ADVERTISEMENT

ಮಿಂಚು ಗುಡುಗು ಸಹಿತ ಗಾಳಿ ಮಳೆ

​ಪ್ರಜಾವಾಣಿ ವಾರ್ತೆ
Published 28 ಮೇ 2020, 17:24 IST
Last Updated 28 ಮೇ 2020, 17:24 IST
ಚಾಮರಾಜನಗರದಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ ರಸ್ತೆಯಲ್ಲಿ ಭಾರಿ ಪ್ರಮಾಣದ ನೀರು ಹರಿಯಿತು
ಚಾಮರಾಜನಗರದಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ ರಸ್ತೆಯಲ್ಲಿ ಭಾರಿ ಪ್ರಮಾಣದ ನೀರು ಹರಿಯಿತು   

ಚಾಮರಾಜನಗರ: ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಗುರುವಾರ ರಾತ್ರಿ ಗುಡುಗು ಸಿಡಿಲು ಸಹಿತ ಗಾಳಿ ಮಳೆಯಾಗಿದೆ.

ಮಹದೇಶ್ವರ ಬೆಟ್ಟ, ಹನೂರು, ಕೊಳ್ಳೇಗಾಲ, ಯಳಂದೂರು, ಸಂತೇಮರಹಳ್ಳಿ ಹಾಗೂ ಚಾಮರಾಜನಗರದಲ್ಲಿ ವರ್ಷಧಾರೆ ಉತ್ತಮವಾಗಿ ಸುರಿದಿದೆ. ಗುಂಡ್ಲುಪೇಟೆ ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಮಳೆಯಾಗಿಲ್ಲ. ಮಿಂಚು ಗುಡುಗಿನಿಂದಾಗಿ ಹಲವೆಡೆ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತು.

ಮಹದೇಶ್ವರ ಬೆಟ್ಟದಲ್ಲಿ ರಾತ್ರಿ ಎಂಟು ಗಂಟೆಯ ಹೊತ್ತಿಗೆ ಮಿಂಚು, ಗುಡುಗಿನೊಂದಿಗೆ ಗಾಳಿ ಮಳೆಯಾಗಿದೆ. ಅರ್ಧ ಗಂಟೆ ಸಾಧಾರಣ ಮಳೆ ಸುರಿದಿದೆ. ಕೊಳ್ಳೇಗಾಲದಲ್ಲಿ 20 ನಿಮಿಷಕ್ಕೂ ಹೆಚ್ಚು ಸಮಯ ಮಳೆ ಸುರಿದಿದೆ.ಬಿಳಿಗಿರಿರಂಗನಬೆಟ್ಟದಲ್ಲೂ ಅರ್ಧ ಗಂಟೆ ಬಿರುಸಿನ ಮಳೆಯಾಗಿದೆ.

ADVERTISEMENT

ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ಒಂಬತ್ತು ಗಂಟೆಗೆ ಆರಂಭವಾದ ಬಿರುಸಿನ ಮಳೆ ಜೋರಾದ ಗಾಳಿಯೊಂದಿಗೆ ಅರ್ಧಗಂಟೆಗೂ ಹೆಚ್ಚು ಕಾಲ ಸುರಿಯಿತು. ನಂತರ ಸಾಧಾರಣ ಮಳೆಯಾಯಿತು. ತಡರಾತ್ರಿವರೆಗೂ ನೀರು ಹನಿಯುತ್ತಲೇ ಇತ್ತು.ರಸ್ತೆಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯಿತು.

ಗಾಳಿಯಿಂದಾಗಿ ಬೆಳೆ ಹಾನಿ ಸಂಭವಿಸಿರುವ ಬಗ್ಗೆ ತಕ್ಷಣಕ್ಕೆ ಮಾಹಿತಿ ಲಭ್ಯವಾಗಿಲ್ಲ.

ನಾಲ್ಕೈದು ದಿನಗಳಿಂದ ಜಿಲ್ಲೆಯಲ್ಲಿ ರಾತ್ರಿ ಹೊತ್ತು ಮಳೆಯಾಗುತ್ತಿದ್ದು, ಹಗಲು ಬಿಸಿಲಿನ ವಾತಾವರಣ ಕಂಡು ಬರುತ್ತಿದೆ. ಇನ್ನೂ ಕೆಲವು ದಿನಗಳ ಕಾಲ ಇದೇ ರೀತಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.