ADVERTISEMENT

ಮಳೆ ಹಾನಿ: ತಕ್ಷಣ ಬೆಳೆ ಸಮೀಕ್ಷೆ ಮಾಡಿಸಿ ಪರಿಹಾರ ನೀಡಿ -ಧ್ರುವನಾರಾಯಣ ಆಗ್ರಹ

ಸರ್ಕಾರ ನಿದ್ರಿಸುತ್ತಿದೆ ಎಂದು ಕೆಪಿಸಿಸಿ‌ ಕಾರ್ಯಾಧ್ಯಕ್ಷ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2021, 9:49 IST
Last Updated 18 ನವೆಂಬರ್ 2021, 9:49 IST
ಆರ್.ಧ್ರುವನಾರಾಯಣ
ಆರ್.ಧ್ರುವನಾರಾಯಣ   

ಚಾಮರಾಜನಗರ: ರಾಜ್ಯದಾದ್ಯಂತ ತಿಂಗಳಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಬೆಳೆ ಹಾನಿ‌ ಸಂಭವಿಸಿದ್ದು, ಬಿಜೆಪಿ ಸರ್ಕಾರ ಸಮೀಕ್ಷೆ ನಡೆಸಿಲ್ಲ. ರೈತರಿಗೆ ಪರಿಹಾರವನ್ನೂ ನೀಡಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರು ಆಗ್ರಹಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ತಕ್ಷಣವೇ ಸಮೀಕ್ಷೆ‌ ಕಾರ್ಯ‌ಕೈಗೊಳ್ಳಬೇಕು. ಬೆಳೆ ಹಾನಿ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು. ಬೆಳೆ‌ನಷ್ಟ ಅನುಭವಿಸಿದ ರೈತರಿಗೆ ಪರಿಹಾರ‌‌ ಕೊಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ರೈತರು ಬಡವರು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ, ಸಚಿವರು ನಿದ್ರಿಸುತ್ತಿದ್ದಾರೆ. ಉಪಚುನಾವಣೆಯೇ ಅವರಿಗೆ ಮುಖ್ಯವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಗಳಿಗೆ ಭೇಟಿ‌ ನೀಡಿಲ್ಲ. ಕಂದಾಯ, ವಸತಿ ಸಚಿವರು ಪ್ರವಾಸ ಮಾಡುತ್ತಿಲ್ಲ' ಎಂದು ವಾಗ್ದಾಳಿ ನಡೆಸಿದರು.

ADVERTISEMENT

ಬಾಲಿಶ ಹೇಳಿಕೆ: ಬಿಟ್ ಕಾಯಿನ್ ಹಗರಣದ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರು ಗಂಡೋ ಹೆಣ್ಣೋ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ನೀಡಿರುವ ಹೇಳಿಕೆಗೆ ಸಂಬಂಧಿಸಿದ ಪ್ರಶ್ನೆಗೆ‌ ಪ್ರತಿಕ್ರಿಯಿಸಿದ ಧ್ರುವನಾರಾಯಣ ಅವರು, ‘ಇದು ಬಾಲಿಶ ಹೇಳಿಕೆ. ಎರಡನೇ ಬಾರಿ ಸಂಸದರಾದವರು, ಪತ್ರಕರ್ತರಾಗಿದ್ದವರು ಹೇಳುವಂತಹ ಮಾತು ಇದಲ್ಲ. ಧೈರ್ಯ ಇದ್ದಿದ್ದರೆ, ಪ್ರಿಯಾಂಕ್ ಖರ್ಗೆ ಅವರ ಪ್ರಶ್ನೆಗೆ ಉತ್ತರ ಕೊಡಬೇಕಿತ್ತು. ಪ್ರಕರಣದ ತನಿಖೆ ನಡೆಸುವಂತೆ ಸರ್ಕಾರಕ್ಕೆ ಹೇಳಬೇಕಿತ್ತು. ಅದು ಬಿಟ್ಟು ಇಂತಹ ಹೇಳಿಕೆ ನೀಡುತ್ತಾರೆ ಎಂದರೆ, ಅವರು ಸಂಸದರಾಗಲು ಅರ್ಹರೋ ಅನರ್ಹರೋ ಎಂಬುದರ ಬಗ್ಗೆ ಜನರೇ ತೀರ್ಮಾನಿಸಬೇಕು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.