
ಪ್ರಜಾವಾಣಿ ವಾರ್ತೆ
ಚಾಮರಾಜನಗರ: ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಂತೇಮರಹಳ್ಳಿಯಲ್ಲಿ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ಇಲ್ಲದೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದು ಸೂಕ್ತ ಬಸ್ ನಿಲ್ದಾಣ ನಿರ್ಮಾಣ ಮಾಡುವಂತೆ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ದನಿ ಎತ್ತಿದರು.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಂತೇಮರಹಳ್ಳಿ ಹೋಬಳಿ ಕೇಂದ್ರದಲ್ಲಿ ಸೂಕ್ತ ಬಸ್ ನಿಲ್ದಾಣ ನಿರ್ಮಾಣ ಮಾಡಿಕೊಡುವಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಗಮನ ಸೆಳೆದರು. ಶಾಸಕರ ಪ್ರಶ್ನೆಗೆ ಉತ್ತರಿಸಿದ ಸಚಿವರು ‘2019 ನ.28ರಂದು ಸಂತೇಮರಹಳ್ಳಿ ಹೋಬಳಿಯ ಸರ್ವೆ ನಂಬರ್ 134/3ರಲ್ಲಿರುವ 1 ಎಕರೆ ಜಮೀನನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಜಿಲ್ಲಾಧಿಕಾರಿಗಳು ಕಾಯ್ದಿರಿಸಿ ಆದೇಶಿದ್ದರು.
ನಂತರ ಜಿಲ್ಲಾಡಳಿತ ಕಾಯ್ದಿರಿಸಿದ ನಿವೇಶನದ ವಿರುದ್ಧ ಕೆಲವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರಿಂದ ಬಸ್ ನಿಲ್ದಾಣ ನಿರ್ಮಾಣ ಪ್ರಸ್ತಾವ ನನೆಗುದಿಗೆ ಬಿದ್ದಿತ್ತು. ನ.29, 2024ರಂದು ಪ್ರಕರಣವು ಸಾರಿಗೆ ನಿಗಮದ ಪರವಾಗಿ ಇತ್ಯರ್ಥವಾಗಿದೆ. ಅದರಂತೆ ಸಂತೇಮರಹಳ್ಳಿಯಲ್ಲಿ ನಿಗಮದ ನೂತನ ಬಸ್ ನಿಲ್ದಾಣ ನಿರ್ಮಿಸುವ ಕಾಮಗಾರಿ ನಡೆಯಲಿದೆ.
2023-24ನೇ ಸಾಲಿನ ಲೋಕೋಪಯೋಗಿ ಇಲಾಖೆಯ ದರಪಟ್ಟಿಯಂತೆ ಅಂದಾಜು ₹ 8 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಸಾರಿಗೆ ನಿಗಮದ ಬಸ್ ನಿಲ್ದಾಣ ನಿರ್ಮಾಣ ಮಾಡಲು ಉದ್ದೇಶಿಸಿಸಲಾಗಿದೆ. ಕಾಮಗಾರಿಗೆ ಸಂಬಂಧಪಟ್ಟಂತೆ ವಿವರವಾದ ಯೋಜನಾ ವರದಿ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಕೆಯ ನಿರೀಕ್ಷೆಯಲ್ಲಿದ್ದು ಸ್ವೀಕೃತವಾದ ಕೂಡಲೇ ಅನುದಾನದ ಲಭ್ಯತೆಗೊಳಪಟ್ಟು ಸಂತೇಮರಹಳ್ಳಿಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು ಎಂದು ಸಚಿವ ರಾಮಲಿಂಗ ರೆಡ್ಡಿ ಸದನದಲ್ಲಿ ಉತ್ತರಿಸಿದರು.
ಎಳನೀರು ಮಾರುಕಟ್ಟೆ ಬೇಕು:
ಇದೇವೇಳೆ ಸಂತೇಮರಹಳ್ಳಿ ಎಪಿಎಂಸಿ ಸ್ಥಳದಲ್ಲಿ ಎಳನೀರು ಮಾರುಕಟ್ಟೆ ನಿರ್ಮಾಣ ಮಾಡುವ ಅಗತ್ಯತೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ, ಬಂದಿದ್ದರೆ ಕೈಗೊಂಡ ಕ್ರಮಗಳು ಏನು ಎಂಬ ಬಗ್ಗೆ ಶಾಸಕರು ಸದನದಲ್ಲಿ ಪ್ರಶ್ನೆ ಮಾಡಿದರು.
ಇದಕ್ಕೆ ಉತ್ತರಿಸಿದ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಿವಾನಂದ ಎಸ್.ಪಾಟೀಲ ‘ಚಾಮರಾಜನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಂತೇಮರಹಳ್ಳಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಅಗತ್ಯ ಮೂಲಸೌಲಭ್ಯಗಳಾದ ಗೋದಾಮು, ಎಸ್‌ಜಿಆರ್‌ಜಿ ಗೋದಾಮು, ರೈತಭವನದ ಮಳಿಗೆಗಳು, ಉಪಾಹಾರ ಗೃಹಗಳನ್ನು ನಿರ್ಮಿಸಲಾಗಿದೆ.
