ADVERTISEMENT

ಗುಂಡ್ಲುಪೇಟೆ: ವಸತಿಗೃಹ, ರೆಸಾರ್ಟ್ ಬಂದ್, ಪ್ರವಾಸಿಗರನ್ನೇ ನಂಬಿದ್ದವರು ತತ್ತರ

ಮಲ್ಲೇಶ ಎಂ.
Published 29 ಏಪ್ರಿಲ್ 2020, 19:45 IST
Last Updated 29 ಏಪ್ರಿಲ್ 2020, 19:45 IST
ಗುಂಡ್ಲುಪೇಟೆ ತಾಲ್ಲೂಕಿನ ಮೇಲುಕಾಮನಹಳ್ಳಿಯಲ್ಲಿರುವ ಜಂಗಲ್‌ ಅಂಡ್‌ ಲಾಡ್ಜಸ್‌ನ ರೆಸಾರ್ಟ್‌ ಮುಚ್ಚಿರುವುದು
ಗುಂಡ್ಲುಪೇಟೆ ತಾಲ್ಲೂಕಿನ ಮೇಲುಕಾಮನಹಳ್ಳಿಯಲ್ಲಿರುವ ಜಂಗಲ್‌ ಅಂಡ್‌ ಲಾಡ್ಜಸ್‌ನ ರೆಸಾರ್ಟ್‌ ಮುಚ್ಚಿರುವುದು   

ಗುಂಡ್ಲುಪೇಟೆ: ಕೋವಿಡ್‌–19ರ ತಡೆಗಾಗಿ ಹೇರಲಾಗಿರುವ ಲಾಕ್‌ಡೌನ್‌ನಿಂದಾಗಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿದ್ದು, ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರನ್ನೇ ನಂಬಿ ನಡೆಸುತ್ತಿದ್ದ ಉದ್ಯಮಗಳು ತತ್ತರಿಸಿವೆ. ಇಲ್ಲಿ ಕೆಲಸ ಮಾಡುತ್ತಿದ್ದವರ ಬದುಕು ಕೂಡ ಅಡಕ್ಕತ್ತರಿಯಲ್ಲಿ ಸಿಲುಕಿದಂತಾಗಿದೆ.

ತಾಲ್ಲೂಕಿನಲ್ಲಿ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶ, ಗೋಪಾಲಸ್ವಾಮಿ ಬೆಟ್ಟ ಹಾಗೂ ತಮಿಳುನಾಡಿನ ಊಟಿ ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರು, ಸಫಾರಿ ನೋಡಲು ಬರುವವರು ಉಳಿದುಕೊಳ್ಳಲು ಹೆಚ್ಚಾಗಿ ಇಲ್ಲಿನ ವಸತಿ ಗೃಹಗಳು, ರೆಸಾರ್ಟ್‌ಗಳು, ಹೋಂ ಸ್ಟೇಗಳನ್ನು ನಂಬಿದ್ದರು.

ತಾಲ್ಲೂಕಿನಲ್ಲಿ ಬಂಡೀಪುರ ವಸತಿ ಗೃಹ ಮತ್ತು ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್‌ನ ವಸತಿ ಗೃಹ ಸೇರಿದಂತೆ ರಾಷ್ಟ್ರೀಯ ಉದ್ಯಾನನ ಕಾಡಂಚಿನಲ್ಲಿ ಮೂರು ಐಷಾರಾಮಿ ಖಾಸಗಿ ವಸತಿ ಗೃಹಗಳು, ಅಲ್ಲದೆ ಹತ್ತಕ್ಕೂ ವಸತಿ ಗೃಹಗಳು ಇವೆ. ಗುಂಡ್ಲುಪೇಟೆ ಪಟ್ಟಣದಲ್ಲೂ ಹಲವು ಲಾಡ್ಜ್‌ಗಳು ಇವೆ. ಇವುಗಳೆಲ್ಲದರ ಆದಾಯ ಮೂಲ ಪ‍್ರವಾಸಿಗರೇ ಆಗಿದ್ದರು.

ADVERTISEMENT

ಈ ರೆಸಾರ್ಟ್‌, ವಸತಿ ಗೃಹಗಳಲ್ಲಿಮಂಗಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಂಗಲ, ಜಕ್ಕಹಳ್ಳಿ, ಯಲಚೆಟ್ಟಿ, ಕಣಿಯನಪುರ ಸೇರಿದಂತೆ ಆದಿವಾಸಿ ಜನಾಂಗದ ಕಾಲೋನಿಯ ನೂರಕ್ಕೂ ಹೆಚ್ಚಿನ ಯುವಕರು ಉದ್ಯೋಗ ಮಾಡುತ್ತ ಜೀವನ ರೂಪಿಸಿಕೊಂಡಿದ್ದರು. ಇದೀಗ ಲಾಕ್ ಡೌನ್ ಹಿನ್ನೆಲೆಯಲ್ಲಿ ಎಲ್ಲಾ ವಸತಿ ಗೃಹಗಳು ಬಂದ್ ಆಗಿದೆ.

