
ಚಾಮರಾಜನಗರ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ತೀವ್ರ ಮಳೆ ಕೊರತೆಯ ಪರಿಣಾಮ ಹಿಂಗಾರು ಬಿತ್ತನೆ ಚಟುವಟಿಕೆಗಳು ಕುಂಠಿತವಾಗಿವೆ. 28,163 ಹೆಕ್ಟೇರ್ ಹಿಂಗಾರು ಬಿತ್ತನೆ ಗುರಿಗೆ ಪ್ರತಿಯಾಗಿ 24,830 ಹೆಕ್ಟೇರ್ ಕೃಷಿಭೂಮಿಯಲ್ಲಿ ಮಾತ್ರ ಬಿತ್ತನೆ ನಡೆದಿದ್ದು ಶೇ 88.17ರಷ್ಟು ಗುರಿ ಸಾಧನೆಯಾಗಿದೆ.
ಈ ವರ್ಷ ಜಿಲ್ಲೆಯಲ್ಲಿ ಹಿಂಗಾರು ಮಳೆ ಕೈಕೊಟ್ಟಿರುವುದು ಬಿತ್ತನೆ ಪ್ರಮಾಣ ಕುಸಿತಕ್ಕೆ ಪ್ರಮುಖ ಕಾರಣ. ಜನವರಿಯಿಂದ ನವೆಂಬರ್ ಅಂತ್ಯಕ್ಕೆ ಜಿಲ್ಲೆಯಲ್ಲಿ 758 ಮಿ.ಮೀ ವಾಡಿಕೆ ಮಳೆ ಅಂದಾಜಿಸಲಾಗಿತ್ತು. ಆದರೆ, ಇದುವರೆಗೂ 593 ಮಿ.ಮೀ ಮಳೆ ಮಾತ್ರ ಬಿದ್ದಿದೆ. ಕಳೆದ ವರ್ಷ 2024ರಲ್ಲಿ 817 ಮಿ.ಮೀ ಮಳೆ ಬಿದ್ದಿತ್ತು.
ಜನವರಿಯಲ್ಲಿ ವಾಡಿಕೆ 2.9 ಮಿ.ಮೀ ಮಳೆಗೆ ಪ್ರತಿಯಾಗಿ 2.6 ಮಿ.ಮೀ, ಫೆಬ್ರುವರಿಯಲ್ಲಿ 7.4 ಮಿ.ಮೀ ವಾಡಿಕೆ ಮಳೆಗೆ ಪ್ರತಿಯಾಗಿ ಶೂನ್ಯ, ಮಾರ್ಚ್‌ನಲ್ಲಿ 15.3 ಮಿ.ಮೀ ವಾಡಿಕೆ ಮಳೆಗೆ 16.4 ಮಿ.ಮೀ, ಏಪ್ರಿಲ್‌ನಲ್ಲಿ 63.8 ಮಿ.ಮೀ ವಾಡಿಕೆಗೆ 35.7 ಮಿ.ಮೀ, ಮೇನಲ್ಲಿ 114 ಮಿ.ಮೀ ವಾಡಿಕೆಗೆ 119 ಮಿ.ಮೀ.
ಜೂನ್‌ನಲ್ಲಿ 58.4 ಮಿ.ಮೀ ವಾಡಿಕೆಗೆ 31.8 ಮಿಮೀ, ಜುಲೈನಲ್ಲಿ 63.5 ಮಿ.ಮೀ ವಾಡಿಕೆಗೆ 51.7 ಮಿ.ಮೀ, ಆಗಸ್ಟ್‌ನಲ್ಲಿ 71.5 ಮಿ.ಮೀ ವಾಡಿಕೆಗೆ 69.7ಮಿ.ಮೀ, ಸೆಪ್ಟೆಂಬರ್‌ನಲ್ಲಿ 127 ಮಿ.ಮೀ ವಾಡಿಕೆಗೆ 57.4 ಮಿ.ಮೀ, ಅಕ್ಟೋಬರ್‌ನಲ್ಲಿ 162.3 ಮಿ.ಮೀ ವಾಡಿಕೆಗೆ 145.3, ನವೆಂಬರ್‌ನಲ್ಲಿ 72.9 ಮಿ.ಮೀ ವಾಡಿಕೆಗೆ 12.2 ಮಿ.ಮೀ ಮಾತ್ರ ಮಳೆ ಬಿದ್ದಿದೆ. ಡಿಸೆಂಬರ್‌ನಲ್ಲಿ ಕೇವಲ 0.5 ಮಿ.ಮೀ ಮಳೆಯಾಗಿದೆ.