ಗ್ರಾಮೀಣ ಮಾರುಕಟ್ಟೆಗಳ ಅಭಿವೃದ್ಧಿ–ನಬಾರ್ಡ್ ಯೋಜನೆಯ ಆರ್‌ಐಡಿಎಫ್–31 ಅಡಿ ಅಂದಾಜು ₹ 5 ಕೋಟಿ ವೆಚ್ಚದಲ್ಲಿ ಎಳನೀರು ಮಾರುಕಟ್ಟೆ ಸ್ಥಾಪಿಸಲು ಕಾಮಗಾರಿ ಕೈಗೊಳ್ಳಲು ಆರ್ಥಿಕ ಇಲಾಖೆಯು ಒಪ್ಪಿಗೆ ನೀಡಿದ್ದು ನಬಾರ್ಡ್ ವತಿಯಿಂದ ಅನುಮೋದನೆ ನಿರೀಕ್ಷೆ ಮಾಡಲಾಗಿದೆ. 2024–25ನೇ ಸಾಲಿನ ವಾರ್ಷಿಕ ಕ್ರಿಯಾಯೋಜನೆಯಡಿ ಸಂತೇಮರಹಳ್ಳಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಡಾಂಬಾರ್ ರಸ್ತೆ, ಡೆಕ್‌ಸ್ಲಾಬ್ ಕಾಮಗಾರಿ ನಡೆಯುತ್ತಿದೆ. ರೈತ ಭವನ, ಆಡಳಿತ ಕಚೇರಿ, ಶೌಚಾಲಯಗಳ ನವೀಕರಣ, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವ ಕಾಗಮಾರಿಗೆ ಟೆಂಡರ್ ಆಹ್ವಾನಿಸಲಾಗಿದೆ ಎಂದು ಸಚಿವರು ಸದನದಲ್ಲಿ ಉತ್ತರ ನೀಡಿದರು.
Highlights - ‘ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಅನುದಾನಕ್ಕೆ ಬೇಡಿಕೆ’ ‘ಪ್ರವಾಸಿತಾಣ, ಧಾರ್ಮಿಕ ಸ್ಥಳಗಳ ಅಭಿವೃದ್ಧಿಗೆ ಒತ್ತಾಯ’ ಶಾಸಕರ ಮನವಿಗೆ ಸಕಾರಾತ್ಮಕ ಸ್ಪಂದನೆ
‘ಬಿಆರ್ ಹಿಲ್ಸ್ ಅಭಿವೃದ್ಧಿಗೆ ಒತ್ತಾಯ’
ಶಾಸಕ ಎ.ಆರ್.ಕೃಷ್ಣಮೂರ್ತಿ ಈಚೆಗಷ್ಟೆ ಯಳಂದೂರು ತಾಲ್ಲೂಕಿನ ಪ್ರಸಿದ್ಧ ತಾತ್ರಾ ಸ್ಥಳವಾದ ಬಿಳಿಗಿರಿ ರಂಗನಬೆಟ್ಟದ ಅಭಿವೃದ್ಧಿಗೆ ₹ 5.75 ಕೋಟಿ ಬಿಡುಗಡೆಗೆ ಒತ್ತಾಯಿಸಿದ್ದರು. ದೇಶ–ವಿದೇಶಗಳಿಂದ ಲಕ್ಷಾಂತರ ಭಕ್ತರು ಹಾಗೂ ಪ್ರವಾಸಿಗರು ಭೇಟಿನೀಡುವ ಬಿಳಿಗಿರಿ ರಂಗನಬೆಟ್ಟದಲ್ಲಿ ಸೂಕ್ತ ಬಸ್ ತಂಗುದಾಣವಿಲ್ಲ ವೀಕ್ಷಣಾ ಗೋಪುರ ದಾಸೋಹ ಭವನ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡಬೇಕು ಎಂದು ಒತ್ತಾಯಿಸಿದ್ದರು. ಕಾನೂನು ಮತ್ತು ಸಂಸದೀಯ ಇಲಾಖೆ ಸಚಿವ ಹೆಚ್.ಕೆ.ಪಾಟೀಲ್ ಪ್ರತಿಕ್ರಿಯಿಸಿ ಬಿಳಿಗಿರಿರಂಗನ ಬೆಟ್ಟದ ಅಭಿವೃದ್ಧಿಗೆ ₹ 25 ಲಕ್ಷ ಮೌಲ್ಯದ ಡಿಪಿಎರ್ ಸಿದ್ಧಪಡಿಸಲಾಗಿದ್ದು ಅಗತ್ಯ ಅನುದಾನ ಬಿಡುಗಡೆಗೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ. ಮುಂದಿನ ಬಜೆಟ್‌ನಲ್ಲಿ ಪೂರ್ಣ ಅನುದಾನ ನೀಡುವುದಾಗಿ ಭರವಸೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.