ್ಕಾರ ಜನರನ್ನು ಸಂಕಷ್ಟದ ಸುಳಿಯಲ್ಲಿ ಸಿಲುಕಿಸಲು ಮುಂದಾಗಿದೆ’ ಎಂದರು.

ಕೇಂದ್ರ ಸರ್ಕಾರ ಕೂಡಲೇ ಇಂಧನ ಬೆಲೆ ಹಾಗೂ ಅಗತ್ಯ ವಸ್ತುಗಳ ಬೆಲೆ ಇಳಿಸಬೇಕು ಎಂದು ಆಗ್ರಹಿಸಿದರು.

ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ಗು.ನಾಗರಾಜು, ದಸಂಸ (ಅಂಬೇಡ್ಕರ್ ವಾದ) ಮೈಸೂರು ವಿಭಾಗೀಯ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು, ಉಮೇಶ್ ಕುಮಾರ್, ಆಟೊ ಉಮೇಶ್, ಬಂಗಾರಸ್ವಾಮಿ, ನಾಗರಾಜು, ಪ್ರದೀಪ್, ಮಂಜೇಶ್, ಮಹದೇವಸ್ವಾಮಿ, ಸಿದ್ದರಾಮಯ್ಯ, ಸುಂದರ್, ಚಾ.ಸಿ.ಸಿದ್ದರಾಜು, ಮಲ್ಲಿಕಾರ್ಜುನ್, ಶೇಖರ್, ಶಿವು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.