ADVERTISEMENT

ಕೆಂಪು ವಲಯದಿಂದ ಚಾಮರಾಜನಗರ ಜಿಲ್ಲೆಗೆ ಬರುವುದಕ್ಕೆ ನಿರ್ಬಂಧ

ಸೂರ್ಯನಾರಾಯಣ ವಿ
Published 11 ಮೇ 2020, 20:00 IST
Last Updated 11 ಮೇ 2020, 20:00 IST
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ   

ಚಾಮರಾಜನಗರ: ಕೋವಿಡ್‌–19ಗೆ ಸಂಬಂಧಿಸಿದಂತೆ ‘ಅತಿ ಹೆಚ್ಚು ಅಪಾಯ’ ಇರುವ ಐದು ರಾಜ್ಯಗಳು ಹಾಗೂ ಇತರ ರಾಜ್ಯಗಳ ಕೆಂಪುವಲಯದಲ್ಲಿರುವ ಚಾಮರಾಜನಗರದ ಜನರು ಜಿಲ್ಲೆಗೆ ಪ್ರವೇ‌ಶಿಸುವುದಕ್ಕೆ ಜಿಲ್ಲಾಡಳಿತ ಸದ್ಯ ನಿರ್ಬಂಧ ವಿಧಿಸಿದೆ.

ಕೆಂಪು ವಲಯ ಹಾಗೂ ಕೋವಿಡ್‌ ಪ್ರಕರಣಗಳು ಹೆಚ್ಚು ಇರುವ ರಾಜ್ಯಗಳಿಂದ ಜನರು ಬಂದರೆ ಜಿಲ್ಲೆಗೂ ಸೋಂಕು ತಗಲುವ ಸಾಧ್ಯತೆ ಇರುವುದರಿಂದ ಅಂತಹ ಸ್ಥಳಗಳಲ್ಲಿರುವವರಿಗೆ ಜಿಲ್ಲೆಗೆ ಬರಲು ಅನುಮತಿ ನೀಡುವ ವಿಚಾರದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ.

ಹೊರರಾಜ್ಯಗಳಿಂದ ಜಿಲ್ಲೆಗೆ ಬರಲು ಇದುವರೆಗೆ ಸೇವಾ ಸಿಂಧು ವೆಬ್‌ತಾಣದಲ್ಲಿ 385 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಗಳು ಅನುಮತಿ ನೀಡಿದ ನಂತರವಷ್ಟೇ ಅವರು ಜಿಲ್ಲೆಗೆ ಬರಬಹುದು. ಕೇರಳ ಮತ್ತು ತಮಿಳುನಾಡಿನಲ್ಲೇ ಹೆಚ್ಚು ಜನರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಸದ್ಯ, ಕೇರಳ ಸೇರಿದಂತೆ ಬೇರೆ ರಾಜ್ಯಗಳ ಹಸಿರು ಹಾಗೂ ಹಳದಿ ವಲಯಗಳಲ್ಲಿರುವ 124 ಮಂದಿಗೆ ಮಾತ್ರ ಜಿಲ್ಲೆಗೆ ಬರುವುದಕ್ಕೆ ಡಾ.ಎಂ.ಆರ್.ರವಿ ಅವರು ಅನುಮತಿ ನೀಡಿದ್ದಾರೆ. ಹೊರ ರಾಜ್ಯಗಳ ಕೆಂಪು ವಲಯಗಳು ಹಾಗೂ ಕೇಂದ್ರ ಸರ್ಕಾರ ಪಟ್ಟಿ ಮಾಡಿರುವ ಹೆಚ್ಚು ಅಪಾಯಕಾರಿ (ಹೈ ರಿಸ್ಕ್‌) ರಾಜ್ಯಗಳಾದ ರಾಜಸ್ಥಾನ, ಗುಜರಾತ್‌, ಮಹಾರಾಷ್ಟ್ರ, ದೆಹಲಿ ಮತ್ತು ತಮಿಳುನಾಡುಗಳಿಂದ ಬರಲು ಇಚ್ಛಿಸಿರುವರಿಗೆ ಅನುಮತಿ ನೀಡಲಾಗಿಲ್ಲ.

