ಕೊಳ್ಳೇಗಾಲ: ತಾಲ್ಲೂಕಿನ ಸತ್ತೇಗಾಲದ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆ ಅವೈಜ್ಞಾನಿಕವಾಗಿದ್ದು, ಕಾಮಗಾರಿ ಕಳಪೆಯಾಗಿದೆ ಎಂಬುದರ ಬಗ್ಗೆ ಈಗಾಗಲೇ ದೂರುಗಳು ಬಂದಿವೆ. ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳೊಂದಿಗೆ ಸರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಸಂಸದ ಸುನಿಲ್ ಬೋಸ್ ಹೇಳಿದರು.
ಪಟ್ಟಣದಲ್ಲಿ ಗುರುವಾರ ಅಧಿಕಾರಿಗಳೊಂದಿಗೆ ರಸ್ತೆ ವೀಕ್ಷಣೆ ಮಾಡಿ ಮಾತನಾಡಿದ ಅವರು, ಈ ಕುರಿತು ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ. ಸಮಸ್ಯೆ ಬಗೆಹರಿಸಲು ಶೀಘ್ರ ಕ್ರಮಕೈಗೊಳ್ಳುವೆ ಎಂದು ಭರವಸೆ ನೀಡಿದರು.
ಮುಖಂಡ ರಾಜಶೇಖರ್ ಮಾತನಾಡಿ, ‘ಈ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆ ಮಾಡಿ ಒಂದು ವರ್ಷ ಕಳೆದಿದೆ. ಸಂಪೂರ್ಣ ಕಳಪೆಯಿಂದ ಕೂಡಿದೆ. ಈಗಾಗಲೇ 12 ಮಂದಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸೇತುವೆ ಕಾಮಗಾರಿಯೂ ಸಹ ಕಳಪೆಯಿಂದ ಕೂಡಿದೆ. ಕಾಟಾಚಾರಕ್ಕೆ ರಸ್ತೆ ಉಬ್ಬರ ನಿರ್ಮಿಸಿದ್ದಾರೆ. ಸೂಚನಾ ಫಲಕವೂ ಹಾಕಿಲ್ಲ. ವಿದ್ಯುತ್ ದ್ವೀಪಗಳನ್ನು ಅಳವಡಿಸಿಲ್ಲ. ಸ್ಪೀಡ್ ಬ್ರೇಕರ್ ಸೇರಿದಂತೆ ಇನ್ನಿತರ ಸೌಲಭ್ಯ ಕಲ್ಪಿಸಿಲ್ಲ’ ಎಂದು ದೂರಿದರು.
‘ಪ್ರತಿನಿತ್ಯ ಈ ರಸ್ತೆಯಲ್ಲಿ ಅಪಘಾತ ಸಂಭವಿಸುತ್ತಿದೆ. ಇದರ ವಿರುದ್ಧ ಕಳೆದ ತಿಂಗಳು ಎಲ್ಲಾ ಕೋಮುವಿನ ಮುಖಂಡರು ರಸ್ತೆ ತಡೆ ಚಳವಳಿ ಮಾಡಿ ಪ್ರತಿಭಟನೆ ಮಾಡುವುದಾಗಿ ಅಧಿಕಾರಿಗಳಿಗೆ ಮನವಿ ಮಾಡಿದ್ದೆವು. ಜಿಲ್ಲಾಧಿಕಾರಿ ಸ್ಪಂದಿಸಿ ಸಮಸ್ಯೆ ಬಗೆಹರಿಸುವ ಹಾಗೂ ರಸ್ತೆ ಉಬ್ಬರ, ಮೇಲ್ಸೇತುವೆ ನಿರ್ಮಾಣದ ಭರವಸೆ ನೀಡಿದ್ದರು. ಹಾಗಾಗಿ ಪ್ರತಿಭಟನೆ ಕೈ ಬಿಡಲಾಗಿತ್ತು’ ಎಂದು ತಿಳಿಸಿದರು.
ಈ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ವಿಶ್ವ ಅವರನ್ನು ತರಾಟೆಗೆ ತೆಗೆದುಕೊಂಡ ಸಂಸದರು, ‘ರಸ್ತೆ ನಿರ್ಮಾಣ ಮಾಡುವುದು ಅಪಘಾತ ತಪ್ಪಿಸುವುದಕ್ಕೆ ಹಾಗೂ ಸಾರ್ವಜನಿಕರ ಸುಖ ಪ್ರಯಾಣಕ್ಕೆ. ಆದರೆ ಈ ರಸ್ತೆ ಬಹಳ ಅವೈಜ್ಞಾನಿಕದಿಂದ ಕೂಡಿದೆ. ಈಗಾಗಲೇ ಕಳಪೆ ಕಾಮಗಾರಿಯನ್ನು ಗ್ರಾಮಸ್ಥರು ನೇರವಾಗಿ ಆರೋಪ ಮಾಡುತ್ತಿದ್ದಾರೆ. ಹಾಗಾಗಿ ಕೂಡಲೇ ರಸ್ತೆ ಅಪಘಾತ ತಪ್ಪಿಸಬೇಕು. ಮೇಲ್ಸೇತುವೆ ನಿರ್ಮಿಸಿ ಅಗತ್ಯ ಸೌಲಭ್ಯ ಕಲ್ಪಿಸಬೇಕು’ ಎಂದು ಸೂಚಿಸಿದರು.
