ADVERTISEMENT

‘ಬೀಸುವಪದ’ಕ್ಕೆ ಕಿವಿಯಾದ ಚಿಣ್ಣರು

ಪೋಡು, ಹಳ್ಳಿಗಳಲ್ಲಿ ಅಜ್ಜಿಯರಿಂದ ಬದುಕಿನ ಪಾಠ; ಆರೋಗ್ಯದ ಊಟ

ನಾ.ಮಂಜುನಾಥ ಸ್ವಾಮಿ
Published 15 ಜನವರಿ 2022, 16:09 IST
Last Updated 15 ಜನವರಿ 2022, 16:09 IST
ಯಳಂದೂರು ತಾಲ್ಲೂಕಿನ ಪುರಾಣಿ ಪೋಡಿನ ಮಾದಮ್ಮ ಅವರು ರಾಗಿಕಲ್ಲು ಬೀಸುತ್ತಲೇ ಚಿಣ್ಣರಿಗೆ ‘ಬೀಸುವಪದ’ ಹೇಳಿಕೊಟ್ಟರು
ಯಳಂದೂರು ತಾಲ್ಲೂಕಿನ ಪುರಾಣಿ ಪೋಡಿನ ಮಾದಮ್ಮ ಅವರು ರಾಗಿಕಲ್ಲು ಬೀಸುತ್ತಲೇ ಚಿಣ್ಣರಿಗೆ ‘ಬೀಸುವಪದ’ ಹೇಳಿಕೊಟ್ಟರು   

ಯಳಂದೂರು:ಕಲ್ಲಮ್ಮ ತಾಯಿ ಮೆಲ್ಲಮ್ಮ ರಾಗಿಯ, ಜಲ್ಲಜಲ್ಲನೆ ಉದುರಮ್ಮ ನಾ ನಿನಗೆ,ಬೆಲ್ಲದಾರತಿಯ ಬೆಳಗೇನು...

ಬೀಸೋಕಲ್ಲಿನ ಹಾಡಿನ ಚಂದದ ಸಾಲು ಇದು. ಸಮೃದ್ಧ ಕನ್ನಡ ಜನಪದ ಸಾಹಿತ್ಯದ ಭಾಗ. ಹಳ್ಳಿ ಹೆಣ್ಣು ಮಕ್ಕಳು, ಅಜ್ಜಿಯರು ದೈನಂದಿನ ಕೆಲಸಗಳ ಭಾಗವಾಗಿ ಈಗಲೂ ರಾಗಿ ಬೀಸುತ್ತಹಾಡಾಗುತ್ತಾರೆ. ಹಿಟ್ಟನ್ನು ಹದ ಮಾಡುವಾಗ ಗುನುಗುತ್ತ ಕಂಡುಗ ರಾಗಿ ಬೀಸುತ್ತಾರೆ. ಇಂತಹ ತ್ರಿಪದಿ ಸಾಲುಗಳು ಈಗಲೂ ಪಠ್ಯದ ಭಾಗವಾಗಿವೆ.

ಆಧುನಿಕ ಪ್ರಪಂಚದಲ್ಲಿ ಬೀಸುವ ಕಲ್ಲಿನ ಬಳಕೆ ಕಡಿಮೆಯಾಗಿದ್ದರೂ,ತಾಲ್ಲೂಕಿನ ಕೆಲವು ಹಳ್ಳಿ, ಹಾಡಿ ಗುಡಿಸಲುಗಳಲ್ಲಿ ಈಗಲೂ ರಾಗಿಕಲ್ಲಿನ ಬೀಸುವ ಶಬ್ದ ಕೇಳಿ ಬರುತ್ತದೆ. ನಮ್ಮ ಬಾಲ್ಯ, ಅಪ್ಪ ಅಮ್ಮನನ್ನು ನೆನಪಿಸುವ, ತವರಿನ ಬಳುವಳಿಯಾಗಿ ಹೆಣ್ಣು ಮಕ್ಕಳಿಗೆ ನೀಡುತ್ತಿದ್ದ ಬೀಸೋಕಲ್ಲಿನ ಸ್ಥಾನವನ್ನುಇಂದು ಮಿಕ್ಸಿ, ಗ್ರೈಂಡರ್ ಆಕ್ರಮಿಸಿವೆ. ದೈಹಿಕ ಬಲವುಳ್ಳ ಸೊಸೆಯರು ಗಂಡನ ಮನೆಗೆ ಜೊತೆಯಾಗಿ ಬಂದ ಕಲ್ಲನ್ನು ಈಗಲೂ ಜತನದಿಂದ ಉಳಿಸಿಕೊಂಡಿದ್ದಾರೆ. ಮೊಮ್ಮಕ್ಕಳಿಗೂ ಇದರ ಮಹತ್ವವನ್ನು ಮನಗಾಣಿಸುತ್ತಿದ್ದಾರೆ.

