ADVERTISEMENT

ಅಂಗವಿಕಲ ಸಾಧಕನಿಗೆ ವೈಯಕ್ತಿಕ ಪ್ರಶಸ್ತಿಯ ಗರಿ

ಅಂಗವಿಕಲರ ಇಲಾಖೆ ನೀಡುವ ಗೌರವಕ್ಕೆ ಕಲಾವಿದ ರಾಮಣ್ಣ ಆಯ್ಕೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 1:23 IST
Last Updated 10 ಫೆಬ್ರುವರಿ 2021, 1:23 IST
ರಾಮಣ್ಣ
ರಾಮಣ್ಣ   

ಚಾಮರಾಜನಗರ: ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಅಂಗವಿಕಲರ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಅಂಗವಿಕಲರಿಗೆ ನೀಡುವ ವೈಯಕ್ತಿಕ ಪ್ರಶಸ್ತಿಗೆ ಚಾಮರಾಜನಗರ ತಾಲ್ಲೂಕಿನ ಕೆಲ್ಲಂಬಳ್ಳಿ ತಾಲ್ಲೂಕಿನ ರಂಗಭೂಮಿ ಕಲಾವಿದ ರಾಮಣ್ಣ ಅವರು ಆಯ್ಕೆಯಾಗಿದ್ದಾರೆ.

ಗುರುವಾರ (ಫೆ.11) ಬೆಂಗಳೂರಿನ ರವೀಂದ್ರ ಕ್ಷೇತ್ರದಲ್ಲಿ ನಡೆಯಲಿರುವ ‘ವಿಶ್ವ ಅಂಗವಿಕಲರ ಮತ್ತು ಹಿರಿಯ ನಾಗರಿಕರ ದಿನಾಚರಣೆ’ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಶಸ್ತಿಯು ₹15 ಸಾವಿರ ನಗರ, ಫಲಕವನ್ನು ಒಳಗೊಂಡಿದೆ.

65 ವರ್ಷ ವಯಸ್ಸಿನ ರಾಮಣ್ಣ ಅವರು 45 ವರ್ಷಗಳಿಂದ ರಂಗಭೂಮಿಯಲ್ಲಿ ನಟರಾಗಿ ಗುರುತಿಸಿಕೊಂಡಿದ್ದಾರೆ. ಕೈ ಊನಗೊಂಡಿದ್ದರೂ, ಕಲಾ ಸಾಧನೆಗೆ ಅದು ಅಡ್ಡಿಯಾಗಿಲ್ಲ. ಖ್ಯಾತ ಗಾಯಕ ಮಳವಳ್ಳಿ ಮಹದೇವಸ್ವಾಮಿ ಅವರ ತಂಡದಲ್ಲಿ ಈಗಲೂ ಸಕ್ರಿಯರಾಗಿದ್ದಾರೆ.

ADVERTISEMENT

ಕಲೆಯೊಂದಿಗಿನ ನಂಟು ರಾಮಣ್ಣ ಅವರಿಗೆ ವಂಶ ಪಾರಂಪರ್ಯವಾಗಿ ಸಿಕ್ಕ ಬಳುವಳಿ. ಅವರ ಅಜ್ಜ ಮೃದಂಗ ವಾದಕರಾಗಿದ್ದರು. ತಂದೆ ನಂಜಯ್ಯ ಅವರು ರಂಗಭೂಮಿ ನಟರಾಗಿದ್ದರು. ತಂದೆಗೆ ಒಲಿದಿದ್ದ ಬಣ್ಣ ಹಚ್ಚುವ ಕಲೆಯನ್ನು ಇವರು ಮುಂದುವರಿಸಿದ್ದಾರೆ. 80ಕ್ಕೂ ಹೆಚ್ಚು ಪೌರಾಣಿಕ ನಾಟಕಗಳಲ್ಲಿ ಪಾತ್ರ ಮಾಡಿದ್ದಾರೆ. ಕುರುಕ್ಷೇತ್ರ, ಕಂಡಾಯದ ಕೋಳಿ, ಧರ್ಮ ರತ್ನಾಕರ ಸೇರಿದಂತೆ ಹಲವು ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಎರಡು ಮೂರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಕಂಠದಾನ ಕಲಾವಿದರಾಗಿಯೂ ದುಡಿದಿದ್ದಾರೆ. ಜಾನಪದ ಗಾಯಕರಾಗಿಯೂ ಗುರುತಿಸಿಕೊಂಡಿರುವ ರಾಮಣ್ಣ ಅವರು ಬಹುಮುಖ ಪ್ರತಿಭೆ.

‘ಬಡತನದ ಕುಟುಂಬ ನಮ್ಮದು. ಕೂಲಿ ನಾಲಿ ಮಾಡಿ ಜೀವಿಸುತ್ತಿದ್ದೆವು. ಮೈಸೂರಿನ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದೆ. ಐದು ವರ್ಷ ಅಲ್ಲಿ ಕೆಲಸ ಮಾಡಿದ್ದೆ. ಕೈ ಯಂತ್ರಕ್ಕೆ ಸಿಲುಕಿ ತುಂಡಾಯಿತು. ಆ ಬಳಿಕ ಅಂಗವಿಕಲನಾದೆ. ನಂತರ ಮೈಸೂರಿನ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದೆ. ಅದರ ನಡುವೆಯೇ ನನ್ನ ಕಲಾ ಸೇವೆ ಮುಂದುವರಿದಿತ್ತು. ಅವಕಾಶ ಸಿಕ್ಕಾಗಲೆಲ್ಲ ನಾಟಕಗಳಲ್ಲಿ ಪಾತ್ರ ಮಾಡುತ್ತಿದ್ದೆ’ ಎಂದು ತಮ್ಮ ಕಲಾ ಪಯಣವನ್ನು ರಾಮಣ್ಣ ವಿವರಿಸಿದರು.

‘ಪ್ರಶಸ್ತಿ ಸಿಕ್ಕಿರುವುದಕ್ಕೆ ‌ಖುಷಿಯಾಗಿದೆ. ಸರ್ಕಾರ ನನ್ನನ್ನು ಗುರುತಿಸಿರುವುದು ಸಂತಸ ತಂದಿದೆ. ಇದರಲ್ಲಿ ಜಾನಪದ ಕಲಾವಿದ ಸಿ.ಎಂ.ನರಸಿಂಹಮೂರ್ತಿ ಅವರ ಕೊಡುಗೆಯೂ ಇದೆ’ ಎಂದು ರಾಮಣ್ಣ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.