
ಚಾಮರಾಜನಗರ: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆತು ಉನ್ನತ ಪದವಿಗಳನ್ನು ಅಲಂಕರಿಸಿದಾಗ ಮಾತ್ರ ದೇಶದ ಅಭಿವೃದ್ದಿ ಸಾಧ್ಯ ಎಂದು ದಿ.ರಾಜಶೇಖರ ಮೂರ್ತಿ ದೃಢವಾಗಿ ನಂಬಿದ್ದರು ಎಂದು ಮರಿಯಾಲ ಮಠಾಧ್ಯಕ್ಷರಾದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ಹೇಳಿದರು.
ಕೇಂದ್ರ ಸಚಿವ ದಿ.ಎಂ.ರಾಜಶೇಖರಮೂರ್ತಿ ಅವರ 15ನೇ ಪುಣ್ಯಸ್ಮರಣೆ ಅಂಗವಾಗಿ ಸಮೀಪದ ಮರಿಯಾಲದ ಮುರುಘರಾಜೇಂದ್ರ ಸ್ವಾಮಿ ವಿದ್ಯಾಸಂಸ್ಥೆ ಆವರಣದಲ್ಲಿ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ, ರಾಜಕಾರಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡಿದ್ದ ರಾಜಶೇಖರ ಮೂರ್ತಿ ಶುದ್ಧ ಹಸ್ತರಾಗಿದ್ದರು. ಶಿಕ್ಷಣ ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಕನಸು ಕಟ್ಟಿಕೊಂಡಿದ್ದರು ಎಂದರು.
ಅವರ ದೂರದೃಷ್ಟಿತ್ವ ಹಾಗೂ ಶಿಕ್ಷಣ ಕ್ಷೇತ್ರದ ಬಗ್ಗೆ ಇದ್ದ ಅಪಾರ ಆಸಕ್ತಿಯ ಫಲವಾಗಿ ಮರಿಯಾಲದಲ್ಲಿ ಮಠದ ಶಿಕ್ಷಣ ಸಂಸ್ಥೆಗಳ ಅಭಿವೃದ್ದಿಗೆ ಹೆಚ್ಚಿನ ಒತ್ತು ದೊರೆಯಿತು. ಬೆಂಗಳೂರು, ಮೈಸೂರಿನಂತರ ದೊಡ್ಡ ನಗರಗಳಲ್ಲಿ ದೊರೆಯುವಂತ ಗುಣಾತ್ಮಕ ಶಿಕ್ಷಣ ಚಾಮರಾಜನಗರದಲ್ಲೂ ದೊರೆಯಬೇಕು ಎಂಬ ಕನಸು ಕಂಡಿದ್ದರು ಎಂದರು.
ಗ್ರಾಮೀಣ ಭಾಗದ ಯುವಜನತೆ ಶಿಕ್ಷಣಕ್ಕೆ ಮಹತ್ವ ನೀಡಬೇಕು, ಉನ್ನತ ಹುದ್ದೆಗಳನ್ನು ಪಡೆದು ಗ್ರಾಮೀಣ ಭಾಗದ ಅಭಿವೃದ್ಧಿಯಾಗಬೇಕು ಎಂಬ ಕನಸು ಕಂಡಿದ್ದರು. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದರು. ಮರಿಯಾಲ ಮಠದ ಹಿರಿಯ ಶ್ರೀಗಳೊಂದಿಗೆವಿದ್ಯಾಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ್ದರು. ಅವರ ಸೇವೆ ಸ್ಮರಿಸಿಕೊಳ್ಳಬೇಕಿರುವುದು ನಮ್ಮೆಲ್ಲರ ಕರ್ತವ್ಯ ಎಂದರು.