‘ನಮ್ಮ ಜಿಲ್ಲೆ ಸೋಂಕು ಮುಕ್ತವಾಗಿದೆ. ಈಗ ಹೊರ ಜಿಲ್ಲೆಗಳಿಂದ 1,780 ಮಂದಿ ಬರುವುದಕ್ಕೆ ಅವಕಾಶ ನೀಡಲಾಗಿದೆ. ಅವರ ಆರೋಗ್ಯ ತಪಾಸಣೆ ಮಾಡಿ, ರೋಗ ಲಕ್ಷಣ ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡು ಮನೆಗೆ ಕಳುಹಿಸಲಾಗಿದೆ. ಹೊರ ರಾಜ್ಯಗಳಲ್ಲಿರುವ ಜಿಲ್ಲೆಯ ಜನರು ಕೂಡ ಸೇವಾ ಸಿಂಧು ವೆಬ್‌ತಾಣದಲ್ಲಿ ಮನವಿ ಸಲ್ಲಿಸಿದ್ದಾರೆ. 124 ಜನರಿಗೆ ಅನುಮತಿ ನೀಡಿದ್ದೇನೆ’ ಎಂದು ಡಾ.ಎಂ.ಆರ್.ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಅನುಮತಿ ನೀಡಿರುವವರೆಲ್ಲರೂ ಬೇರೆ ರಾಜ್ಯಗಳ ಹಳದಿ ಮತ್ತು ಹಸಿರು ವಲಯಗಳಲ್ಲಿ ಇರುವವರು. ಹೊರ ರಾಜ್ಯಗಳ ಕೆಂಪುವಲಯದಲ್ಲಿರುವ ಹಾಗೂ ಕೇಂದ್ರ ಸರ್ಕಾರ ಪಟ್ಟಿ ಮಾಡಿರುವ ಹೆಚ್ಚು ಅಪಾಯದ ಸಾಧ್ಯತೆ ಇರುವ ರಾಜ್ಯಗಳಲ್ಲಿ ಇರುವರಿಗೆ ಈಗ ಅನುಮತಿ ನೀಡಿಲ್ಲ. ಇನ್ನೂ ಎರಡು ದಿನ ನೋಡಿಕೊಂಡು ಆ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ’ ಎಂದರು.

‘ಇದುವರೆಗೂ ಕೋವಿಡ್‌–19 ಮುಕ್ತವಾಗಿದ್ದ ಶಿವಮೊಗ್ಗದಲ್ಲಿ, ಹೊರ ರಾಜ್ಯದಲ್ಲಿದ್ದವರು ಬಂದ ಬಳಿಕ ಕೋವಿಡ್‌–19 ಪ್ರಕರಣಗಳು ದಾಖಲಾಗಿವೆ. ಹಾಗಾಗಿ, ನಮ್ಮ ಜಿಲ್ಲೆಯ ಹಿತದೃಷ್ಟಿಯಿಂದ ಸ್ವಲ್ಪ ಯೋಚನೆ ಮಾಡಬೇಕಾಗಿದೆ. ಹೊರ ರಾಜ್ಯದ ಕೆಂಪುವಲಯಗಳಲ್ಲಿರುವವರು ಕೆಲವು ದಿನಗಳ ಕಾಲ ಅಲ್ಲೇ ಇರುವುದು ಒಳಿತು’ ಎಂದು ಅವರು ಹೇಳಿದರು.

ಕ್ವಾರಂಟೈನ್‌ ಕಡ್ಡಾಯ: ಹೊರ ರಾಜ್ಯಗಳಿಂದ ಜಿಲ್ಲೆಗೆ ಬರುವವರು 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರುವುದು ಕಡ್ಡಾಯ. ಜಿಲ್ಲಾಡಳಿತ ಎಲ್ಲ ತಾಲ್ಲೂಕುಗಳಲ್ಲಿ ಹಾಸ್ಟೆಲ್‌ಗಳನ್ನು ಗುರುತಿಸಿ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿದೆ.

