ADVERTISEMENT

ಗ್ರಾ. ಪಂ ಸೀಟು ಹರಾಜು: ಪ್ರಜಾವಾಣಿ ವರದಿ ಓದಿ ಬನ್ನಿಸಾರಿಗೆಗೆ ತಹಶೀಲ್ದಾರ್‌ ಭೇಟಿ

ಚುನಾವಣೆ ಬಹಿಷ್ಕಾರ ಮಾಡದಂತೆ ಉಪ್ಪಾರ ಸಮುದಾಯದವರ ಮನವೊಲಿಕೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 14:38 IST
Last Updated 12 ಡಿಸೆಂಬರ್ 2020, 14:38 IST
ಯಳಂದೂರು ತಾಲ್ಲೂಕಿನ ಬನ್ನಿಸಾರಿಗೆ ಗ್ರಾಮಕ್ಕೆ ಶನಿವಾರ ಪ್ರಭಾರ ತಹಶೀಲ್ದಾರ್ ಬಸವರಾಜು ಚಿಗರಿ ಮತ್ತು ಅಧಿಕಾರಿಗಳ ತಂಡ ಭೇಟಿ ನೀಡಿ ಉಪ್ಪಾರ ಸಮುದಾಯದ ಮುಖಂಡರಿಂದ ಮಾಹಿತಿ ಸಂಗ್ರಹಿಸಿತು
ಯಳಂದೂರು ತಾಲ್ಲೂಕಿನ ಬನ್ನಿಸಾರಿಗೆ ಗ್ರಾಮಕ್ಕೆ ಶನಿವಾರ ಪ್ರಭಾರ ತಹಶೀಲ್ದಾರ್ ಬಸವರಾಜು ಚಿಗರಿ ಮತ್ತು ಅಧಿಕಾರಿಗಳ ತಂಡ ಭೇಟಿ ನೀಡಿ ಉಪ್ಪಾರ ಸಮುದಾಯದ ಮುಖಂಡರಿಂದ ಮಾಹಿತಿ ಸಂಗ್ರಹಿಸಿತು   

ಚಾಮರಾಜನಗರ/ಯಳಂದೂರು: ಯಳಂದೂರು ತಾಲ್ಲೂಕಿನ ಬನ್ನಿಸಾರಿಗೆಯ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳನ್ನು ಹರಾಜು ಹಾಕಲಾಗಿದೆ ಎಂದು ಆರೋಪಿಸಿ, ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರವನ್ನು ಅಲ್ಲಿನ ಉಪ್ಪಾರರು ಕೈಗೊಂಡ ಬೆನ್ನಲ್ಲೇ ತಹಶೀಲ್ದಾರ್‌ ಹಾಗೂ ಇತರ ಅಧಿಕಾರಿಗಳು ಶನಿವಾರ ಗ್ರಾಮಕ್ಕೆ ಭೇಟಿ ನೀಡಿ ಸಮುದಾಯದ ಮುಖಂಡರೊಂದಿಗೆ ಚರ್ಚಿಸಿದರು.

‘ಪ್ರಜಾವಾಣಿ’ಯ ಶನಿವಾರದ ಸಂಚಿಕೆಯಲ್ಲಿ ‘ಬನ್ನಿಸಾರಿಗೆ: ಗ್ರಾ.ಪಂ ಸದಸ್ಯ ಸ್ಥಾನಗಳ ಹರಾಜು? ಎಂಬ ವರದಿಯ ಆಧಾರದಲ್ಲಿ ಪ್ರಭಾರ ತಹಶೀಲ್ದಾರ್‌ ಬಸವರಾಜು ಚಿಗರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಸ್‌.ರಾಜು ಹಾಗೂ ಇತರ ಅಧಿಕಾರಿಗಳು ಉಪ್ಪಾರ ಮುಖಂಡರಿಂದ ಆರೋಪಗಳ ಬಗ್ಗೆ ಮಾಹಿತಿ ಪಡೆದರು.

