ADVERTISEMENT

ಚಾಮರಾಜನಗರ: 19ಕ್ಕೆ ಮೈಸೂರಿನ ರೇಷ್ಮೆ ಮಾರುಕಟ್ಟೆಗೆ ಮುತ್ತಿಗೆ

ಸಾಮೂಹಿಕ ನಾಯಕತ್ವದಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯಿಂದ ಹೋರಾಟ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2024, 3:33 IST
Last Updated 16 ಏಪ್ರಿಲ್ 2024, 3:33 IST
ಹೊನ್ನೂರು ಪ್ರಕಾಶ್‌
ಹೊನ್ನೂರು ಪ್ರಕಾಶ್‌   

ಚಾಮರಾಜನಗರ: ರೇಷ್ಮೆ ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಸಾಮೂಹಿಕ ನಾಯಕತ್ವದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಆಶ್ರಯದಲ್ಲಿ ರೇಷ್ಮೆ ಬೆಳೆಗಾರರು ಇದೇ 19ರಂದು ಮೈಸೂರಿನ ರೇಷ್ಮೆ ಮಾರುಕಟ್ಟೆಗೆ ಮುತ್ತಿಗೆ ಹಾಕಲಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಮುಖಂಡ ಹೊನ್ನೂರು ಪ್ರಕಾಶ್‌, ‘ಎರಡೂ ಜಿಲ್ಲೆಗಳಲ್ಲಿ ರೇಷ್ಮೆ ಇಲಾಖೆಯ ಅಧಿಕಾರಿಗಳು ಮತ್ತು ರೀಲರ್‌ಗಳು ಬೆಳೆಗಾರರ ರಕ್ತ ಹೀರುತ್ತಿದ್ದಾರೆ. ಗೂಡಿನ ಗುಣಮಟ್ಟ ವೈಜ್ಞಾನಿಕವಾಗಿ ನಿರ್ಧಾರವಾದ ಮೇಲೆ ಆನ್‌ಲೈನ್‌ ದರದ ಪ್ರಕಾರ ದರ ನಿಗದಿ ಆಗುತ್ತಿಲ್ಲ. ಅಧಿಕಾರಿಗಳು ದಲ್ಲಾಳಿಗಳ ಜತೆ ಶಾಮೀಲಾಗಿ ದರ ನಿಗದಿ ಮಾಡುತ್ತಿದ್ದಾರೆ’ ಎಂದು ದೂರಿದರು. 

‘ರಾಮನಗರ ಮಾರುಕಟ್ಟೆಯಲ್ಲಿ ಅತಿ ಕಳಪೆ ಗೂಡಿಗೆ ನಿರ್ಧಾರವಾದ ಬೆಲೆಗಿಂತ ಕಡಿಮೆ ಬೆಲೆಯನ್ನು ಮೈಸೂರಿನಲ್ಲಿ ಉತ್ತಮ ಗೂಡುಗಳಿಗೆ ನಿಗದಿ ಮಾಡುತ್ತಿದ್ದಾರೆ. ಮೊದಲನೇ ಹರಾಜು ದರಕ್ಕಿಂತ ಎರಡನೇ ಹರಾಜು ದರವು ಕಡಿಮೆ ಇರುತ್ತದೆ. ಇದರಿಂದ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಇದನ್ನೆಲ್ಲ ಖಂಡಿಸಿ ಮತ್ತು ರೀಲರ್‌ಗಳ ಜೊತೆ ಕೈಜೋಡಿಸಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ 19ರಂದು ಮೈಸೂರಿನ ರೇಷ್ಮೆ ಮಾರುಕಟ್ಟೆಗೆ ಮುತ್ತಿಗೆ ಹಾಕಲಿದ್ದೇವೆ. ರೇಷ್ಮೆ ಬೆಳೆಗಾರರಿಗೆ ತೊಂದರೆಯಾಗದಂತೆ ಹೋರಾಟ ನಡೆಸಲಿದ್ದೇವೆ’ ಎಂದರು. 

ADVERTISEMENT

‘ಪ್ರತಿಭಟನಾ ಸ್ಥಳಕ್ಕೆ ರೇಷ್ಮೆ ಸಚಿವ ಕೆ.ವೆಂಕಟೇಶ್ ಬಂದು ರೈತರ ಸಮಸ್ಯೆಗಳನ್ನು ಆಲಿಸಬೇಕು. ಇಲ್ಲದಿದ್ದರೆ ಮರುದಿನ (ಏ.20) ಮೈಸೂರಿನ ಎಪಿಎಂಸಿಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು. ಆಗಲೂ ನ್ಯಾಯ ಸಿಗದೆ ಹೋದರೆ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ರೇಷ್ಮೆ ಬೆಳೆಗಾರರು ಚುನಾವಣಾ ಬಹಿಷ್ಕಾರ ಹಾಕಲಿದ್ದಾರೆ’ ಎಂದು ಎಚ್ಚರಿಸಿದರು. 

ರೈತಸಂಘದ ಶ್ರೀನಿವಾಸ್, ಅಂಬಳೆ ಶಿವಕುಮಾರ್, ತಾಲ್ಲೂಕು ಸಂಚಾಲಕ ಮಲ್ಲೇಶ್, ಕಾರ್ಯದರ್ಶಿ ಮಣಿಕಂಠ, ಸದಸ್ಯ ಯೋಗೇಶ್ ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.