ಚಾಮರಾಜನಗರ: ಆರೋಗ್ಯ ಲೆಕ್ಕಿಸದೆ ಪ್ರತಿದಿನ ಹಗಲು-ಇರುಳು ನಗರದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಪೌರ ಕಾರ್ಮಿಕರ ಸೇವೆ ಅನನ್ಯ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ಮಂಗಳವಾರ ಪೌರಾಡಳಿತ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ನಗರಸಭೆ ಸಹಯೋಗದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವಗುರು ಬಸವಣ್ಣ ಅವರು ಕಾಯಕವೇ ಕೈಲಾಸ ತತ್ವವನ್ನು ಚಾಚೂತಪ್ಪದೆ ಪೌರ ಕಾರ್ಮಿಕರು ಪಾಲಿಸುತ್ತಿದ್ದಾರೆ. ಮನೆಗಳಿಂದ ತ್ಯಾಜ್ಯ ಸಂಗ್ರಹಿಸಿ, ನಗರದೊಳಗಿನ ತ್ಯಾಜ್ಯ ತೆರವುಗೊಳಿಸಿ ಸ್ವಚ್ಛತೆಗೆ ಶ್ರಮಿಸುತ್ತಿರುವ ಪೌರ ಕಾರ್ಮಿಕ ಶ್ರಮ ಅಪಾರ ಎಂದರು.
ಸ್ವಚ್ಛತಾ ರಾಯಭಾರಿಗಳಾಗಿರುವ ಪೌರ ಕಾರ್ಮಿಕರಿಗೆ ಕೃತಜ್ಞತೆ ಸಲ್ಲಿಸಲು ಸರ್ಕಾರ ಪೌರಕಾರ್ಮಿಕರ ದಿನಾಚರಣೆ ಆಚರಿಸುತ್ತಿದ್ದು ಪೌರ ಕಾರ್ಮಿಕರಿಗೆ ಬೆಂಬಲವಾಗಿ ನಿಂತಿದೆ. ಪೌರಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ ಶ್ರೇಯೋಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಉಚಿತ ನಿವೇಶನ, ಆರೋಗ್ಯ ತಪಾಸಣಾ ಶಿಬಿರ, ಗೃಹಭಾಗ್ಯ ಯೋಜನೆಯಡಿ ಮನೆಗಳ ಮಂಜೂರು, ಪೌರಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಗುತ್ತಿಗೆ ಹಾಗೂ ನೇರಪಾವತಿ ಪೌರಕಾರ್ಮಿಕರ ಹುದ್ದೆ ಖಾಯಂಗೊಳಿಸುವುದಾಗಿ ಘೋಷಣೆ ಮಾಡಿದ್ದಾರೆ. ನಗರದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ 65 ಪೌರಕಾರ್ಮಿಕರಿಗೆ ಯಡಬೆಟ್ಟದಲ್ಲಿ ನಿವೇಶನಗಳನ್ನು ನೀಡಲಾಗಿದ್ದು ಗೃಹ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಪೌರಕಾರ್ಮಿಕರ ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ಕುಲಕಸುಬಿಗೆ ಜೋತು ಬೀಳದೆ ಹೆಚ್ಚಿನ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿ ಮಾದರಿಯಾಗಬೇಕು ಎಂದು ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ನಗರಸಭಾ ಅಧ್ಯಕ್ಷ ಸುರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ‘ನಗರದ ಸ್ವಚ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕರ ಶ್ರಮ ಅಭಿನಂದನಾರ್ಹ. ಸ್ವಚ್ಛತಾ ಸೇನಾನಿಗಳಾಗಿರುವ ಪೌರ ಕಾರ್ಮಿಕರಿಗೆ ಕೃತಜ್ಞತೆ ಸಲ್ಲಿಸಲು ಎಲ್ಲೆಡೆ ಸ್ವಚ್ಛತಾ ಕಾರ್ಯಕ್ರಮಗಳು ನಡೆಯುತ್ತಿವೆ. ಸರ್ಕಾರ ಕೂಡ ಸ್ವಚ್ಛ ಭಾರತ್ ಯೋಜನೆಯಡಿ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದೆ. ಪೌರಕಾರ್ಮಿಕರಿಗಾಗಿ ಸರ್ಕಾರ ಜಾರಿಗೆ ತಂದಿರುವ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪೌರಾಯುಕ್ತ ಎಸ್.ವಿ. ರಾಮದಾಸ್ ‘ಪೌರಕಾರ್ಮಿಕರ ಶ್ರಮದಿಂದ ನಗರದಲ್ಲಿ ಸ್ವಚ್ಛತೆ ಇದೆ. ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ನಗರದ ಸ್ವಚ್ಚತೆಗೆ 180 ಪೌರಕಾರ್ಮಿಕರ ಅಗತ್ಯವಿದ್ದು, ಪ್ರಸ್ತುತ 50 ಕಾರ್ಮಿಕ ನೌಕರರು, 82 ದಿನಗೂಲಿ ಮತ್ತು ಹೊರಗುತ್ತಿಗೆ ನೌಕರರು ಸೇರಿ 132 ಮಂದಿಯಷ್ಟೆ ಕೆಲಸ ನಿರ್ವಹಿಸುತ್ತಿದ್ದಾರೆ.
ಪೌರಕಾರ್ಮಿಕ ನೌಕರರಿಗೆ ನಗರದ ಹೊರಹೊಲಯದಲ್ಲಿರುವ ಯಡಬೆಟ್ಟದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದು ಮನೆ ನಿರ್ಮಿಸಿಕೊಳ್ಳಲು ಸಹಾಯಧನ ನೀಡಲಾಗುತ್ತಿದೆ. ಆರೋಗ್ಯ ಕವಚ ಯೋಜನೆಯಡಿ ಆರೋಗ್ಯ ಶಿಬಿರ ಆಯೋಜಿಸಲಾಗುತ್ತಿದೆ ಎಂದರು.
ನಗರಸಭೆ ಉಪಾಧ್ಯಕ್ಷೆ ಮಮತಾ, ನಗರಸಭೆ ಸದಸ್ಯರಾದ ಅಬ್ರಾರ್ ಅಹಮ್ಮದ್, ಎಂ. ಮಹೇಶ್, ಚಿನ್ನಮ್ಮ, ನೀಲಮ್ಮ, ಗಾಯತ್ರಿ, ಕುಮುದಾ, ಆಶಾ, ಕಲೀಂ, ಬಸವಣ್ಣ, ನಾಮನಿರ್ದೇಶಿತ ಸದಸ್ಯ ಸ್ವಾಮಿ, ಪೌರಕಾರ್ಮಿಕ ನೌಕರ ಸಂಘದ ಅಧ್ಯಕ್ಷ ಪಳನಿ ಸ್ವಾಮಿ ಹಾಗೂ ಇತರರು ಇದ್ದರು.
- ಪೌರ ಕಾರ್ಮಿಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಲಹೆ ಚಾಮರಾಜನಗರದಲ್ಲಿ ಪೌರ ಕಾರ್ಮಿಕರ ಕೊರತೆ ಆರೋಗ್ಯದತ್ತ ಕಾಳಜಿ ವಹಿಸಿ: ಉತ್ತಮ ಆಹಾರ ಸೇವಿಸಿ
ವಿಜೇತರಿಗೆ ಬಹುಮಾನ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಪೌರಕಾರ್ಮಿಕರಿಗೆ 1000 ಸಹಾಯಧನ ವಿತರಿಸಲಾಯಿತು. ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಉತ್ತಮವಾಗಿ ಕರ್ತವ್ಯ ನಿಭಾಯಿಸಿ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ನಗರಸಭೆ ಕಚೇರಿಯ ಮುಂಭಾಗದಿಂದ ವಾಲ್ಮೀಕಿ ಭವನದವರೆಗೆ ಜಾಥಾ ನಡೆಯಿತು. ಡೊಳ್ಳು ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.