ADVERTISEMENT

ಬ್ರಿಟಿಷರಿಗೆ ಅಪಾಯಕಾರಿಯಾಗಿದ್ದ ಸಾವರ್ಕರ್‌: ಮಹೇಶ್‌

ಚಾಮರಾಜನಗರ, ಕೊಳ್ಳೇಗಾಲದಲ್ಲಿ ಸಾವರ್ಕರ್‌ ರಥಯಾತ್ರೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2022, 16:53 IST
Last Updated 26 ಆಗಸ್ಟ್ 2022, 16:53 IST
ವೀರಸಾವರ್ಕರ್‌ ರಥಯಾತ್ರೆಯನ್ನು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಶುಕ್ರವಾರ ಚಾಮರಾಜನಗರದಲ್ಲಿ ಬರಮಾಡಿಕೊಂಡರು. ಕಾಡಾ ಅಧ್ಯಕ್ಷ ನಿಜಗುಣರಾಜು, ಮುಖಂಡ ಎಂ.ರಾಮಚಂದ್ರ, ನಗರಸಭೆ ಅಧ್ಯಕ್ಷೆ ಆಶಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಶ್ರೀ ಪ್ರತಾಪ್‌ ಸೇರಿದಂತೆ ಹಲವರು ಇದ್ದರು
ವೀರಸಾವರ್ಕರ್‌ ರಥಯಾತ್ರೆಯನ್ನು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಶುಕ್ರವಾರ ಚಾಮರಾಜನಗರದಲ್ಲಿ ಬರಮಾಡಿಕೊಂಡರು. ಕಾಡಾ ಅಧ್ಯಕ್ಷ ನಿಜಗುಣರಾಜು, ಮುಖಂಡ ಎಂ.ರಾಮಚಂದ್ರ, ನಗರಸಭೆ ಅಧ್ಯಕ್ಷೆ ಆಶಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಶ್ರೀ ಪ್ರತಾಪ್‌ ಸೇರಿದಂತೆ ಹಲವರು ಇದ್ದರು   

ಚಾಮರಾಜನಗರ: ಸಾವರ್ಕರ್‌ ಪ್ರತಿಷ್ಠಾನ ಹಮ್ಮಿಕೊಂಡಿರುವ ವೀರ ಸಾವರ್ಕರ್‌ ರಥಯಾತ್ರೆ ಶುಕ್ರವಾರ ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ ತಾಲ್ಲೂಕುಗಳಲ್ಲಿ ಸಂಚರಿಸಿತು.

ಎಲ್ಲ ಕಡೆಗಳಲ್ಲೂ ಬಿಜೆಪಿ ಮುಖಂಡರು, ಕಾರ್ಯಕರ್ತರು ರಥವನ್ನು ಅದ್ದೂರಿಯಾಗಿ ಸ್ವಾಗತಿಸಿದರು.

ನಗರದ ಚಾಮರಾಜೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಎನ್‌.ಮಹೇಶ್‌ ಅವರು, ‘ನಾನು ಅಂಬೇಡ್ಕರ್‌ ವಾದಿ. ಆ ದೃಷ್ಟಿಕೋನದಲ್ಲೇ ಸಾವರ್ಕರ್‌ ಅವರನ್ನು ನೋಡುತ್ತಿದ್ದೇನೆ. ಅವರು ಬ್ರಿಟಿಷರಿಗೆ ಅತ್ಯಂತ ಅಪಾಯಕಾರಿ ವ್ಯಕ್ತಿಯಾಗಿದ್ದರು. ಆ ಕಾರಣಕ್ಕಾಗಿ ಅವರಿಗೆ 51 ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು’ ಎಂದರು.

ADVERTISEMENT

ಸಾವರ್ಕರ್‌ ಅವರ ಜೀವನ ಸಾಧನೆ ಮತ್ತು ಹೋರಾಟವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಸಾವರ್ಕರ್‌ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ.ದೇಶದಲ್ಲಿ ಸಮಾನತೆಗಾಗಿ ಸಾಕಷ್ಟು ಜನ ಹೋರಾಟ ಮಾಡಿದ್ದಾರೆ. ಸಾವರ್ಕರ್ ಕೂಡ ಹೋರಾಟ ಮಾಡಿದ್ದರು. ಅವರ ನೈಜ ಜೀವನವನ್ನು ಪರಿಚಯಿಸುವ ಕೆಲಸವನ್ನು ರಥಯಾತ್ರೆ ಮೂಲಕ ಮಾಡಲಾಗುತ್ತಿದೆ’ ಎಂದರು.

