ADVERTISEMENT

ರಂಜಾನ್: ಹಣ್ಣುಗಳಿಗೆ ಬೇಡಿಕೆ... ಮಾರುಕಟ್ಟೆಗೆ ಕಲ್ಲಂಗಡಿ, ಅನಾನಸ್‌ ದಾಂಗುಡಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 8:17 IST
Last Updated 3 ಮಾರ್ಚ್ 2026, 8:17 IST
ಚಾಮರಾಜನಗರದ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಟ್ಟಿದ್ದ ಕಲ್ಲಂಗಡಿ ರಾಶಿ
ಚಾಮರಾಜನಗರದ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಟ್ಟಿದ್ದ ಕಲ್ಲಂಗಡಿ ರಾಶಿ   

ಚಾಮರಾಜನಗರ: ಮುಸ್ಲಿಮರ ಪವಿತ್ರ ರಂಜಾನ್ ಮಾಸ ಆರಂಭವಾಗಿದ್ದು, ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದೆ. ಕಲ್ಲಂಗಡಿ, ಪಪ್ಪಾಯ, ಅನಾನಸ್‌, ದ್ರಾಕ್ಷಿ, ಮೋಸಂಬಿ, ಕಿತ್ತಳೆ ಸಹಿತ ಹಲವು ಬಗೆಯ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಉತ್ತಮ ವ್ಯಾಪಾರ ನಡೆಯುತ್ತಿದೆ.

ನಗರದ ಬಿ.ರಾಚಯ್ಯ ಜೋಡಿ ರಸ್ತೆ, ಗುಂಡ್ಲುಪೇಟೆ ಸರ್ಕಲ್‌, ಸತ್ತಿ ರಸ್ತೆಯ ಪಾದಚಾರಿ ಮಾರ್ಗಗಳಲ್ಲಿ ಹಣ್ಣಿನ ಮಾರಾಟ ಮಳಿಗೆಗಳು ತಲೆ ಎತ್ತಿವೆ. ಗಾಡ ಹಸಿರು ಹಾಗೂ ತಿಳಿ ಹಸಿರು ಬಣ್ಣದ ಕಲ್ಲಂಗಡಿಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಗ್ರಾಹಕರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ.

ಹೊರ ಜಿಲ್ಲೆಗಳಿಂದ ಹೆಚ್ಚಾಗಿ ಕಲ್ಲಂಗಡಿ ಪೂರೈಕೆಯಾಗುತ್ತಿದ್ದು, ಕೆ.ಜಿಗೆ ₹ 20ರಿಂದ ₹ 30ರವರೆಗೆ ದರ ಇದೆ. ರಂಜಾನ್ ಮಾಸ ಆರಂಭವಾಗಿರುವುದು ಹಾಗೂ ಬಿಸಿಲಿನ ದಗೆ ಹೆಚ್ಚಾಗಿರುವುದರಿಂದ ಹಣ್ಣುಗಳ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ ಎಂದು ವ್ಯಾಪಾರಿ ಅನ್ಸಾರ್ ತಿಳಿಸಿದರು.

ADVERTISEMENT

ರಂಜಾನ್ ಮಾಸದಲ್ಲಿ ಮುಸ್ಲಿಮರು ಕಠಿಣ ಉಪವಾಸ ಪಾಲಿಸುವುದರಿಂದ ಬಿಸಲಿನ ತಾಪಕ್ಕೆ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ಪ್ರತಿ ದಿನ ಸಂಜೆ ಹೊತ್ತು ಆಯಾದಿನದ ಉಪವಾಸ ಅಂತ್ಯಗೊಳಿಸುವಾಗ ಕಲ್ಲಂಗಡಿ, ಎಳನೀರು, ಪಪ್ಪಾಯ, ಕಿತ್ತಳೆಯಂತಹ ದ್ರವಾಂಶ ಹೊಂದಿರುವ ಹಣ್ಣುಗಳನ್ನು ಸೇವಿಸುವುದು ರೂಢಿ.

ದೇಹವನ್ನು ತಂಪಾಗಿಡುವುದರ ಜೊತೆಗೆ ದಿನಪೂರ್ತಿ ಉಪವಾಸದಿಂದ ದಣಿದ ದೇಹಕ್ಕೆ ಹಣ್ಣುಗಳ ಸೇವನೆಯಿಂದ ಚೈತನ್ಯ ಸಿಗುವುದರಿಂದ ರಂಜಾನ್ ಮಾಸದಲ್ಲಿ ಸಹಜವಾಗಿ ಹಣ್ಣುಗಳಿಗೆ ಬೇಡಿಕೆ ಸೃಷ್ಟಿಯಾಗುತ್ತದೆ. ಮಾರುಕಟ್ಟೆಯ ತುಂಬೆಲ್ಲ ಹಣ್ಣುಗಳ ರಾಶಿ ತುಂಬಿರುತ್ತವೆ ಎನ್ನುತ್ತಾರೆ ವ್ಯಾಪಾರಿ ಮಹಮದ್.