ದಿ.ರಾಜಶೇಖರ ಮೂರ್ತಿ ಅವರ ಪುತ್ರಿ ಶೀಲಾ ಹರಹಳಕಟ್ಟಿ ವಿದ್ಯಾರ್ಥಿಗಳಿಗೆ ಕ್ರೀಡಾ ಸಲಕರಣೆ ಮತ್ತು ಗ್ರಂಥಾಲಯಗಳಿಗೆ ಪುಸ್ತಕಗಳನ್ನು ವಿತರಿಸಿ ಮಾತನಾಡಿ, ತಂದೆ ರಾಜಶೇಖರಮೂರ್ತಿ ಕೇಂದ್ರ ಮತ್ತು ರಾಜ್ಯದಲ್ಲಿ ಸಚಿವರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಯುವ ರಾಜಕಾರಣಿಗಳನ್ನು ಬೆಳೆಸಿದ್ದಾರೆ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಹಾಸು ಹೊಕ್ಕಾಗಿರುವ ಬಗ್ಗೆ ಬದುಕಿದ್ದಾಗ ಬಹಳ ನೊಂದುಕೊಂಡಿದ್ದರು ಎಂದರು.
ವಿದ್ಯಾರ್ಥಿಗಳು ಭ್ರಷ್ಟಾಚಾರದ ವಿರುದ್ದ ಸೆಟೆದು ನಿಲ್ಲಬೇಕು. ಸಂಸ್ಕಾರಯುತ ಶಿಕ್ಷಣ ಪಡೆದು ಉತ್ತಮ ಸಮಾಜವನ್ನು ನಿರ್ಮಾಣ ಮಾಡುವ ಗುರಿ ಹೊಂದಬೇಕು, ಸರಳತೆ ಮತ್ತು ಪ್ರಾಮಾಣಿಕತೆ ರೂಡಿಸಿಕೊಂಡರೆ, ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಮಾಜದಲ್ಲಿ ಬದಲಾವಣೆ ತರಬಹುದು ಎಂದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ಬೌದ್ಧಿಕ, ಆಧ್ಯಾತ್ಮಿಕ ಶಿಕ್ಷಣ ನೀಡಿ ಸಮಾಜದ ಆಸ್ತಿಯನ್ನಾಗಿ ಮಾಡುವ ಹಾಗೂ ಸಂಸ್ಕಾರಯುತ ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ ಮಾಡುವ ಬಹುದೊಡ್ಡ ಕನಸು ಕಂಡಿದ್ದರು. ಎಲ್ಲ ವರ್ಗಗಳ ಬಡ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂಬ ನಿಟ್ಟಿನಲ್ಲಿ ಮಾದರಿ ಶಿಕ್ಷಣ ಕೇಂದ್ರವನ್ನು ಹಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ ನಿರ್ಮಾಣ ಮಾಡಲು ಶ್ರಮಿಸಿದ್ದರು ಎಂದರು.
ತಂದೆಯ ಪರಿಶ್ರಮ ಹಾಗೂ ಹಿರಿಯ ಶ್ರೀಗಳ ಆರ್ಶೀವಾದದಿಂದ ಮರಿಯಾಲದಲ್ಲಿ ಮುರುಘರಾಜೇಂದ್ರ ಸ್ವಾಮಿ ಶೈಕ್ಷಣಿಕ ಸಂಸ್ಥೆ ಆರಂಭಗೊಂಡು ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಹಾಗೂ ಸಂಸ್ಕಾರಯುತ ಶಿಕ್ಷಣ ನೀಡಲಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸುಮಾ, ಶಶಿ, ಶೋಭಾ, ಕಾಳನಹುಂಡಿ ಶಿವಕುಮಾರ ಸ್ವಾಮಿ, ಸಂಸ್ಥೆಯ ಪ್ರಾಂಶುಪಾಲ ಮೂಡ್ನಾಕೂಡು ಮಹದೇವಸ್ವಾಮಿ, ಶಿಕ್ಷಕರು, ಹಾಗೂ ತಡಿಮಾಲಂಗಿ ಮತ್ತು ಮರಿಯಾಲ ಗ್ರಾಮಸ್ಥರು, ವಿದ್ಯಾಸಂಸ್ಥೆಯ ಅಧ್ಯಕ್ಷರು, ಸದಸ್ಯರು, ನೌಕರರು, ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.