ಚಾಮರಾಜನಗರ: ‘ಅಪ್ಪು ನಿನಗೆ ಐವತ್ತು ವರ್ಷವಾಯ್ತಂತೆ, ಚೆನ್ನಾಗಿದ್ದೀಯಾ ಮಗನೇ, ಒಂದ್ ಸಲ ಬಂದು ನನ್ನನ್ನು ನೋಡ್ಕಂಡು ಹೋಗು ಕಂದಾ, ಕಣ್ತುಂಬ ನೋಡಿಕೊಳ್ತೀನಿ...
–ಹೀಗೆ, ನಟ ಪುನೀತ್ ರಾಜ್‌ಕುಮಾರ್ ಅವರನ್ನು ಕಾಣುವ ಅತೀವ ಹಂಬಲ ವ್ಯಕ್ತಪಡಿಸಿದ್ದ ಪ್ರೀತಿಯ ಸೋದರತ್ತೆ ನಾಗಮ್ಮನವರ ಆಸೆ ಕೊನೆಗೂ ಈಡೇರಲಿಲ್ಲ.
‘ಇಂದಲ್ಲ, ನಾಳೆ ಅಪ್ಪು ಬರುತ್ತಾನೆ ಎಂದು ಕಾದು ಕುಳಿತಿದ್ದ 94 ವರ್ಷದ ಹಿರಿಯ ಜೀವ ನಾಗಮ್ಮ ಶುಕ್ರವಾರ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ತಾಳವಾಡಿ ತಾಲ್ಲೂಕಿನ ದೊಡ್ಡಗಾಜನೂರಿನಲ್ಲಿರುವ ತೋಟದ ಮನೆಯಲ್ಲಿ ವಿಧಿವಶರಾಗಿದ್ದಾರೆ.
ಅಪ್ಪು ಸಾವಿನ ಸುದ್ದಿಯೇ ತಿಳಿದಿರಲಿಲ್ಲ:
ಸಹೋದರ ಡಾ.ರಾಜಕುಮಾರ್ ಕುಟುಂಬದ ಮೇಲೆ ಅತಿಯಾದ ಪ್ರೀತಿ ಹೊಂದಿದ್ದ ನಾಗಮ್ಮನವರಿಗೆ ಪುನೀತ್ ಕಂಡರೆ ಒಂದು ಹಿಡಿಯಷ್ಟು ಹೆಚ್ಚು ಪ್ರೀತಿ. ಅಪ್ಪು ಕೂಡಾ ಸಿನಿಮಾ ಚಿತ್ರೀಕರಣಕ್ಕಾಗಿ ಜಿಲ್ಲೆಗೆ ಬಂದಾಗಲೆಲ್ಲ ಸೋದರತ್ತೆ ಭೇಟಿಯಾಗಿ ಕುಶಲೋಪರಿ ನಡೆಸುತ್ತಿದ್ದರು. ಸಲುಗೆಯಿಂದ ಕಾಲ ಕಳೆಯುತ್ತ ನಾಗಮ್ಮನವರ ಕೈರುಚಿ ಸವಿಯುತ್ತಿದ್ದರು.
ಅತಿಯಾದ ಪ್ರೀತಿ ಹೊಂದಿದ್ದರಿಂದ ಸೋದರಳಿಯನ ಸಾವಿನ ಸುದ್ದಿ ಕೇಳಿ ಆಘಾತ ಆಗಬಹುದು ಎಂಬ ಆತಂಕದಿಂದ ಅಪ್ಪು ನಿಧನದ ವಿಚಾರವನ್ನು ಕುಟುಂಬದವರು ನಾಗಮ್ಮ ಅವರಿಗೆ ತಿಳಿಸಿರಲಿಲ್ಲ. ಬದುಕಿದ್ದಷ್ಟು ದಿನ ಅಪ್ಪು ನಿಧನದ ಮಾಹಿತಿ ತಿಳಿಯಲಿಲ್ಲ.