ಅಂಬೇಡ್ಕರ್ ಅವರ ಹೋರಾಟ ಸಾವರ್ಕರ್ ಅವರಲ್ಲಿ ದೊಡ್ಡ ಪರಿವರ್ತನೆ ತಂದಿತು ಎಂಬುದು ನನ್ನ ಗ್ರಹಿಕೆ. ವೇದೋಕ್ತ ನಿಷೇಧ, ಉದ್ಯೋಗ ನಿಷೇಧ, ಅಸ್ಪೃಶ್ಯತೆ, ಸಮುದ್ರ ಪರ್ಯಟನೆ ನಿಷೇಧ, ಶುದ್ಧಿ ನಿಷೇಧ, ಸಹಭೋಜನ ನಿಷೇಧ, ಅಂತರ್ಜಾತಿ ಮದುವೆ ನಿಷೇಧಗಳ ವಿರುದ್ಧ ಸಾವರ್ಕರ್ ಹೋರಾಟ ಮಾಡಿದ್ದರು. ಆರಂಭದಲ್ಲಿ ಕ್ರಾಂತಿಕಾರಿಯಾಗಿದ್ದ ಸಾವರ್ಕರ್ ಬರಬರುತ್ತಾ ಸಮಾಜ ಸುಧಾರಕರಾದರು’ ಎಂದು ಮಹೇಶ್‌ ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಸುಂದರ್‌, ಕಾಡಾ ಅಧ್ಯಕ್ಷ ನಿಜಗುಣರಾಜು ಸೇರಿದಂತೆ ಮುಖಂಡರು ಇದ್ದರು. ಬಳಿಕ, ಯಾತ್ರೆಯು ಯಳಂದೂರು, ಕೊಳ್ಳೇಗಾಲದತ್ತ ಸಾಗಿತು.

ಕೊಳ್ಳೇಗಾಲ ವರದಿ: ಕೊಳ್ಳೇಗಾಲ ತಲುಪಿದ ಯಾತ್ರೆಯನ್ನು ಬಿಜೆಪಿ ರಾಜ್ಯ ಎಸ್.ಸಿ ಮೋರ್ಚ್ ಉಪಾಧ್ಯಕ್ಷ ಜಿ.ಎನ್.ನಂಜುಂಡಸ್ವಾಮಿ ಹಾಗೂ ಇತರ ಮುಖಂಡರು ಬರಮಾಡಿಕೊಂಡರು.

ನಂಜುಂಡಸ್ವಾಮಿ ಮಾತನಾಡಿ, ‘ಸ್ವಾತಂತ್ರ್ಯ ವೀರ ಸಾವರ್ಕರ್ ಅವರು ಅಪ್ರತಿಮ ದೇಶ ಭಕ್ತ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವ ನಿಟ್ಟಿನಲ್ಲಿ ತಮಗೆ ತಾವೇ ಅರ್ಪಿಸಿಕೊಂಡವರಲ್ಲಿ ಸಾವರ್ಕರ್ ಪ್ರಮುಖರು. ಇಂದು ಇಡೀ ದೇಶಕ್ಕೆ ಸಾವರ್ಕರ್ ಚರಿತ್ರೆ ತಿಳಿದಿದೆ. ಅವರು ದೇಶ ಪ್ರೇಮ, ಹಿಂದುತ್ವದ ಬಗ್ಗೆ ದೇಶದ ಉದ್ದಗಲಕ್ಕೂ ಜಾಗೃತಿ ಮೂಡಿಸಿದ್ದರು. ಅದರಂತೆ ಬಿಜೆಪಿಯು ಸಾವರ್ಕರ್ ಇತಿಹಾಸದ ಅರಿವನ್ನು ಮೂಡಿಸಲು ರಾಜ್ಯದಾದ್ಯಂತ ರಥಯಾತ್ರೆ ಕೈಗೊಂಡಿದೆ’ ಎಂದರು.

ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ರ‍್ಯಾಲಿ ನಂತರ ಹನೂರಿನತ್ತ ತೆರಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.