ADVERTISEMENT

ಬೆಲೆ ಏರಿಕೆ ವಿರುದ್ಧ ಪ್ರತಿಭಟನಾ ಅಭಿಯಾನ

ಬೆಲೆ ಏರಿಕೆಗೆ ಅಂತ್ಯ ಹಾಡಿ–ಬಡವರ ಬವಣೆ ಬಗೆಹರಿಸಿ; ಎಸ್‌ಡಿಪಿಐ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 16:23 IST
Last Updated 25 ನವೆಂಬರ್ 2021, 16:23 IST
ಸೈಯದ್‌ ಆರೀಫ್‌
ಸೈಯದ್‌ ಆರೀಫ್‌   

ಚಾಮರಾಜನಗರ: ಇಂಧನ, ಅಡುಗೆ ಅನಿಲ ಸೇರಿದಂತೆ ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ, ‘ಬೆಲೆ ಏರಿಕೆಗೆ ಅಂತ್ಯ ಹಾಡಿ– ಬಡವರ ಬವಣೆ ಬಗೆಹರಿಸಿ’ ಎಂಬ ಧ್ಯೇಯ ವಾಕ್ಯದಡಿ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ನಗರದಲ್ಲಿ ಪ್ರತಿಭಟನಾ ಅಭಿಯಾನ ಹಮ್ಮಿಕೊಂಡಿದೆ.

ಗುರುವಾರದಿಂದ ಆರಂಭಗೊಂಡಿರುವ ಅಭಿಯಾನವು ಇದೇ 30ರವರೆಗೂ ನಡೆಯಲಿದೆ. ಐದು ದಿನದ ಅವಧಿಯಲ್ಲಿ ಪಕ್ಷವು ವಿವಿಧ ಕಾರ್ಯಕ್ರಮ ಆಯೋಜಿಸಿದೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಡಿಪಿಐ ಜಿಲ್ಲಾ ಘಟಕದ ಉಪಾಧ್ಯಕ್ಷ ಸೈಯದ್‌ ಆರೀಫ್‌, ‘ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳ ತೆರಿಗೆ ನೀತಿ, ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲದ ಅನಿಯಂತ್ರಿತ ಮತ್ತು ಅತಿಯಾದ ಬೆಲೆ ಏರಿಕೆಯಿಂದಾಗಿ ದೇಶದಲ್ಲಿ ದಿನಬಳಕೆ ವಸ್ತುಗಳ ಜೊತೆ ಕಟ್ಟಡ ಸಾಮಗ್ರಿ, ಕೃಷಿ ಸಾಮಗ್ರಿ ಹಾಗೂ ಆಹಾರ ಪದಾರ್ಥಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ’ ಎಂದು ಆರೋಪಿಸಿದರು.

ADVERTISEMENT

‘ಒಳ್ಳೆಯ ದಿನಗಳ ಭರವಸೆ ನೀಡಿ 2014ರಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 105 ಡಾಲರ್‌ ಇತ್ತು. ಆಗ ಪೆಟ್ರೋಲ್‌ 1 ಲೀಟರ್‌ಗೆ ₹ 71.51, ಡೀಸೆಲ್‌ಗೆ ₹ 57.28 ಇತ್ತು. ಈಗ ಬ್ಯಾರೆಲ್‌ಗೆ 69 ಡಾಲರ್‌ ಅಷ್ಟೇ ಇದೆ. ಹಾಗಿದ್ದರೂ ಪೆಟ್ರೋಲ್‌ ಬೆಲೆ ₹ 100, ಡೀಸೆಲ್‌ ಧಾರಣೆ ₹ 91 ಇದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡುಗೆ ಅನಿಲ ದರ ಟನ್‌ಗೆ 880 ಡಾಲರ್‌ ಇದ್ದಾಗ ದೇಶದಲ್ಲಿ ಸಿಲಿಂಡರ್‌ಗೆ ₹ 410 ಇತ್ತು. ಈಗ ಜಾಗತಿಕ ಮಾರುಕಟ್ಟೆಯಲ್ಲಿ ಟನ್‌ಗೆ 653 ಡಾಲರ್‌ ಅಷ್ಟೇ ಇದೆ. ಹಾಗಿದ್ದರೂ ಸಿಲಿಂಡರ್‌ಗೆ ₹ 900 ದರವಿದೆ’ ಎಂದು ಅವರು ದೂರಿದರು.

‘ಮೋದಿ ಸರ್ಕಾರ ಕಾರ್ಪೊರೇಟ್‌ ಸಂಸ್ಥೆಗಳಿಗೆ ತೆರಿಗೆ ವಿನಾಯಿತಿ ನೀಡಿ, ಜನ ಸಾಮಾನ್ಯರ ಮೇಲೆ ವಿವಿಧ ತೆರಿಗೆ ಹೇರುತ್ತಿದೆ. ಇದರಿಂದ ಜೀವನ ನಡೆಸುವುದು ಕಷ್ಟವಾಗಿದೆ. ಇದರ ವಿರುದ್ಧ ಪಕ್ಷವು ಪ್ರತಿಭಟನಾ ಅಭಿಯಾನ ಹಮ್ಮಿಕೊಂಡಿದೆ’ ಎಂದರು.

ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಜಬಿನೂರ್‌, ಜಿಲ್ಲಾ ಸಮಿತಿ ಸದಸ್ಯರಾದ ಸಿ.ಕೆ.ನಯಾಜುಲ್ಲಾ, ರಫೀಕ್‌ಉಲ್ಲಾ ಖಾನ್‌ ಇದ್ದರು.

ಐದು ದಿನಗಳ ಅಭಿಯಾನ

ಅಭಿಯಾನದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದ ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್‌ ‘ವಿವಿಧ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಬೆಲೆ ಏರಿಕೆ ಬಗ್ಗೆ ಜಾಗೃತಿ ಮೂಡಿಸಲಿದ್ದೇವೆ’ ಎಂದರು.

‘ನ.26ರ ಶುಕ್ರವಾರ ನಗರದ ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಕರ ಪತ್ರಗಳನ್ನು ವಿತರಿಸಿ, ಬೆಲೆ ಏರಿಕೆಯ ಬಗ್ಗೆ ಜಾಗೃತಿ ಮೂಡಿಸಲಿದ್ದೇವೆ. 27ರಂದು ಪಕ್ಷದ ಕಚೇರಿಯಲ್ಲಿ ಪ್ರಜ್ಞಾವಂತ ನಾಗರಿಕರು, ಪ್ರಗತಿಪರ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಂವಾದ ಏರ್ಪಡಿಸಲಾಗಿದೆ’ ಎಂದು ಹೇಳಿದರು.

‘28ರಂದು ಬಸ್‌ ನಿಲ್ದಾಣಗಳು ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲಿದ್ದೇವೆ. ಎಸ್‌ಡಿಪಿಐ ಸದಸ್ಯರು ಇರುವ ವಾರ್ಡ್‌ಗಳಲ್ಲಿ ಗುಂಪು ಸಭೆ ನಡೆಸಲಿದ್ದೇವೆ. 30ರಂದು ನಗರದಲ್ಲಿ ಮಾನವ ಸರಪಳಿ ನಿರ್ಮಿಸಿ ಅಭಿಯಾನ ಕೊನೆಗೊಳಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.