‘ನೆನಪಾದಾಗಲೆಲ್ಲ ಒಂದು ಸಲ ಮನೆಗೆ ಬಂದುಹೋಗಲು ಅಪ್ಪುಗೆ ಹೇಳಿ ಎಂದು ಕುಟುಂಬ ಸದಸ್ಯರಿಗೆ ನಾಗಮ್ಮ ಬೇಡಿಕೆ ಇರಿಸುತ್ತಿದ್ದರು. ಈಚೆಗೆ ವಿಡಿಯೊದಲ್ಲೂ ಮನದಾಳದ ಇಂಗಿತ ವ್ಯಕ್ತಪಡಿಸಿದ್ದರು. ಚಿತ್ರೀಕರಣ, ವಿದೇಶ ಪ್ರವಾಸದಲ್ಲಿರುವುದರಿಂದ ಬಿಡುವು ಸಿಗುತ್ತಿಲ್ಲ ಎಂದು ಕುಟುಂಬದವರು ಸಮಾಧಾನಪಡಿಸುತ್ತಿದ್ದರು’ ಎಂದು ಡಾ.ರಾಜ್ ಕುಟುಂಬದ ಆಪ್ತ ರಾಮಮೂರ್ತಿ ಹೇಳಿದರು.
2017ರಲ್ಲಿ ತಾಯಿ ಪಾರ್ವತಮ್ಮ ನಿಧನರಾದ ಬಳಿಕ ಅಪ್ಪು, ನಾಗಮ್ಮ ಅವರಲ್ಲಿ ತಾಯಿಯ ಪ್ರೀತಿ ಕಾಣುತ್ತಿದ್ದರು. ಹಿಂದೆ ಮದ್ರಾಸ್, ಬೆಂಗಳೂರಿನಲ್ಲಿದ್ದ ಡಾ.ರಾಜಕುಮಾರ್ ನಿವಾಸದಲ್ಲಿ ಕೆಲಕಾಲ ತಂಗಿದ್ದರು, ಮಕ್ಕಳ ಜೊತೆಗೆ ಡಾ.ರಾಜ್ ಅವರ ಮಕ್ಕಳ ಪೋಷಣೆ ಮಾಡಿದ್ದರು.
‘ನಂತರದ ದಿನಗಳಲ್ಲಿ ವಯೋಸಹಜ ಅನಾರೋಗ್ಯದಿಂದ ದೊಡ್ಡ ಗಾಜನೂರಿನ ತೋಟದ ಮನೆಯಲ್ಲಿ ಉಳಿದುಕೊಂಡಿದ್ದರು. ಅಪ್ಪು ಬರುವ ನಿರೀಕ್ಷೆಯಲ್ಲಿ ದಿನ ದೂಡುತ್ತಿದ್ದ ಅವರ ಅಂತಿಮ ಆಸೆ ಕೊನೆಗೂ ಈಡೇರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು ರಾಮಮೂರ್ತಿ.
ಡಾ.ರಾಜ್ ಸಹೋದರಿ ನಾಗಮ್ಮ ನಿಧನ
ಚಾಮರಾಜನಗರ: ನಟ ಡಾ.ರಾಜಕುಮಾರ್ ಅವರ ಸಹೋದರಿ ನಾಗಮ್ಮ (94) ಶುಕ್ರವಾರ ತಾಳವಾಡಿ ತಾಲ್ಲೂಕಿನ ದೊಡ್ಡ ಗಾಜನೂರಿನಲ್ಲಿ ನಿಧನರಾದರು. ಮೃತರಿಗೆ ನಾಲ್ವರು ಪುತ್ರರು ಇಬ್ಬರು ಪುತ್ರಿಯರಿದ್ದಾರೆ. ವಯೋಸಹಜ ಅನಾರೋಗ್ಯವಿದ್ದ ಅವರು ತೋಟದ ಮನೆಯಲ್ಲಿ ವಾಸವಿದ್ದರು. ಶನಿವಾರ ಅಂತ್ಯಕ್ರಿಯೆ ನಡೆಯಲಿದ್ದು ರಾಜ್ ಕುಟುಂಬದವರು ಪಾಲ್ಗೊಳ್ಳಲಿದ್ದಾರೆ. ನಟರಾದ ಶಿವರಾಜ ಕುಮಾರ್ ಪುನೀತ್ ರಾಜಕುಮಾರ್ ಚಾಮರಾಜನಗರಕ್ಕೆ ಬಂದಾಗಲೆಲ್ಲ ಸೋದರತ್ತೆ ಭೇಟಿಯಾಗಿ ಕುಶಲೋಪರಿ ನಡೆಸುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.