ADVERTISEMENT

ಕ್ರೀಡಾ ಸಾಧಕ ಈ ಲ್ಯಾಬ್‌ ಟೆಕ್ನೀಶಿಯನ್‌

ಪವರ್‌ ಲಿಫ್ಟಿಂಗ್‌: ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಪ್ರವೀಣ್‌ ಕುಮಾರ್‌

ಮಹದೇವ್ ಹೆಗ್ಗವಾಡಿಪುರ
Published 7 ಅಕ್ಟೋಬರ್ 2022, 15:43 IST
Last Updated 7 ಅಕ್ಟೋಬರ್ 2022, 15:43 IST
ಪ್ರಶಸ್ತಿ, ಪ್ರಮಾಣಪತ್ರಗಳೊಂದಿಗೆ ಪ್ರವೀಣ್‌ ಕುಮಾರ್‌
ಪ್ರಶಸ್ತಿ, ಪ್ರಮಾಣಪತ್ರಗಳೊಂದಿಗೆ ಪ್ರವೀಣ್‌ ಕುಮಾರ್‌   

ಸಂತೇಮರಹಳ್ಳಿ:ಕುಸ್ತಿ, ದೇಹದಾರ್ಢ್ಯ, ವೇಟ್‌ ಲಿಫ್ಟಿಂಗ್‌ ಹಾಗೂ ಪವರ್ ಲಿಫ್ಟಿಂಗ್‌ ಕ್ರೀಡೆಯಲ್ಲಿ ಗುರುತಿಸಿಕೊಂಡಿರುವ ಜಿಲ್ಲಾ ಆರೋಗ್ಯ ಇಲಾಖೆ ನೌಕರ ಪ್ರವೀಣ್‌ ಕುಮಾರ್‌ ಅವರು ಪವರ್ ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸಂತೇಮರಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿಲ್ಯಾಬ್ ಟೆಕ್ನಿಷಿಯನ್ ಆಗಿರುವ ಪ್ರವೀಣ್‌, ಕ್ರೀಡಾಪಟುವಾಗಿ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡು ಇದೀಗ ರಾಷ್ಟ್ರಮಟ್ಟಕ್ಕೆ ಮುಂದಡಿ ಇಟ್ಟಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಪ್ರತಿವರ್ಷ ನಡೆಯುವ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಇವರು, ಪ್ರಶಸ್ತಿ ಬಹುಮಾನಗಳಿಲ್ಲದೇ ಹಿಂತಿರುಗುವುದಿಲ್ಲ! ಸಾರ್ವಜನಿಕವಾಗಿ ನಡೆಯುವ ಕ್ರೀಡಾಕೂಟಗಳಲ್ಲೂ ಪಾಲ್ಗೊಂಡು ಹಲವು ಬಹುಮಾನಗಳನ್ನು ಗಳಿಸಿದ್ದಾರೆ.

ADVERTISEMENT

ಈಚೆಗೆ ಬೆಂಗಳೂರಿನಲ್ಲಿ ನಡೆದ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪವರ್ ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಗಳಿಸಿ ಮುಂದಿನ ತಿಂಗಳು ದೆಹಲಿಯಲ್ಲಿ ನಡೆಯಲಿರು ರಾಷ್ಟ್ರ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವುದು ಅವರ ಇತ್ತೀಚೆಗಿನ ಕ್ರೀಡಾ ಸಾಧನೆ.

ಪ್ರವೀಣ್‌ ಅವರು ಹುಣಸೂರಿನವರು. ಅವರ ತಂದೆ ತಿಮ್ಮರಾಜ್ ಕುಸ್ತಿ ಪೈಲ್ವಾನ್ ಆಗಿದ್ದವರು. ತಂದೆಯ ಜೊತೆ ಗರಡಿ ಮನೆ ಹಾಗೂ ಕುಸ್ತಿಯಲ್ಲಿ ಭಾಗವಹಿಸುತ್ತಿದ್ದ ಇವರಿಗೆ ಬಾಲ್ಯದಲ್ಲೇ ಕುಸ್ತಿಯ ಮೇಲೆ ಆಸಕ್ತಿ. ತಂದೆಯವರ ಮಾರ್ಗದರ್ಶನದಲ್ಲಿ ಕುಸ್ತಿಯಲ್ಲಿ ಪಳಗಿದ ಇವರು, ವಿವಿಧ ಜಿಲ್ಲೆಗಳಲ್ಲಿ ಭಾಗವಹಿಸುತ್ತಾ ಬಂದಿದ್ದರು. ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಇವರು ಪ್ರೌಢಶಾಲೆ ಹಾಗೂ ಕಾಲೇಜು ಹಂತದಲ್ಲಿ ಗುಂಡು ಎಸೆತ, ಡಿಸ್ಕಸ್‌ ಎಸೆತ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಹಿರಿಯ ವಿದ್ಯಾರ್ಥಿಗಳನ್ನು ಸೋಲಿಸಿ ಚಾಂಪಿಯನ್ ಆಗಿದ್ದರು. ಜತೆಗೆ ಶಾಲಾ ಕಾಲೇಜಿನಿಂದ ಸ್ಪರ್ಧಿಸಿ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಕ್ರೀಡೆಯಲ್ಲಿ ಗುರುತಿಸಿಕೊಂಡಿದ್ದರು.

ಸರ್ಕಾರಿ ಕೆಲಸಕ್ಕೆ ಸೇರಿದ ನಂತರವೂ ತಮ್ಮ ಕ್ರೀಡಾ ಆಸಕ್ತಿಯನ್ನು ಅವರು ಬಿಡಲಿಲ್ಲ. ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಾಧನೆ ಮಾಡುತ್ತಾ ಬಂದಿದ್ದಾರೆ.2018ರಲ್ಲಿ ಚಂಡೀಗಡದಲ್ಲಿ ಸರ್ಕಾರಿ ನೌಕರರ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದಿದ್ದಾರೆ. ಜತೆಗೆ ವೇಟ್ ಲಿಫ್ಟಿಂಗ್‌ನಲ್ಲಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಕುಸ್ತಿಯಲ್ಲಿ ಮೈಸೂರು, ಮಂಡ್ಯ, ಬೆಂಗಳೂರು, ಶಿವಮೊಗ್ಗ, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಬಹುಮಾನಗಳನ್ನು ಗಳಿಸಿದ್ದಾರೆ.

ಹೆಚ್ಚಿನ ಸಹಕಾರದ ನಿರೀಕ್ಷೆಯಲ್ಲಿ...

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ನಡೆಯುವ ಕ್ರೀಡಾಕೂಟಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವ ಏಕ ಮಾತ್ರ ನೌಕರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರವೀಣ್‌ ಸಾಧನೆಯನ್ನು ಗುರುತಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರು ಗೌರವಿಸಿ ಸನ್ಮಾನಿಸಿದ್ದಾರೆ. ಜತೆಗೆ ವಿವಿಧ ಸಂಘ ಸಂಸ್ಥೆಯವರು ಗುರುತಿಸಿ ಗೌರವಿಸಿದ್ದಾರೆ.

‘ನನ್ನ ಈ ಸಾಧನೆಗೆ ನಮ್ಮ ಇಲಾಖೆಯ ಸಹೋದ್ಯೋಗಿಗಳು ಹಾಗೂ ವೈದ್ಯಾಧಿಕಾರಿಗಳು ಉತ್ತಮ ಸಹಕಾರ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸುವುದರಿಂದ ಆರೋಗ್ಯ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಸಹಕಾರ ನೀಡಬೇಕಾಗಿದೆ’ ಎಂದು ಪ್ರವೀಣ್ ಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.