ADVERTISEMENT

ಶಾಲೆಯ ಪಾಠ, ಪರೀಕ್ಷೆಗಳಲ್ಲಿ ಮುಳುಗಿರಬೇಕಾಗಿದ್ದ ಮಕ್ಕಳಿಗೆ ಕೋವಿಡ್‌ ಹಾವಳಿ, ಲಾಕ್‌ಡೌನ್‌, ಕರ್ಫ್ಯೂನಿಂದ ಬಿಡುವು ಹೆಚ್ಚಾಗಿಯೇ ಸಿಕ್ಕಿದೆ. ಬಹಳಷ್ಟು ಮಕ್ಕಳು ಬೀಸೋಕಲ್ಲಿನ ಪಾಠ ಕಲಿಯಲು ಒಲವುತೋರಿದ್ದಾರೆ. ಪೋಡುಗಳಲ್ಲಿ ಅಜ್ಜಿಯರು ಕಾಳು ಹಾಕಿ ಕಲ್ಲು ಬೀಸುತ್ತಾರೆ. ಪುಟಾಣಿಗಳು ಕೂಡಅವರೊಟ್ಟಿಗೆ ಸೇರಿ ಕಲ್ಲು ಸುತ್ತುತ್ತಾರೆ.

ಯಂತ್ರ ಅಡ್ಡಿ: ‘ಕಲ್ಲು ಕೊಟ್ಟಮ್ಮಗೆ ಎಲ್ಲ ಭಾಗ್ಯವು ಬರಲಿ, ಪಲ್ಲಕ್ಕಿ ಮೇಲೆ ಮಗ ಬರಲಿ, ಆ ಮನೆಗೆ ಮಲ್ಲಿಗೆ ಮುಡಿಯುವ ಸೊಸಿ ಬರಲಿ’ ಎಂಬುದು ಬೀಸುವ ಕಲ್ಲಿನ ಬಗ್ಗೆ ಜನಪದರಿಗೆ ಇರುವಅಗಾಧ ನಂಬಿಕೆ. ಒಗಟಿನ ತ್ರಿಪದಿಯಲ್ಲಿ ನೂರಾರು ಭಾವ, ಒಲವನ್ನು ಇಲ್ಲಿತಿಳಿಸಿದ್ದಾರೆ.

‘ಸಾವಿರಾರು ಜಾನಪದ ಹಾಡುಗಳ ಹುಟ್ಟಿಗೆ ಕಾರಣವಾಗಿರುವ ಈ ರಾಗಿಕಲ್ಲುಗಳಜಾಗದಲ್ಲಿ ಈಗ ಯಂತ್ರೋಪಕರಣಗಳೇ ಹಾಸು ಹೊದ್ದುಕೊಂಡಿವೆ. ಹಿಂದೆ ಪ್ರತಿ ಮನೆಯಲ್ಲಿಯೂಬೀಸುವ ಕಲ್ಲುಗಳು ಇರುತ್ತಿದ್ದವು. ರಾಗಿ, ಜೋಳ, ಅಕ್ಕಿ, ಭತ್ತ, ತೊಗರಿ ಮೊದಲಾದಧಾನ್ಯಗಳ ಹಿಟ್ಟು ತೆಗೆಯಲು, ಅದರ ಹೊಟ್ಟನ್ನು ಬೇರ್ಪಡಿಸಲು ವಿವಿಧ ವಿನ್ಯಾಸದ, ಗಾತ್ರದ ಬೀಸುವ ಕಲ್ಲುಗಳನ್ನು ಬಳಸಲಾಗುತ್ತಿತ್ತು. ಇವುಗಳ ಮುಂದೆ ಕುಳಿತಾಗ ಅಮ್ಮ,ಅಜ್ಜಿಯರ ಬಾಯಲ್ಲಿ ಬರುತ್ತಿದ್ದ ಜನಪದ ಹಾಡುಗಳು ‘ಬೀಸುವಪದ’ಗಳಾಗಿ ಉಳಿದವು. ಕಾಲಕಳೆದಂತೆ ಬೀಸೋಕಲ್ಲಿನ ಮೇಲೆ ಇದ್ದ ಒಲವು ಕುಸಿಯಿತು’ ಎಂದು ಹೇಳುತ್ತಾರೆ ಬೆಟ್ಟದ ರಂಗಮ್ಮ.

