ADVERTISEMENT

ಹನೂರು ಕನ್ನಡ ಸಾಹಿತ್ಯ ಸಮ್ಮೇಳನ | ಸರ್ಕಾರದಿಂದ ಗಡಿ ಭಾಗದ ನಿರ್ಲಕ್ಷ್ಯ: ಬಸವರಾಜ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2023, 19:31 IST
Last Updated 10 ಫೆಬ್ರುವರಿ 2023, 19:31 IST
ರಾಮಾಪುರದ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಸಮ್ಮೇಳನಕ್ಕಾಗಿ ಶನಿವಾರ ವೇದಿಕೆ ಸಿದ್ಧಪಡಿಸಲಾಯಿತು
ರಾಮಾಪುರದ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಸಮ್ಮೇಳನಕ್ಕಾಗಿ ಶನಿವಾರ ವೇದಿಕೆ ಸಿದ್ಧಪಡಿಸಲಾಯಿತು   

ಹನೂರು: ತಾಲ್ಲೂಕು ಮಟ್ಟದ 2ನೇ ಕನ್ನಡ ಸಾಹಿತ್ಯ ಸಮ್ಮೇಳನ ಶನಿವಾರ (ಫೆ.11) ರಾಮಾಪುರದಲ್ಲಿ ನಡೆಯಲಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಸು.ಬಸವರಾಜ ದೊಡ್ಡಟ್ಟಿ ಆಯ್ಕೆಯಾಗಿದ್ದಾರೆ.

ರಾಮಾಪುರದ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ದಿನಪೂರ್ತಿ ನುಡಿ ಜಾತ್ರೆ ನಡೆಯಲಿದ್ದು, ಯಶಸ್ಸಿಯಾಗಿ ಸಮ್ಮೇಳನ ನಡೆಸಲು ತಾಲ್ಲೂಕು ಕಸಾಪ ಸಜ್ಜುಗೊಂಡಿದೆ.

ಶಿಕ್ಷಣ ಕ್ಷೇತ್ರದಲ್ಲಿ ನೀಡಿರುವ ಸೇವೆ ಮತ್ತು ಗ್ರಾಮಾಂತರ ಬಡಮಕ್ಕಳಿಗೆ ಶಿಕ್ಷಣ ನೀಡುವುದಕ್ಕಾಗಿ ಬಸವರಾಜ ದೊಡ್ಡಟ್ಟಿ ಅವರು ಮಾಡಿರುವ ಸೇವಾಕಾರ್ಯಗಳನ್ನು ಗಮನಿಸಿ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಶಿಕ್ಷಕರಾಗಿ ನೇಮಕಗೊಂಡಿದ್ದ ಸು. ಬಸವರಾಜ ದೊಡ್ಡಟ್ಟಿ ಸಾಮಾಜಿಕ, ಸೇವಾಕಾರ್ಯದಲ್ಲೂ ಗಣನೀಯವಾಗಿ ಸಾಧನೆ ಮಾಡಿದ್ದಾರೆ. 38 ವರ್ಷಗಳ ಇವರ ಸೇವಾ ಅವಧಿಯಲ್ಲಿ 36 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಧಾರೆ ಎರೆದಿದ್ದಾರೆ. ಬರಹಗಾರರಾಗಿ, ಕಲಾವಿದರಾಗಿ, ಲಘುಸಂಗೀತಗಾರರಾಗಿಯೂ ಅವರು ಗುರುತಿಸಿಕೊಂಡಿದ್ದಾರೆ.

ADVERTISEMENT

ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಈವರೆಗೆ ಶಿಕ್ಷಣಕ್ಕೆ ಸಂಬಂಧಿಸಿದ 12 ಶೈಕ್ಷಣಿಕ ಪ್ರಬಂಧಗಳು, 13 ಕಥೆಗಳು, 10 ಪ್ರಬಂಧಗಳು, 4 ನಾಟಕಗಳನ್ನು ಬರೆದಿದ್ದಾರೆ. 5 ಕೃತಿಗಳು ಅಚ್ಚಿನಲ್ಲಿದ್ದು, ನಾಲ್ಕು ಕೃತಿಗಳು ಇನ್ನೂ ಪ್ರಕಟಗೊಂಡಿಲ್ಲ.

