ADVERTISEMENT

ಗುಂಡ್ಲುಪೇಟೆ: ಸಣ್ಣ ಈರುಳ್ಳಿಗೆ ಕಂಟಕವಾದ ಅಕಾಲಿಕ ಮಳೆ

ಮಲ್ಲೇಶ ಎಂ.
Published 16 ಜನವರಿ 2021, 19:30 IST
Last Updated 16 ಜನವರಿ 2021, 19:30 IST
ಕಟಾವಿಗೆ ಸಿದ್ಧವಾಗಿರುವ ಈರುಳ್ಳಿ ಬೆಳೆ. ಅಕಾಲಿಕ ಮಳೆಯಿಂದ ಕೊಯ್ಲು ಸಾಧ್ಯವಾಗಿಲ್ಲ
ಕಟಾವಿಗೆ ಸಿದ್ಧವಾಗಿರುವ ಈರುಳ್ಳಿ ಬೆಳೆ. ಅಕಾಲಿಕ ಮಳೆಯಿಂದ ಕೊಯ್ಲು ಸಾಧ್ಯವಾಗಿಲ್ಲ   

ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆ ಸಣ್ಣ ಈರುಳ್ಳಿಗೆ (ಸಾಂಬಾರ್‌ ಈರುಳ್ಳಿ) ಕಂಟಕವಾಗಿ ಪರಿಣಮಿಸಿದೆ.

ಮಳೆಯಿಂದಾಗಿ ಕೆಲವು ಕಡೆಗಳಲ್ಲಿ ಈರುಳ್ಳಿ, ಕಟಾವು ಮಾಡಲು ಸಾಧ್ಯವಾಗದೆ ಕೊಳೆಯುವ ಸ್ಥಿತಿಗೆ ಬಂದಿದೆ. ಇದರಿಂದಾಗಿ ರೈತರು ನಷ್ಟ ಅನುಭವಿಸುವಂತಾಗಿದೆ.

ರೈತರು ಪ್ರತಿ ವರ್ಷ ಅಕ್ಟೋಬರ್‌, ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಸಣ್ಣ ಈರುಳ್ಳಿ ಬಿತ್ತನೆ ಮಾಡಿ ಮಾರ್ಚ್ ವೇಳೆಗೆ ಈರುಳ್ಳಿ ಕಿತ್ತು ಮಾರಾಟ ಮಾಡುತ್ತಿದ್ದರು. ಅಕಾಲಿಕ ಮಳೆಯಿಂದಾಗಿ ಬಿತ್ತನೆ ಮಾಡಿದ ಖರ್ಚು ಬರುವುದಿಲ್ಲ ಎಂಬ ಆತಂಕದಲ್ಲಿ ಈರುಳ್ಳಿ ಬೆಳೆಗಾರರಿದ್ದಾರೆ.

ADVERTISEMENT

ತಾಲ್ಲೂಕಿನಲ್ಲಿ 650 ಎಕರೆ ಪ್ರದೇಶದಲ್ಲಿ ಈರುಳ್ಳಿ ನಾಟಿ ಮಾಡಲಾಗಿದೆ.

ಕಳೆದ ವರ್ಷ ಬಿತ್ತನೆ ಈರುಳ್ಳಿಗೆ ಕ್ವಿಂಟಲ್‌ಗೆ ₹6,000 ಕೊಟ್ಟು ಬಿತ್ತನೆ ಮಾಡಿ, ಮಾರಾಟ ಮಾಡುವಾಗ ₹3,000 ಮಾರಾಟ ಮಾಡಿದ್ದರು. ಇದರಿಂದ ಹಲವು ರೈತರು ನಷ್ಟ ಅನುಭವಿಸಿದ್ದರು. ಈ ವರ್ಷವೂ ಅದೇ ರೀತಿ ಆಗುವ ಸಾಧ್ಯತೆ ಇದೆ ಎಂಬ ಆತಂಕ ಅವರನ್ನು ಕಾಡುತ್ತಿದೆ.