ಬೆಲೆ ಸ್ವಲ್ಪ ದುಬಾರಿಯಾಗಿದ್ದರೂ ಖರೀದಿ ಉತ್ಸಾಹ ಇದೆ. ಗಾಢ ಹಸಿರು ಕಲ್ಲಂಗಡಿ ಕೆ.ಜಿಗೆ ₹ 20, ತಿಳಿ ಹಸಿರು (ಪಟ್ಟೆ ಮಾದರಿ) ಕಲ್ಲಂಗಡಿಗೆ ಕೆ.ಜಿಗೆ ₹ 30, ಪೈನಾಪಲ್‌ ಗಾತ್ರ ಹಾಗೂ ಗುಣಮಟ್ಟದ ಆಧಾರದ ಮೇಲೆ ಕೆ.ಜಿಗೆ ₹ 50ರಿಂದ ₹ 80, ಪಪ್ಪಾಯ ಕೆ.ಜಿಗೆ ₹ 20ರಿಂದ ₹ 30, ದ್ರಾಕ್ಷಿ ₹ 150ರಿಂದ ₹ 200, ಮೋಸಂಬಿ ₹ 100, ಏಲಕ್ಕಿ ಬಾಳೆ ಹಣ್ಣು ₹ 80, ಪಚ್ಚಬಾಳೆ ₹ 30ರಿಂದ ₹ 40, ಸಪೋಟ ₹ 80ರಿಂದ ₹ 100, ಸೇಬು ₹ 200ರಿಂದ ₹ 240ರವರೆಗೆ ದರ ಇದೆ.

ಕಿತ್ತಳೆ ದುಬಾರಿ:

ಈ ಬಾರಿ ಕಿತ್ತಳೆಹಣ್ಣಿನ ದರ ಹೆಚ್ಚಾಗಿದ್ದು, ಕೆ.ಜಿಗೆ ₹ 100ರಿಂದ ₹ 120ರವರೆಗೆ ಮಾರಾಟವಾಗುತ್ತಿದೆ. ಕಳೆದ ವರ್ಷ ಕೆ.ಜಿಗೆ ₹ 50ರಿಂದ ₹ 80ರವರೆಗೆ ದರ ಇತ್ತು. ಕಿತ್ತಳೆ ಸೀಸನ್ ಈಗಷ್ಟೆ ಆರಂಭವಾಗಿರುವುದು ಹಾಗೂ ಬೇಸಿಗೆ ರಂಜಾನ್ ಸಮಯದಲ್ಲಿ ತಂಪು ಪಾನೀಯ ತಯಾರಿಕೆಗೆ ಹೆಚ್ಚು ಬಳಕೆಯಾಗುವುದರಿಂದ ದರ ಹೆಚ್ಚಾಗಿದೆ. ಮಾರುಕಟ್ಟೆಗೆ ಆವಕ ಹೆಚ್ಚಾದರೆ ದರ ಇಳಿಮುಖವಾಗಲಿದೆ ಎಂದು ವ್ಯಾಪಾರಿಗಳು ತಿಳಿಸಿದರು.

ಚಾಮರಾಜನಗರದ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸುತ್ತಿರುವ ಗ್ರಾಹಕರು

ತಂಪು ಪಾನೀಯ ಅಂಗಡಿಗಳಲ್ಲಿ ದಟ್ಟಣೆ:

ಬಿಸಿಲಿನ ತಾಪ ತಣಿಸಿಕೊಳ್ಳಲು ಸಾರ್ವಜನಿಕರು ತಂಪು ಪಾನೀಯಗಳ ಮೊರೆ ಹೋಗಿದ್ದಾರೆ. ನಗರದ ತಂಪು ಪಾನೀಯ ಅಂಗಡಿಗಳು ಗ್ರಾಹಕರಿಂದ ಗಿಜಿಗುಡುತ್ತಿವೆ. ಕಲ್ಲಂಗಡಿ, ಕರಬೂಜ, ಪೈನಾಪಲ್‌, ಮೋಸಂಬಿ, ಕಿತ್ತಳೆ ಹಣ್ಣಿನ ಪಾನೀಯಕ್ಕೆ ಬೇಡಿಕೆ ಹೆಚ್ಚಾಗಿದೆ. ಜೊತೆಗೆ ಎಳನೀರಿನ ಮಾರಾಟವೂ ಜೋರಾಗಿದೆ. ಚಳಿಗಾಲದಲ್ಲಿ ₹ 40ಕ್ಕೆ ಇಳಿಕೆಯಾಗಿದ್ದ ಎಳನೀರು ₹ 50ರಿಂದ ₹ 60ಕ್ಕೆ ಜಿಗಿದಿದೆ. ಬಿಸಿಲಿನ ದಗೆ ಹೆಚ್ಚಾದರೆ ದರ ಮತ್ತಷ್ಟು ಹೆಚ್ಚಬಹುದು ಎನ್ನುತ್ತಾರೆ ವ್ಯಾಪಾರಿ ಕೃಷ್ಣ.

ಬೀನ್ಸ್ ದುಬಾರಿ:

ಕಳೆದವಾರ ಅಲ್ಪ ಇಳಿಕೆಯಾಗಿದ್ದ ಬೀನ್ಸ್ ಮತ್ತೆ ಏರುಗತಿಯಲ್ಲಿ ಸಾಗಿದೆ. ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 80ರಿಂದ ₹ 100ರವರೆಗೂ ಬೆಲೆ ಇದ್ದು, ಗ್ರಾಹಕರ ಜೇಬಿಗೆ ಹೊರೆಯಾಗಿದೆ. ಬೆಳ್ಳುಳ್ಳಿಗೂ ಬೇಡಿಕೆ ಹೆಚ್ಚಾಗಿದ್ದು, ಕೆ.ಜಿಗೆ ₹ 180ರಿಂದ ₹ 200 ತಲುಪಿದೆ. ಇತರೆ ತರಕಾರಿಗಳ ದರದಲ್ಲಿ ಹೆಚ್ಚು ಬದಲಾವಣೆಯಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.