ಹರಾಜು ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿರುವ ಕುರಿತು ದಾಖಲೆ ಮತ್ತು ಪೂರಕ ಆಧಾರಗಳನ್ನು ನೀಡಿದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ವಹಿಸಲಾಗುವುದು ಎಂಬ ಭರವಸೆಯನ್ನು ತಹಶೀಲ್ದಾರ್‌ ಅವರು ಮುಖಂಡರಿಗೆ ನೀಡಿದರು.

ADVERTISEMENT

‘ಚುನಾವಣೆಗೆ ನೀವೂ ಸ್ಪರ್ಧಿಸಿ. ಚುನಾವಣಾ ಪ್ರಕ್ರಿಯೆ ಸುಗಮವಾಗಿ ನಡೆಸಲು ಗ್ರಾಮಸ್ಥರು ಸಹಕಾರ ನೀಡಬೇಕು’ ಎಂದು ಅವರು ಮನವಿ ಮಾಡಿದರು.

‘25 ವರ್ಷಗಳಿಂದ ಉಪ್ಪಾರರಿಗೆ ಸೂಕ್ತ ಸ್ಥಾನಮಾನ ನೀಡಿಲ್ಲ. ಬಡಾವಣೆಗೆ ಮೂಲ ಸೌಕರ್ಯ ಒದಗಿಸದೆ ನಿರ್ಲಕ್ಷಿಸಲಾಗಿದೆ. ಅಗರ ಗ್ರಾಮಪಂಚಾಯಿತಿಗೆ ಉಪ್ಪಾರ ಬಡಾವಣೆಯನ್ನು ಸೇರಿಸಬೇಕು. ರಸ್ತೆ, ಮನೆ ಮತ್ತಿತರ ಮೂಲಭೂತಸೌಕರ್ಯಗಳನ್ನು ವಿಸ್ತರಿಸುವಂತೆ ಮನವಿ ಸಲ್ಲಿಸಿದ್ದಾರೆ' ಎಂದು ತಹಶೀಲ್ದಾರ್ ಅವರು ಮಾಹಿತಿ ನೀಡಿದರು.

‘ಗ್ರಾಮದಲ್ಲಿರುವ ಸಮಸ್ಯೆಗಳನ್ನು ನಿವಾರಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಅಗರ ಪಂಚಾಯಿತಿಗೆ ಉಪ್ಪಾರ ಬಡಾವಣೆ ಸೇರಿಸುವ ಕುರಿತು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲಾಗುವುದು. ಹರಾಜು ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆದರೆ ಸದಸ್ಯತ್ವ ವಜಾಗೊಳಿಸಲುಸೂಚಿಸಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುವುದು' ಎಂದು ಬಸವರಾಜು ಚಿಗರಿ ಅವರು ಹೇಳಿದರು.

ಅಧಿಕಾರಿಗಳು ನೀಡಿದ ಭರವಸೆಯ ನಂತರ ಉಪ್ಪಾರ ಮುಖಂಡರು, ಮತದಾನದಲ್ಲಿ ಭಾಗವಹಿಸುವುದಾಗಿ ಮಾತು ಕೊಟ್ಟರು.

ಉಪ ತಹಶೀಲ್ದಾರ್ ನಂಜಯ್ಯ ಮತ್ತು ಪೊಲೀಸ್ ಸಿಬ್ಬಂದಿ ಇದ್ದರು.

‘ನಮಗಾಗುತ್ತಿರುವ ಅನ್ಯಾಯಗಳ ಬಗ್ಗೆ ಅಧಿಕಾರಿಗಳಿಗೆ ವಿವರಿಸಿದ್ದೇವೆ. ಗ್ರಾಮದಲ್ಲಿರುವ ಮೂಲಸೌಕರ್ಯ ಸಮಸ್ಯೆಗಳ ಬಗ್ಗೆಯೂ ವಿವರಿಸಿದ್ದೇವೆ. ಗ್ರಾಮ ಪಂಚಾಯಿತಿ ಸ್ಥಾನ ಹರಾಜು ಹಾಕಿರುವುದಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಇರುವ ದಾಖಲೆಯನ್ನೂ ನೀಡಿದ್ದೇವೆ’ ಎಂದುಯಜಮಾನ ಶ್ರೀನಿವಾಸ್ ಅವರು ‘ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.