‘ಕಳೆದ ವಾರ ಹಲವು ದಿನ ಸುರಿದ ಅಕಾಲಿಕ ಮಳೆ ತರಕಾರಿ ಬೆಳೆಗಳಿಗೆ ಪೆಟ್ಟು ನೀಡಿದೆ. ಇದರ ಜೊತಗೆ ಕಟಾವಿಗೆ ಬಂದ ಈರುಳ್ಳಿಯನ್ನು ಕೀಳಲು ಸಾಧ್ಯವಾಗದಂತಾಗಿದೆ. ಹಲವು ಮಂದಿ ರೈತರು ತಮಗಿರುವ ಕಡಿಮೆ ಜಮೀನಿನಲ್ಲಿ ಸಣ್ಣ ಈರುಳ್ಳಿ ಬೆಳೆದಿದ್ದು, ಮಳೆ ಇನ್ನೂ ಮುಂದುವರಿದರೆ ಇದನ್ನು ಖರೀದಿಸುವವರು ಯಾರು’ ಎಂದು ರೈತ ರುದ್ರೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ಅವರು ಒತ್ತಾಯಿಸಿದರು.

‘ಬಿತ್ತನೆ ಈರುಳ್ಳಿಗೆ ಕ್ಚಿಂಟಲ್‌ಗೆ ₹8,000 ಕೊಟ್ಟು ತಂದು ನಾಟಿ ಮಾಡಿದ್ದೇವೆ. ನಾಟಿಯ ಜೊತೆಗೆ ಆಳು-ಕಾಳು, ಔಷಧಿ ಇತರೆ ಖರ್ಚು ಸೇರಿ ಎಕರೆಗೆ ₹30 ಸಾವಿರ ಬಂಡವಾಳ ಹೂಡಲಾಗಿದೆ. ಆದರೆ ಅಕಾಲಿಕ ಮಳೆಯಿಂದ ಸಾಲ ಕೊಟ್ಟವರಿಗೆ ವಾಪಸ್ ನೀಡಲು ಕಷ್ಟವಾಗುತ್ತಿದೆ. ಕೋವಿಡ್‌ ಸಮಯದಲ್ಲಿ ತರಕಾರಿ ಬೆಳೆ ಬೆಳೆದು ನಷ್ಟ ಅನುಭವಿಸಿದ್ದೆವು. ಅದು ಸರಿಯಾಯಿತು ಎನ್ನುವಷ್ಟರಲ್ಲಿ ಅಕಾಲಿಕ ಮಳೆ ಬಂದಿದೆ’ ಎಂದು ಶ್ಯಾನಡ್ರಹಳ್ಳಿ ಗ್ರಾಮದ ರೈತ ಎಸ್.ಜೆ. ನಾಗೇಂದ್ರ ಅವರು ಅಳಲು ತೋಡಿಕೊಂಡರು.

ನಾಲ್ಕೈದು ದಿನಗಳಿಂದ ತಾಲ್ಲೂಕಿನಲ್ಲಿ ಮಳೆ ಬಂದಿಲ್ಲ. ಮೋಡದ ವಾತಾವರಣ ಇದ್ದರೂ, ಬಿಸಿಲು ಬರುತ್ತಿದೆ. ಹಾಗಾಗಿ, ಭೂಮಿಯ ತೇವಾಂಶ ಕಡಿಮೆಯಾದ ನಂತರ ಈರುಳ್ಳಿ ಕಟಾವು ಮಾಡಬಹುದು ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ.

‘‍ಪರಿಹಾರ ಕೊಡಿಸಲು ಯತ್ನ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ಅವರು, ‘ಮುಂಚಿತವಾಗಿ ಬಿತ್ತನೆಯಾದ ಈರುಳ್ಳಿ ಬೆಳೆ ಅಕಾಲಿಕ ಮಳೆಗೆ ಸಿಲುಕಿದೆ. ತಡವಾಗಿ ಬಿತ್ತನೆ ಮಾಡಿರುವ ಬೆಳೆ ಉತ್ತಮ ರೀತಿಯಲ್ಲಿದ್ದು, ರೈತರಿಗೆ ಹೆಚ್ಚಿನ ಆದಾಯ ದೊರಕುವ ನಿರೀಕ್ಷೆಯಿದೆ. ಈಗಾಗಲೇ ಈರುಳ್ಳಿ ಬೆಳೆದು ಅಕಾಲಿಕ ಮಳೆಗೆ ಸಿಲುಕಿ ನಷ್ಟ ಅನುಭವಿಸುತ್ತಿರುವ ರೈತರ ಸಮಸ್ಯೆಯನ್ನು ಸರ್ಕಾರಕ್ಕೆ ತಿಳಿಸಿ ಸೂಕ್ತ ಪರಿಹಾರ ದೊರಕಿಸಲು ಯತ್ನಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.