ಯಳಂದೂರಿನಲ್ಲಿ ಹೆಚ್ಚು ಮಳೆ ಕೊರತೆ:
ಜಿಲ್ಲೆಯಲ್ಲಿ ಯಳಂದೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು ಶೇ 36.3 ಮಿ.ಮೀ ಮಳೆ ಕೊರತೆಯಾಗಿದೆ. ಇಲ್ಲಿ ವಾಡಿಕೆ 847 ಮಿ.ಮೀ ಮಳೆಯಾಗಬೇಕಿತ್ತು, ಪ್ರತಿಯಾಗಿ ಸುರಿದಿದ್ದು 540 ಮಿ.ಮೀ ಮಾತ್ರ. ಚಾಮರಾಜನಗರದಲ್ಲಿ 744 ಮಿ.ಮೀ ವಾಡಿಕೆ ಮಳೆಗೆ ಪ್ರತಿಯಾಗಿ 566 ಮಿ.ಮೀ ಮಳೆ ಬಿದ್ದಿದ್ದು ಶೇ 24ರಷ್ಟು ಕೊರತೆ ಉಂಟಾಗಿದೆ.
ಹನೂರು ತಾಲ್ಲೂಕಿನಲ್ಲಿ 725 ಮಿ.ಮೀ ವಾಡಿಕೆ ಮಳೆಗೆ ಪ್ರತಿಯಾಗಿ 560 ಮಿ.ಮೀ ಮಳೆ ಬಿದ್ದಿದ್ದು ಶೇ 22.7ರಷ್ಟು ಕೊರತೆ ಎದುರಾಗಿದೆ. ಕೊಳ್ಳೇಗಾಲ ತಾಲ್ಲೂಕಿನಲ್ಲಿ 819 ಮಿ.ಮೀ ವಾಡಿಕೆ ಮಳೆಗೆ ಪ್ರತಿಯಾಗಿ 639 ಮಿ.ಮೀ ಮಳೆ ಬಿದ್ದಿದ್ದು ಶೇ 21.9ರಷ್ಟು ಕಡಿಮೆಯಾಗಿದೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 766 ಮಿ. ಮೀ ವಾಡಿಕೆ ಮಳೆಗೆ 679 ಮಿ.ಮೀ ಮಳೆ ಸುರಿದಿದ್ದು ಶೇ 11.3 ಕೊರತೆಯಾಗಿದೆ.
ಹಿಂಗಾರು ಮಳೆ ಕೊರತೆಯ ನಡುವೆಯೂ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಬಿತ್ತನೆ ಕಾರ್ಯ ಗುರಿಮೀರಿ ಸಾಧನೆಯಾಗಿದೆ. ಚಾಮರಾಜನಗರ ತಾಲ್ಲೂಕಿನಲ್ಲಿ 4206 ಹೆಕ್ಟೇರ್ ಬಿತ್ತನೆ ಗುರಿಗೆ 4668 ಹೆಕ್ಟೇರ್ ಬಿತ್ತನೆಯಾಗಿದೆ. ಗುಂಡ್ಲುಪೇಟೆಯಲ್ಲಿ 13835 ಹೆಕ್ಟೇರ್ ಬಿತ್ತನೆ ಗುರಿಗೆ 14225 ಹೆಕ್ಟೇರ್ ಬಿತ್ತನೆ ನಡೆದಿದೆ.