ಇದರಿಂದಾಗಿ ಕೆಲ ಯುವಕರು ಗ್ರಾಮೀಣ ಭಾಗದಲ್ಲಿ ದೊರಕುವ ಕೂಲಿ ಕೆಲಸಗಳಿಗೆ ಹೋಗುತ್ತಿದ್ದಾರೆ. ಮಹಿಳೆಯರು ಜಮೀನಿನ ಕೆಲಸಕ್ಕೆ ಹೋಗುತ್ತಿದ್ದಾರೆ. ಖಾಸಗಿ ರೆಸಾರ್ಡ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯುರಿಟಿ ಗಾರ್ಡ್, ಹೌಸ್‌ ಕೀಪರ್ ಸೇರಿದಂತೆ ಅನೇಕ ಸಿಬ್ಬಂದಿ ಕೆಲಸ ಇಲ್ಲದೆ ಬೇರೆ ಕೆಲಸಗಳನ್ನು ಹುಡುಕುತ್ತಿದ್ದಾರೆ.

ಸಾಮಾನ್ಯವಾಗಿ ಇದು ಬೇಸಿಗೆಯ ರಜಾ ಸಮಯವಾಗಿರುವುದರಿಂದಮಾರ್ಚ್‌ನಿಂದ ಜೂನ್‌ವರೆಗೆ ಎಲ್ಲ‌ ವಸತಿ ಗೃಹಗಳು ತುಂಬಿರುತ್ತಿದ್ದವು. ಪ್ರವಾಸಿಗರಿಂದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಇರುವ ಅಂಗಡಿಗಳಿಗೆ, ಹೋಟೆಲ್‌ಗಳಿಗೆ ವ್ಯಾಪಾರ ಆಗುತ್ತಿತ್ತು. ವಾಹನಗಳ ಸಂಚಾರ ಇಲ್ಲದಿರುವುದರಿಂದ ಈಗ ಸ್ತೆಯಲ್ಲಿ ಬದಿಯಲ್ಲಿ ಇರುವ ಅಂಗಡಿಗಳನ್ನು ತೆರೆಯುತ್ತಿಲ್ಲ.

ಜೀವನಕ್ಕೆ ಕಷ್ಟವಾಗಿದೆ...

‘ಈ ಸಮಯದಲ್ಲಿ ರಸ್ತೆಯಲ್ಲಿ ತುಂಬ ವಾಹನಗಳು ಓಡಾಡುವುದರಿಂದ ಮೂರ್ನಾಲ್ಕು ತಿಂಗಳು ಉತ್ತಮ ವ್ಯಾಪಾರ ಆಗುತ್ತಿತ್ತು. ಈ ಬಾರಿ ಉತ್ತಮ ವ್ಯಾಪಾರದ ನಿರೀಕ್ಷೆಯಲ್ಲಿ ಇದ್ದೆ‌ವು. ಲಾಕ್‌ಡೌನ್‌ ಆದಾಗಿನಿಂದ ವ್ಯಾಪಾರ ಇಲ್ಲದೆ ಅಂಗಡಿಗಳನ್ನು ತೆರೆಯುತ್ತಿಲ್ಲ. ಇದನ್ನೇನಂಬಿ ಜೀವನ ನಡೆಸುತ್ತಿರುವ ನಾವು ಏನು ಮಾಡುವುದು? ಸಾಲಗಾರರಿಗೆ ಏನು ಹೇಳುವುದು ಎಂದು ಗೊತ್ತಾಗುತ್ತಿಲ್ಲ’ ಎಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸದಾ ವ್ಯಾಪಾರ ಮಾಡುತ್ತಿದ್ದ ಸೂರಜ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ವರ್ಷ ಈ ಸಮಯದಲ್ಲಿ ವಸತಿ ಗೃಹಗಳು ತುಂಬಿದ್ದವು. ಪ್ರವಾಸಿಗರ ಸಂಖ್ಯೆಯೂ ಹೆಚ್ಚಿತ್ತು. ಹಾಗಾಗಿ ರಜೆ ಇರಲಿಲ್ಲ. ಈ ವರ್ಷ ರಜೆ ಬೇಕಾದಷ್ಟಿದೆ. ಅದನ್ನು ಕಳೆಯುವುದೇ ಬೇಸರವಾಗುತ್ತಿದೆ’ ಎಂದು ಸೆರಾಯ್ ರೆಸಾರ್ಟ್‌ ಉದ್ಯೋಗಿ ಶಿವಕುಮಾರ್ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.