ಶ್ರೇಷ್ಠ ಕಾರ್ಯಕ್ಷಮತೆಯ ಸೇವೆಗಾಗಿ ಕೇಂದ್ರ ಸರ್ಕಾರದ ಜನಗಣತಿ ಕಾರ್ಯಾಲಯವು ಇವರಿಗೆ 1991ರಲ್ಲಿ ಜನಗಣತಿ ಪ್ರಶಸ್ತಿ ನೀಡಿ ಗೌರವಿಸಿದೆ. ಶಿಕ್ಷಣ ಇಲಾಖೆ 2002ರಲ್ಲಿ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ ನೀಡಿದೆ. ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3180 ವತಿಯಿಂದ 2003ರಲ್ಲಿ ಆದರ್ಶ ಶಿಕ್ಷಕ, 2005ರಲ್ಲಿ ನಂಜನಗೂಡಿನ ಎಸ್.ಜಿ.ವಿ.ಕೆ ಸೇವಾ ಸಂಸ್ಥೆ ವತಿಯಿಂದ ಬಸವಭಣಾನು ಪ್ರಶಸ್ತಿ ಮತ್ತು ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ 2013ರಲ್ಲಿ ಶಿಕ್ಷಣ ರತ್ನ ಪ್ರಶಸ್ತಿಗಳಿಗೆ ಬಸವರಾಜ ಭಾಜನರಾಗಿದ್ದಾರೆ.

ಕನ್ನಡ ಭಾಷೆಗೆ ಕುತ್ತು: ಸಮ್ಮೇಳನದ ಹೊಸ್ತಿಲಿನಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಬಸವರಾಜ ದೊಡ್ಡಟ್ಟಿ, ‘ತಾಲ್ಲೂಕಿನ ಗಡಿಭಾಗದಲ್ಲಿ ಕನ್ನಡ ಭಾಷೆ, ಸಂಸ್ಕೃತಿಗೆ ಮೇಲಿಂದ ಮೇಲೆ ಧಕ್ಕೆಯಾಗುತ್ತಿದೆ. ತಮಿಳು ಪ್ರಭಾವಿರುವ ಗಡಿಭಾಗದಲ್ಲಿ ಕನ್ನಡದ ಅಸ್ಮಿತೆ ದಿನೇ ದಿನೇ ಕಡಿಮೆಯಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಚೆನ್ನೈ ಮಹಾಸಂಸ್ಥಾನದ ವ್ಯಾಪ್ತಿಗೆ ಒಳಪಟ್ಟಿದ್ದ ಕರ್ನಾಟಕದ ಬಹುಭಾಗ 1956ರ ನಂತರ ಕರ್ನಾಟಕದ ಏಕೀಕರಣಕ್ಕೆ ಒಳಪಟ್ಟಿತು. ಆದರೆ ತದನಂತರದಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು ಏಕೀಕರಣದ ಸಂದರ್ಭದಲ್ಲಿ ಗಡಿನಾಡುಗಳನ್ನು ಭದ್ರಪಡಿಸಬೇಕಿತ್ತು. ಅದರೆ ಇಚ್ಛಾಶಕ್ತಿ ಕೊರತೆಯಿಂದಾಗಿ ಇಂದಿಗೂ ಗಡಿಭಾಗಗಳಲ್ಲಿ ಕನ್ನಡ ಭಾಷೆ ಅರೆಜೀವವಾಗಿ ನಿಂತಿವೆ. ಗಡಿಭಾಗದ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಲ್ಲಿರುವ ಉದಾಸೀನವೇ ಇದಕ್ಕೆ ಮುಖ್ಯ ಕಾರಣ’ ಎಂದರು.