ಹನೂರು ಕನಿಷ್ಠ:
ಜಿಲ್ಲೆಯಲ್ಲಿ ಹನೂರು ತಾಲ್ಲೂಕಿನಲ್ಲಿ ಕನಿಷ್ಠ ಬಿತ್ತನೆ ನಡೆದಿದೆ. 6,887 ಹೆಕ್ಟೇರ್ ಬಿತ್ತನೆ ಗುರಿಗೆ ಇದುವರೆಗೂ ಕೇವಲ 3,173 ಹೆಕ್ಟೇರ್ ಮಾತ್ರ ಕೃಷಿ ಮಾಡಲಾಗಿದೆ. ಕೊಳ್ಳೇಗಾಲ ತಾಲ್ಲೂಕಿನಲ್ಲಿ 1690 ಹೆಕ್ಟೇರ್ ಬಿತ್ತನೆಗೆ ಪ್ರತಿಯಾಗಿ 1264 ಹೆಕ್ಟೇರ್, ಯಳಂದೂರು ತಾಲ್ಲೂಕಿನಲ್ಲಿ 1,545 ಹೆಕ್ಟೇರ್ ಗುರಿಗೆ 1,500 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ.
ಕಡಲೆ, ಹುರುಳಿ ಬಿತ್ತನೆಗೆ ಉತ್ಸಾಹ:
ಹಿಂಗಾರು ಹಂಗಾಮಿನಲ್ಲಿ ದ್ವಿದಳ ಧಾನ್ಯಗಳಾದ ಕಡಲೆ ಹಾಗೂ ಹುರಳಿ ಬೆಳೆಯಲು ರೈತರು ಆಸಕ್ತಿ ತೋರಿದ್ದಾರೆ. ಕಡಲೆ 2000 ಹೆಕ್ಟೇರ್ ಗುರಿಗೆ 2557 ಹೆಕ್ಟೇರ್ ಬಿತ್ತನೆಯಾಗಿದ್ದು, ಹುರುಳಿ 16000 ಹೆಕ್ಟೇರ್ ಗುರಿಗೆ 17135 ಹೆಕ್ಟೇರ್ ನಾಟಿಯಾಗಿದೆ.
ಈ ವರ್ಷ ಮುಂಗಾರು ಅವಧಿಯಲ್ಲೂ ಮಳೆ ಕೊರತೆಯಾಗಿ ಹತ್ತಿ ಬಿತ್ತನೆ ಕ್ಷೇತ್ರ ತೀವ್ರ ಕುಸಿತ ಕಂಡಿತ್ತು. 8700 ಹೆಕ್ಟೇರ್ ಗುರಿಗೆ ಕೇವಲ 3061 ಹೆಕ್ಟೇರ್ ಮಾತ್ರ ಬಿತ್ತನೆ ನಡೆದಿತ್ತು. ಉದ್ದು, ಎಳ್ಳು, ಸೂರ್ಯಕಾಂತಿ, ಮುಸುಕಿನ ಜೋಳ ಬಿತ್ತನೆಗೂ ಪೂರಕ ವಾತಾವರಣ ಹಾಗೂ ಮಳೆ ಸುರಿಯದೆ ರೈತರು ಸಮಸ್ಯೆ ಅನುಭವಿಸಬೇಕಾಯಿತು.
ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಬಿತ್ತನೆ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಹಿಂಗಾರಿನಲ್ಲಿ ರೈತರು ಕಡಲೆ ಬಿತ್ತನೆಗೆ ಉತ್ಸಾಹ ತೋರುತ್ತಿದ್ದಾರೆ. ಈ ವರ್ಷ ಬಿತ್ತನೆ ಬೀಜ ರಸಗೊಬ್ಬರ ಕೊರತೆ ಕಂಡುಬಂದಿಲ್ಲ.–ಸುಷ್ಮಾ ಕೃಷಿ ಇಲಾಖೆ ಜಂಟಿ ನಿರ್ದೇಶಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.