ಮಹಿಳೆಯರಿಗೆ ಸುಲಭ ವ್ಯಾಯಾಮ

‘ಆಧುನಿಕ ತಂತ್ರಜ್ಞಾನದಿಂದ ಇಂದು ಕೆಲಸ ಸುಲಭವಾಗಿದೆ. ರಾಗಿ ಕಲ್ಲಿನ ಗೊಡವೆ ಏಕೆ’ ಎಂದು ಅಜ್ಜಿ ಹೊನ್ನೂರು ಬಸಮ್ಮ ಅವರನ್ನು ಪ್ರಶ್ನಿಸಿದರೆ, ‘ನಮ್ಮ ಆರೋಗ್ಯದ ಗುಟ್ಟು ಈ ಬೀಸುವ ಕಲ್ಲಿನಲ್ಲಿದೆ’ ಎನ್ನುತ್ತಾರೆ.

‘ಬೀಸುವ ಕಾರ್ಯದ ಮೂಲಕ ಹಳ್ಳಿ ಹೆಣ್ಣುಮಕ್ಕಳ ದೇಹಕ್ಕೆ ವ್ಯಾಯಾಮ ಲಭಿಸುತ್ತಿತ್ತು. ಕೈಕಾಲು ಹೊಟ್ಟೆಯ ಭಾಗಕ್ಕೆಸಾಕಷ್ಟು ವ್ಯಾಯಾಮ ದೊರೆತು ಬೊಜ್ಜು ಸ್ತ್ರೀಯರ ಬಳಿ ಸುಳಿಯುತ್ತಿರಲಿಲ್ಲ. ಮನೆಯಲ್ಲಿ ಇದ್ದರೂ, ಮಾನಸಿಕ ನೆಮ್ಮದಿ, ದೈಹಿಕ ಉಲ್ಲಾಸ ಸಿದ್ಧಿಸುತ್ತಿತ್ತು’ ಎಂದು ಹೇಳಿದರು.

‘ನಮಗೆ ಬೀಸುವ ಕಲ್ಲು ಅತ್ಯಂತ ಪೂಜನೀಯ ವಸ್ತು. ಈಗಿನ ಪುಟ್ಟ ಮಕ್ಕಳು ಬೀಸುವುದನ್ನು ಕಲಿಯಲು ಉತ್ಸಾಹ ತೋರುತ್ತಿರುವುದು ಒಳ್ಳೆಯ ಬೆಳವಣಿಗೆ. ‘ಕುಟ್ಟಲಾರದವಳಿಗೆ ಕೂಳಿಲ್ಲ. ಬೀಸಲಾರದವಳಿಗೆ ಹಿಟ್ಟಿಲ್ಲ’ ಎಂಬ ಗಾದೆ ಮಾತು ಮತ್ತೆ ಮುನ್ನೆಲೆಗೆ ಬರುವ ಕಾಲ ದೂರವಿಲ್ಲ’ ಎಂದು ಬಿಳಿಗಿರಿಬೆಟ್ಟದ ಪೋಡಿನ ಕೇತಮ್ಮ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.