ADVERTISEMENT

ಚಾಮರಾಜನಗರ: ಗಡಿ ಜಿಲ್ಲೆಯಲ್ಲಿ ಪುನರ್ವಸು ಮಳೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 15:54 IST
Last Updated 15 ಜುಲೈ 2021, 15:54 IST
ಚಾಮರಾಜನಗರದಲ್ಲಿ ಗುರುವಾರ ಸುರಿಯುತ್ತಿದ್ದ ಮಳೆಯಿಂದ ರಕ್ಷಣೆ ಪಡೆಯಲು ವ್ಯಕ್ತಿಯೊಬ್ಬರು ತಮ್ಮ ಕೈಲಿದ್ದ ಬಟ್ಟೆಯನ್ನೇ ತಲೆಗೆ ಹಾಕಿಕೊಂಡು ಸಾಗಿದರು
ಚಾಮರಾಜನಗರದಲ್ಲಿ ಗುರುವಾರ ಸುರಿಯುತ್ತಿದ್ದ ಮಳೆಯಿಂದ ರಕ್ಷಣೆ ಪಡೆಯಲು ವ್ಯಕ್ತಿಯೊಬ್ಬರು ತಮ್ಮ ಕೈಲಿದ್ದ ಬಟ್ಟೆಯನ್ನೇ ತಲೆಗೆ ಹಾಕಿಕೊಂಡು ಸಾಗಿದರು   

ಚಾಮರಾಜನಗರ: ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಪುನರ್ವಸು ಮಳೆ ಸುರಿಯುತ್ತಿದೆ. ಗುರುವಾರ ಬಹುತೇಕ ಕಡೆಗಳಲ್ಲಿ ಇಡೀ ದಿನ ಜಿಟಿ ಜಿಟಿ ಮಳೆಯಾಯಿತು.

ಎಲ್ಲ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಮಳೆಯಾಗಿದೆ. ಗುರುವಾರ ಹಗಲು ಹೊತ್ತಿನಲ್ಲೂ ಅದು ಮುಂದುವರಿಯಿತು. ಮೋಡ ಕವಿದ ವಾತಾವರಣವು ಜಿಲ್ಲೆಯ ಜನರಿಗೆ ಮಲೆನಾಡಿನ ಅನುಭವ ನೀಡಿತು.

ಜೂನ್‌ ತಿಂಗಳು ಹಾಗೂ ಜುಲೈ ಮೊದಲ ವಾರದಲ್ಲಿ ಕಡಿಮೆಯಾಗಿದ್ದರಿಂದ ರೈತರು ಆತಂಕ ಗೊಂಡಿದ್ದರು. ಜುಲೈ ಎರಡನೇ ವಾರದಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವುದು ಅವರಲ್ಲಿ ಮಂದಹಾಸ ಮೂಡಿಸಿದೆ. ಆದರೆ, ಎರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವುದು ಕೃಷಿ ಚಟುವಟಿಕೆಗಳಿಗೆ ಕೊಂಚ ಹಿನ್ನಡೆ ಉಂಟು ಮಾಡಿದೆ.

ADVERTISEMENT

ಗುರುವಾರದ ಮಳೆಯಿಂದಾಗಿ ಜನ ಜೀವನಕ್ಕೆ ತೊಂದರೆಯಾಯಿತು. ಜನರು ಮನೆಯಿಂದ ಹೊರಗಡೆ ಬರಲು ಹಿಂದೇಟು ಹಾಕಿದರು. ದ್ವಿಚಕ್ರವಾಹನಗಳ ಸಂಚಾರವೂ ಕಡಿಮೆಯಾಗಿತ್ತು. ಪ್ರಯಾಣಿಕರು ಸಂಚಾರಕ್ಕೆ ಬಸ್‌ಗಳನ್ನು ಅವಲಂಬಿಸಿದರು.

ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಜಿಲ್ಲೆಯಲ್ಲಿ 24 ಗಂಟೆಗಳ ಅವಧಿಯಲ್ಲಿ 0.57 ಸೆಂ.ಮೀ ಮಳೆಯಾಗಿದೆ. ಚಾಮರಾಜನಗರ ತಾಲ್ಲೂಕಿನಲ್ಲಿ 0.35 ಸೆಂ.ಮೀ, ಗುಂಡ್ಲುಪೇಟೆಯಲ್ಲಿ 0.81 ಸೆಂ.ಮೀ, ಕೊಳ್ಳೇಗಾಲದಲ್ಲಿ 0.40 ಸೆಂ.ಮೀ, ಯಳಂದೂರು ತಾಲ್ಲೂಕಿನಲ್ಲಿ 0.28 ಸೆಂ.ಮೀ ಹಾಗೂ ಹನೂರು ಭಾಗದಲ್ಲಿ 0.60 ಸೆಂ.ಮೀ ಮಳೆಯಾಗಿದೆ.

ಒಂದು ವಾರದ ಅವಧಿಯಲ್ಲಿ 1.47 ಸೆಂ.ಮೀ ಮಳೆಯಾಗಿದೆ. ಜುಲೈ ತಿಂಗಳ ಮೊದಲ 15 ದಿನಗಳಲ್ಲಿ 6 ಸೆಂ.ಮೀ ಮಳೆಯಾಗಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ 2.7 ಸೆಂ.ಮೀ ಮಳೆಯಾಗುತ್ತದೆ.

ಗುಂಡ್ಲುಪೇಟೆ: ಕೃಷಿ ಚಟುವಟಿಕೆಗಳಿಗೆ ತೊಂದರೆ

ಗುಂಡ್ಲುಪೇಟೆ: ತಾಲ್ಲೂಕಿನಾದ್ಯಾಂತ ಗುರುವಾರ ಬೆಳಿಗ್ಗೆಯಿಂದಲೆ ಸಣ್ಣ ಪ್ರಮಾಣದಲ್ಲಿ ಮಳೆ ಸುರಿಯುತ್ತಲೇ ಇರುವುದರಿಂದ ಕೃಷಿ ಚಟುವಟಿಕೆಗೆ ತೊಂದರೆಯಾಗಿದೆ. ಪೂರ್ವ ಮುಂಗಾರು ಮತ್ತು ಮುಂಗಾರಿನಲ್ಲಿ ಮಳೆಯಾಶ್ರಿತ ಬೆಳೆಗಳಿಗೆ ಮಳೆಯಿಂದಾಗಿ ನೆರವಾದರೆ ಕಟಾವಿಗೆ ಬಂದಿರುವ ಈರುಳ್ಳಿ, ರಾಗಿ, ಇನ್ನಿತರ ದ್ವಿದಳ ಧಾನ್ಯಗಳಿಗೆ ತೊಂದರೆಯಾಗುತ್ತಿದೆ. ದಿನ ಪೂರ್ತಿ ಮಳೆ ವಿರಾಮ ನೀಡದೆ ಸುರಿಯುತ್ತಲಿರುವುದರಿಂದ ಕೃಷಿ ಚಟುವಟಿಕೆ ಮಾಡಲು ತೊಂದರೆ ಆಗುತ್ತಿದೆ ಎಂದು ರೈತರೊಬ್ಬರು ತಿಳಿಸಿದರು.

ಕಳೆದ ಒಂದು ಜಮೀನು ಸ್ವಚ್ಛ ಮಾಎಇ ಬಿತ್ತನೆ ಮಾಡಲು ಕಾಯುತ್ತಿದ್ದೇವೆ, ಮಳೆ ವಿರಾಮ ನೀಡುತ್ತಿಲ್ಲ ಅದರಿಂದ ಬಿತ್ತನೆ ಕಾರ್ಯ ಮುಂದೂಡಬೇಕಿದೆ ಎಂದು ಬಸವಪುರ ಮಹದೇವಶೆಟ್ಟಿ ತಿಳಿಸಿದರು.

ಪಟ್ಟಣದಲ್ಲಿ ಸದಾ ಮಳೆ ಸುರಿಯುತ್ತಿರುವುದರಿಂದ ಬೀದಿ ಬದಿ ವ್ಯಾಪಾರಿಗಳಿಗೆ ತೊಂದರೆಯಾಯಿತು. ರಸ್ತೆಯಲ್ಲಿ ಗುಂಡಿಗಳಾಗಿ ನೀರು ನಿಂತಿರುವುದರಿಂದ ಜನ ಸಂಚಾರಕ್ಕೆ ತೊಂದರೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.