ADVERTISEMENT

ಶಾಸಕ ಸಿ.ಪುಟ್ಟರಂಗಶೆಟ್ಟಿ ವಿರುದ್ಧ ಎಸ್‌ಡಿಪಿಐ ಆಕ್ರೋಶ

ನಗರಸಭೆ ವರಿಷ್ಠರ ಚುನಾವಣೆಗೆ ಗೈರು; ಒಳಮರ್ಮ ಬಹಿರಂಗಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 12:37 IST
Last Updated 3 ನವೆಂಬರ್ 2020, 12:37 IST
ಅಬ್ರಾರ್‌ ಅಹಮದ್
ಅಬ್ರಾರ್‌ ಅಹಮದ್   

ಚಾಮರಾಜನಗರ: ಸೋಮವಾರ ನಡೆದಿದ್ದ ಚಾಮರಾಜನಗರ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಗೈರಾದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಎಸ್‌ಡಿಪಿಐ, ಮತದಾನದಲ್ಲಿ ಭಾಗವಹಿಸಿದೇ ಇದ್ದುದರ ಒಳಮರ್ಮ ಏನು ಎಂಬುದನ್ನು ಶಾಸಕರು ಹಾಗೂ ಕಾಂಗ್ರೆಸ್‌ ಮುಖಂಡರು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಹಾಗೂ ನಗರಸಭಾ ಸದಸ್ಯ ಅಬ್ರಾರ್‌ ಅಹಮದ್‌ ಅವರು, ‘ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇಡುವುದು ನಮ್ಮ ಸೈದ್ಧಾಂತಿಕ ನಿಲುವು. ಅದಕ್ಕೆ ಬದ್ಧವಾಗಿ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೇಷರತ್‌ ಬೆಂಬಲ ನೀಡಿದ್ದೆವು. ಆದರೆ, ಪುಟ್ಟರಂಗಶೆಟ್ಟಿ ಅವರು ಗೈರಾಗುವ ಮೂಲಕ ನಂಬಿಕ ದ್ರೋಹ ಎಸಗಿದ್ದಾರೆ’ ಎಂದು ಆರೋಪಿಸಿದರು.

‘ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸಂಬಂಧ ನಮ್ಮ ಆರು ಸದಸ್ಯರೊಂದಿಗೆ ಪುಟ್ಟರಂಗಶೆಟ್ಟಿ ಅವರು ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ, ‘ನೀವು ಸಹಕಾರ ನೀಡಿದರೆ ನಾವು ಅಧಿಕಾರ ಹಿಡಿಯಬಹುದು ಎಂಬ ಭರವಸೆ ನೀಡಿದ್ದರು. ಬಿಎಸ್‌ಪಿ ಸದಸ್ಯ ಹಾಗೂ ಪಕ್ಷೇತರ ಸದಸ್ಯರನ್ನು ಮನವೊಲಿಸುತ್ತೇನೆ’ ಎಂದು ಹೇಳಿದ್ದರು. ಸೋಮವಾರ ಮಧ್ಯಾಹ್ನ 2.30 ಸುಮಾರಿಗೆ ಕರೆ ಮಾಡಿ ಮಾತನಾಡಿದಾಗಲೂ ಮತ ಹಾಕಲು ಬರುವುದಾಗಿ ಹೇಳಿದ್ದರು. ಆದರೆ, ನಾಲ್ಕು ಗಂಟೆಯಾದರೂ ಬರಲಿಲ್ಲ. ಶಾಸಕರು ಪ್ರಾಮಾಣಿಕ ಪ್ರಯತ್ನ ಮಾಡದ ಕಾರಣ ಬಿಜೆಪಿಗೆ ಅಧಿಕಾರ ಸಿಕ್ಕಿದೆ’ ಎಂದು ಅವರು ದೂರಿದರು.

ADVERTISEMENT

‘ಚುನಾವಣೆಯಲ್ಲಿ ಸೋಲಲಿ ಅಥವಾ ಗೆಲ್ಲಲಿ. ನಾಯಕತ್ವ ವಹಿಸಿಕೊಂಡ ಮೇಲೆ ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಅದು ಬಿಟ್ಟು ಯುದ್ಧರಂಗದಲ್ಲಿ ಕೊನೆಕ್ಷಣದಲ್ಲಿ ಹಿಂದೆಸರಿಯುವುದು ನಾಯಕನಾದವನ ಲಕ್ಷಣ ಅಲ್ಲ’ ಎಂದು ಅಬ್ರಾರ್‌ ಅಹಮದ್‌ ಹೇಳಿದರು.

ಹಿಂದುತ್ವದ ಬಗ್ಗೆ ಮೃದು ಧೋರಣೆ

‘ಕಾಂಗ್ರೆಸ್‌ ಕೂಡ ಹಿಂದುತ್ವ ಅಜೆಂಡಾದ ಬಗ್ಗೆ ಮೃದು ಧೋರಣೆ ತಳೆಯುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ. ಜಾತ್ಯತೀತ ಸಿದ್ಧಾಂತ ಹಾಗೂ ವಿಶ್ವಾಸಕ್ಕೆ ನಂಬಿಕೆ ದ್ರೋಹ ಮಾಡಿರುವ ಶಾಸಕರ ನಡೆಯನ್ನು ಕಾಂಗ್ರೆಸ್ ಅನ್ನು ಬೆಂಬಲಿಸಿರುವ ಮತದಾರರು ಅದರಲ್ಲೂ ಅಲ್ಪಸಂಖ್ಯಾತರು ಮರೆಯುವುದಿಲ್ಲ. ಮುಂದಿನ ದಿನಗಳಲ್ಲಿ ಅವರು ತಕ್ಕಪಾಠ ಕಲಿಸಲಿದ್ದಾರೆ’ ಎಂದರು.

‘ಹುಣಸೂರು, ಉಳ್ಳಾಲಗಳಲ್ಲಿ ಜೆಡಿಎಸ್ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿದ್ದರೆ ಎಸ್‌ಡಿಪಿಐಗೆ ಉಪಾಧ್ಯಕ್ಷ ಸ್ಥಾನ ಸಿಗುತ್ತಿತ್ತು. ಆದರೆ, ಅಧಿಕಾರ ಸಿಗದಿದ್ದರೂ ಪರವಾಗಿಲ್ಲ. ಕೋಮುವಾದಿ ಜೊತೆ ಹೋಗುವುದಿಲ್ಲ ಎಂಬ ನಿರ್ಧಾರ ಮಾಡಿದೆವು. ನಗರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಜನ ವಿರೋಧಿ ಆಡಳಿತ ನೀಡಿದರೆ ಪಕ್ಷ ನಗರಸಭೆಯ ಒಳಗೆ ಮತ್ತು ಹೊರಗೆ ಹೋರಾಟ ಮಾಡಲಿದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಕಲೀಲ್ ಉಲ್ಲಾ, ಉಪಾಧ್ಯಕ್ಷ ಸಮೀಉಲ್ಲಾಖಾನ್, ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್, ಜಿಲ್ಲಾ ಕಾರ್ಯದರ್ಶಿ ಜಬೀನೂರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.