ಗ್ರಾಮದ ಮುಖಂಡ ದಿವ್ಯ ರಾಜ್ ಮಾತನಾಡಿ, ಸತ್ತೇಗಾಲದಿಂದ 8 ಕಿ.ಮೀ ವ್ಯಾಪ್ತಿಯಲ್ಲಿ ಟೋಲ್ ಗೇಟ್ ನಿರ್ಮಾಣವಾಗಿದೆ. ಆದರೆ ಅದು ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿಗೆ ಸೇರಿದೆ. ನಿಯಮದ ಪ್ರಕಾರ 20 ಕಿ.ಮೀ ವ್ಯಾಪ್ತಿಯುಳ್ಳ ಗ್ರಾಮದವರಿಗೆ ಟೋಲ್ ಫ್ರೀ ಇರಬೇಕು. ಇಲ್ಲಿನ ಸಿಬ್ಬಂದಿಗಳು ತಲಾ ₹70 ಶುಲ್ಕ ವಿಧಿಸುತ್ತಿದ್ದಾರೆ. ಈ ಸಮಸ್ಯೆ ಸರಿಪಡಿಸಿ. ಇಲ್ಲದಿದ್ದರೆ, ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ನಿಯಮದ ಪ್ರಕಾರ ಗ್ರಾಮದವರು ಆಧಾರ್ ಕಾರ್ಡ್ ತೋರಿಸಿದರೆ ಸಾಕು. ಆ ಸಮೀಪದ ವ್ಯಾಪ್ತಿಯ ಗ್ರಾಮಸ್ಥರನ್ನು ಬಿಡಬೇಕು. ಹೀಗೆ ಮುಂದುವರಿಸಿದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಮಾಜಿ ಶಾಸಕ ನರೇಂದ್ರ, ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಡಿವೈಎಸ್‌ಪಿ ಧರ್ಮೇಂದ್ರ, ಗ್ರಾಮದ ಮುಖಂಡ ಸಿದ್ದರಾಜು, ಮುಕುಂದವರ್ಮ, ಕಾಂತರಾಜು, ಶಾಂತರಾಜು ಇದ್ದರು.
ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ
ಕೊಳ್ಳೇಗಾಲ: ಇಲ್ಲಿನ ಜಿ.ವಿ.ಗೌಡ ಕಾಲೇಜಿನಲ್ಲಿ ₹10 ಲಕ್ಷ ವೆಚ್ಚದ ಹೆಚ್ಚುವರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಸಂಸದ ಸುನೀಲ್ ಬೋಸ್ ಗುರುವಾರ ಭೂಮಿ ಪೂಜೆ ಮಾಡಿದರು. ಕಾಲೇಜಿನ ಹೆಚ್ಚುವರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಹೆಚ್ಚುವರಿ ₹12 ಲಕ್ಷ ಅನುದಾನ ಶೀಘ್ರವೇ ಬಿಡುಗಡೆ ಮಾಡಲಾಗುವುದು. ಒಕ್ಕಲಿಗ ಸಂಘದವರು ಮನವಿ ಮಾಡಿದ್ದರು. ಹಾಗಾಗಿ ಅನುದಾನ ಬಿಡುಗಡೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ನೀಡಿ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು. ತಾಲ್ಲೂಕಿನ ಮಧುವನಹಳ್ಳಿಯ ಅಂಬೇಡ್ಕರ್ ಭವನದ ಶೌಚಾಲಯ ನಿರ್ಮಾಣ ಕಾಮಗಾರಿಗೆ ₹10 ಲಕ್ಷ ಹಾಗೂ ಸತ್ತೇಗಾಲ ಗ್ರಾಮದ ಸಿದ್ದಪ್ಪಾಜಿ ದೇವಸ್ಥಾನದ ಮುಂದುವರೆದ ಕಾಮಗಾರಿಗೆ ₹10 ಲಕ್ಷ ವೆಚ್ಚದಲ್ಲಿ ಭೂಮಿ ಪೂಜೆ ನೆರವೇರಿಸಿದರು. ಮಾಜಿ ಶಾಸಕ ಆರ್.ನರೇಂದ್ರ ಅಧ್ಯಕ್ಷ ಮಾದೇಶ್ ಕಾರ್ಯದರ್ಶಿ ಜಿ.ಸಿದ್ದಲಿಂಗೇಗೌಡ ಉಪಾಧ್ಯಕ್ಷ ಸೋಮೇಶ್ ನಗರಸಭೆ ಅಧ್ಯಕ್ಷೆ ರೇಖಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರು ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.