‘ಆತಂಕ ಬೇಡ, ಕಟ್ಟೆಚ್ಚರ ವಹಿಸಿದ್ದೇವೆ’

ಗುಂಡ್ಲುಪೇಟೆ ತಾಲ್ಲೂಕಿನ ಮದ್ದೂರು ಕಾಲೊನಿಯಲ್ಲಿರುವ ಆಶ್ರಮ ಶಾಲೆಯಲ್ಲಿ ಕೇರಳದಿಂದ ಬಂದವರನ್ನು ತಪಾಸಣೆ ಮಾಡಲಾಗುತ್ತಿದ್ದು, ಸ್ಥಳೀಯ ಗಿರಿಜನ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಮುಖಂಡರೊಬ್ಬರು, ‘ಜನವಸತಿ ಪ್ರದೇಶಕ್ಕೆ ಹೊಂದಿಕೊಂಡಂತೆ ಆಶ್ರಮ ಶಾಲೆ ಇದೆ. ಎರಡು ಬಸ್‌ಗಳಲ್ಲಿ ಸುಮಾರು 50 ಜನರಷ್ಟು ಕೇರಳದಿಂದ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಡು ಕುರುಬ, ಜೇನುಕುರುಬ ಹಾಗೂ ಸೋಲಿಗ ಸಮುದಾಯದವರು ಕಾಲೊನಿಯಲ್ಲಿದ್ದಾರೆ. ಏನಾದರೂ ಹೆಚ್ಚು ಕಡಿಮೆಯಾದರೆ.. ಎಂಬ ಭಯ ಕಾಡುತ್ತಿದೆ. ಅಧಿಕಾರಿಗಳನ್ನು ಕೇಳಿದರೆ, ಇಲ್ಲಿ ಇರಿಸುವುದಿಲ್ಲ ತಪಾಸಣೆಗಾಗಿ ಕರೆತರಲಾಗಿದೆ. ಅವರನ್ನು ಬೇರೆಕಡೆಗೆ ಕಡೆದುಕೊಂಡು ಹೋಗಲಾಗುತ್ತದೆ’ ಎಂದು ಹೇಳುತ್ತಿದ್ದಾರೆ’ ಎಂದು ಹೇಳಿದರು.

ಈ ಬಗ್ಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರ ಗಮನ ಸೆಳೆದಾಗ, ‘ಇದುವರೆಗೆ ಜಿಲ್ಲೆಗೆ ಬಂದವರಲ್ಲಿ ಯಾರಲ್ಲೂ ರೋಗ ಲಕ್ಷಣ ಇಲ್ಲ. ಎಲ್ಲರನ್ನೂ ಕೂಲಂಕಷವಾಗಿ ತಪಾಸಣೆ ಮಾಡಲಾಗಿದೆ. ಬೇರೆ ರಾಜ್ಯದಲ್ಲಿರುವವರು ಜಿಲ್ಲೆಯನ್ನು ಪ್ರವೇಶಿಸುತ್ತಿದ್ದಂತೆಯೇ ಅವರನ್ನು ಚೆಕ್‌ಪೋಸ್ಟ್‌ನಲ್ಲಿ ಸ್ಕ್ರೀನಿಂಗ್‌ ಮಾಡಲಾಗುತ್ತದೆ. ನಂತರ ಸಮೀಪದ ಹಾಸ್ಟೆಲ್‌ಗೆ ಕರೆದುಕೊಂಡು ಹೋಗಿ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಆ ಬಳಿಕ ನಿಗದಿತ ಹಾಸ್ಟೆಲ್‌ನಲ್ಲಿ ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್‌ ಮಾಡಲಾಗುತ್ತದೆ’ ಎಂದು ಹೇಳಿದರು.

ಎಲ್ಲಾ ರೀತಿ ಕ್ರಮ ಕೈಗೊಳ್ಳಲಾಗಿದೆ

ಹೊರ ಜಿಲ್ಲೆ ಅಥವಾ ಹೊರ ರಾಜ್ಯಗಳಿಂದ ಬರುವವರ ಬಗ್ಗೆ ಜಿಲ್ಲೆಯ ಜನರು ಆತಂಕ ಪಡಬೇಕಾಗಿಲ್ಲ. ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿಡಾ.ಎಂ.ಆರ್.ರವಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.