‘ತಾಲ್ಲೂಕಿನ ನಾಲ್‌ರೋಡ್‌ನಿಂದ ಆಚೆಗೆ ತಮಿಳುನಾಡು ಭಾಗದಲ್ಲಿರುವ ರಸ್ತೆ ಸೌಲಭ್ಯ ನಮ್ಮಲ್ಲಿಲ್ಲ. ಯಾವುದೇ ಭಾಗ ಅಭಿವೃದ್ಧಿಯಾಗಬೇಕಾದರೂ ರಸ್ತೆ ಸಂಪರ್ಕ ಮುಖ್ಯ. ಆದರೆ ಗಡಿಭಾಗದ ಗ್ರಾಮಗಳಲ್ಲಿ ಇಂದಿಗೂ ಸಮರ್ಪಕ ರಸ್ತೆಗಳಿಲ್ಲ. ಗಡಿಭಾಗದ ಜನರಲ್ಲಿ ಕನ್ನಡದ ಬಗ್ಗೆ ಅಭಿಮಾನ ಬೆಳೆಸಲು ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಜತೆಗೆ ನಾಡಿನ ಭಾಷೆಗಾಗಿ ಮಿಡಿಯುವ ಶಿಕ್ಷಕರನ್ನು ಗುರುತಿಸಿ ಅವರನ್ನು ಗಡಿಭಾಗದ ಶಾಲೆಗಳಿಗೆ ನಿಯೋಜಿಸಬೇಕು’ ಎಂಬುದು ಅವರ ಸಲಹೆ.

ಸಮ್ಮೇಳನದಲ್ಲಿ ಏನೇನು?
ಹನೂರು ಪ್ರತ್ಯೇಕ ತಾಲ್ಲೂಕು ಆದ ಬಳಿಕ ನಡೆಯುತ್ತಿರುವ ಎರಡನೇ ಸಾಹಿತ್ಯ ಸಮ್ಮೇಳನ ಇದು.

ಬೆಳಿಗ್ಗೆ 8 ಗಂಟೆಗೆ ತಹಶೀಲ್ದಾರ್ ಆನಂದಯ್ಯ ರಾಷ್ಟ್ರಧ್ವಜರೋಹಣ ನೆರವೇರಿಸುವರು. ಇನ್‌ಸ್ಪೆಕ್ಟರ್ ಸಂತೋಷ್ ಕಶ್ಯಪ್ ನಾಡ ಧ್ವಜಾರೋಹಣ ಮಾಡುವರು ಮತ್ತು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲೇಶ್ ಮಾಲಿಂಕಟ್ಟೆ ಪರಿಷತ್ತಿನ ಧ್ವಜಾರೋಹಣ ಮಾಡಲಿದ್ದಾರೆ.

8:30ಕ್ಕೆ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಾಕ್ಷಾಯಿಣಿ ಚಾಲನೆ ನೀಡಲಿದ್ದಾರೆ.

10:30ಕ್ಕೆ ನಡೆಯುವ ಸಮಾರಂಭದ ಸಾನಿಧ್ಯವನ್ನು ಸಾಲೂರು ಮಠದ ಶಾಂತಮಲ್ಲಿಕಾರ್ಜುನಸ್ವಾಮಿ ವಹಿಸಲಿದ್ದಾರೆ. ರಾಜ್ಯ ಮುಕ್ತ ವಿವಿ ಕನ್ನಡ ಪ್ರಾಧ್ಯಾಪಕ ಡಾ.ಡಿ ನಾಗಣ್ಣ ಉದ್ಘಾಟಿಸಲಿದ್ದಾರೆ. ಶಾಸಕ ಆರ್. ನರೇಂದ್ರ ಅಧ್ಯಕ್ಷತೆ ವಹಿಸಲಿದ್ದು, ಕಸಾಪ ಜಿಲ್ಲಾಧ್ಯಕ್ಷ ಎಂ. ಶೈಲ ಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ವಿಚಾರ ಗೋಷ್ಠಿ ಹಾಗೂ 2 ಗಂಟೆಗೆ ಕವಿಗೋಷ್ಠಿ ನಡೆಯಲಿದೆ. ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ.

**

ಕನ್ನಡ ಭಾಷೆ, ಸಂಸ್ಕೃತಿಯನ್ನು ಗಡಿ ಭಾಗಗಳಲ್ಲಿ ಗಟ್ಟಿಗೊಳಿಸಿದಾಗ ಮಾತ್ರ ಕನ್ನಡದ ಅಸ್ತಿತ್ವ ಉಳಿಯಲು ಸಾಧ್ಯ.
–ಸು.ಬಸವರಾಜು ದೊಡ್ಡಟ್ಟಿ, ಸಮ್ಮೇಳನ ಸರ್ವಾಧ್ಯಕ್ಷರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.