
ಚಾಮರಾಜನಗರ: ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿಯಲ್ಲಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗೈರು ಖಂಡಿಸಿ ಸಿಟ್ಟಿಗೆದ್ದ ಸಮುದಾಯದ ಮುಖಂಡರು ಸಮಾರಂಭವನ್ನು ಬಹಿಷ್ಕರಿಸಿ ಹೊರನಡೆದರು.
ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ 12 ಗಂಟೆಯಾದರೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಮುಖಂಡರು ಸವಿತಾ ಮಹರ್ಷಿ ಭಾವಚಿತ್ರಕ್ಕೆ ನಮನ ಸಲ್ಲಿಸಿ ಸಭಾಂಗಣದಿಂದ ಹೊರ ನಡೆದರು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಸಮುದಾಯದವರ ಮನವೊಲಿಸಲು ಪ್ರಯತ್ನಿಸಿದರು.
ಸರ್ಕಾರಿ ಕಾರ್ಯಕ್ರಮಗಳು ಹಾಗೂ ಸಭೆಗಳಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿರುವುದರಿಂದ ಗೈರಾಗಿದ್ದಾರೆ ಎಂದು ಸಮಜಾಯಿಷಿ ನೀಡಿದರು. ಆದರೆ, ಮುಖಂಡರು ಸಮಾರಂಭದಲ್ಲಿ ಭಾಗವಹಿಸಲು ನಿರಾಕರಿಸಿ ಸವಿತಾ ಮಹರ್ಷಿ ಜಯಂತಿಯ ಆಹ್ವಾನ ಪತ್ರಿಕೆಯಲ್ಲಿ ಹಾಕಿಸಿರುವ ಅಧಿಕಾರಿಗಳು ಜನಪ್ರತಿನಿಧಿಗಳು ಭಾಗವಹಿಸದೆ ಅಗೌರವ ತೋರಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿ ಹೊರನಡೆದರು.
ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಹಾಗೂ ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನ ಸೇರಿದಂತೆ ಬೆರಳೆಣಿಕೆ ಮಂದಿ ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.