ADVERTISEMENT

ಹನೂರು: ಏಳು ಜಲಾಶಯಗಳು ಭರ್ತಿ; ರೈತರಲ್ಲಿ ಹರ್ಷ

ಹನೂರು: ಗುಂಡಾಲ್‌ ಜಲಾಶಯ ತುಂಬಲು ಬಾಕಿ, ಮೂರು ವರ್ಷಗಳ ಬಳಿಕ ತುಂಬಿದ ಮಾರ್ಟಳ್ಳಿಯ ಅಣೆಕಟ್ಟು

ಬಿ.ಬಸವರಾಜು
Published 20 ನವೆಂಬರ್ 2021, 21:30 IST
Last Updated 20 ನವೆಂಬರ್ 2021, 21:30 IST
ಹನೂರು ತಾಲ್ಲೂಕಿನ ಮಾರ್ಟಳ್ಳಿಯ ಕೀರೆಪಾತಿ ಜಲಾಶಯ ತುಂಬಿರುವುದು
ಹನೂರು ತಾಲ್ಲೂಕಿನ ಮಾರ್ಟಳ್ಳಿಯ ಕೀರೆಪಾತಿ ಜಲಾಶಯ ತುಂಬಿರುವುದು   

ಹನೂರು: ತಾಲ್ಲೂಕಿನ ಮೂರು ಹೋಬಳಿಗಳ ಜೀವನಾಡಿಯಾಗಿರುವ ಜಲಾಶಯಗಳು ನಿರಂತರ ಮಳೆಗೆ ಸಂಪೂರ್ಣ ಭರ್ತಿಯಾಗಿದ್ದು, ಇದನ್ನೇ ನಂಬಿ ಬದುಕುತ್ತಿದ್ದ ರೈತರ ಮೊಗದಲ್ಲಿ ಈಗ ಸಂತಸ ಮನೆ ಮಾಡಿದೆ.

ಹಲವು ದಿನಗಳಿಂದ ನಿರಂತರವಾಗಿ ಬಿದ್ದ ಮಳೆಗೆ ತಾಲ್ಲೂಕಿನ ಎಲ್ಲ ಜಲಾಶಯಗಳು ಬಹುತೇಕ ಭರ್ತಿಯಾಗಿವೆ. 1.27 ಟಿಎಂಸಿ ಅಡಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಗುಂಡಾಲ್ ಜಲಾಶಯದಲ್ಲಿ 0.82 ಟಿಎಂಸಿ ಅಡಿಗಳಷ್ಟು ನೀರಿದೆ. ಅಣೆಕಟ್ಟೆ ಭರ್ತಿಯಾಗಲು ಇನ್ನು ಐದು ಅಡಿಗಳಷ್ಟು ತುಂಬಬೇಕಿದೆ.

ಉಡುತೊರೆ ಜಲಾಶಯ 0.67 ಟಿಎಂಸಿ ಅಡಿ ಸಾಮರ್ಥ್ಯವಿದ್ದು ಬಿಆರ್‌ಟಿ ಹಾಗೂ ಮಲೆಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಅದು ಕೂಡ ಸಂಪೂರ್ಣ ಭರ್ತಿಯಾಗಿದೆ. ಉಳಿದಂತೆ ಗೋಪಿನಾಥಂ, ಮಿಣ್ಯತ್ತಹಳ್ಳ, ಹುಬ್ಬೆಹುಣಸೆ, ರಾಮನಗುಡ್ಡೆ ಮತ್ತು ಕೊತ್ತನೂರು ಗ್ರಾಮದಲ್ಲಿರುವ ಜಲಾಶಯಗಳೂ ತುಂಬಿ ನಳನಳಿಸುತ್ತಿವೆ.

ADVERTISEMENT

ಜಲಾಶಯಗಳು ತುಂಬುತ್ತಿದ್ದಂತೆಯೇ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ. ಕೆಲವು ಜಲಾಶಯಗಳು ಕೋಡಿ ಬಿದ್ದಿವೆ. ಉಡುತೊರೆ ಜಲಾಶಯದಲ್ಲಿ ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ. ಹುಬ್ಬೆಹುಣಸೆ, ರಾಮನಗುಡ್ಡೆ ಹಾಗೂ ಮಿಣ್ಯತ್ತಹಳ್ಳ ಜಲಾಶಯಗಳಲ್ಲಿ ನೀರು ಕೋಡಿ ಹರಿಯಲು ಆರಂಭಿಸಿದೆ.

ಸಾಮಾನ್ಯವಾಗಿ ತಾಲ್ಲೂಕಿನಲ್ಲಿ ಕಡಿಮೆ ಪ್ರಮಾಣದಲ್ಲಿ ಮಳೆಯಾಗುತ್ತದೆ. ಹಾಗಾಗಿ, ಜಲಾಶಯಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬರುವುದಿಲ್ಲ. ಈ ಬಾರಿ ಉತ್ತಮ ಮಳೆಯಾಗುತ್ತಿರುವುದರಿಂದ ಕೆರೆ ಕಟ್ಟೆಗಳು ಮೈದುಂಬಿಕೊಂಡಿವೆ.ಎರಡು ವರ್ಷಗಳಿಂದ ನೀರಿಲ್ಲದೇ ಸೊರಗಿದ್ದ ಜಲಾಶಯಗಳು ಈಗ ಪ್ರವಾಸದ ಕೇಂದ್ರಬಿಂದುಗಳಾಗಿ ಪರಿಣಮಿಸಿವೆ.

ನಾಲೆ ಸರಿಪಡಿಸಿ: ಜಲಾಶಯಗಳು ಮೈದುಂಬಿರುವ ಸಂತಸ ಒಂದೆಡೆಯಾದರೆ, ನಾಲೆಗಳಲ್ಲಿ ಸಮರ್ಪಕವಾಗಿ ನೀರು ಹರಿಯದಿರುವುದು ರೈತರು ಅಸಮಧಾನಗೊಳ್ಳುವಂತೆ ಮಾಡಿದೆ. ಗುಂಡಾಲ್ ಹಾಗೂ ಉಡುತೊರೆ ಜಲಾಶಯಗಳು ರೈತರಿಗೆ ಜೀವನಾಡಿಯಾಗಿವೆ. ನಾಲೆಗಳ ನಿರ್ವಹಣೆ ಕೊರತೆಯಿಂದಾಗಿ ಜಲಾಶಯದಲ್ಲಿ ನೀರು ತುಂಬಿದ್ದರೂ ರೈತರಿಗೆ ಪ್ರಯೋಜನವಾಗದಂತಿವೆ.

‘ಎರಡು ವರ್ಷಗಳ ಬಳಿಕ ಉಡುತೊರೆ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರನ್ನು ಹರಿಬಿಡಲಾಗುತ್ತಿದೆ. ನಾಲೆಗಳಲ್ಲಿ ನೀರು ಹರಿಸಿದರೆ ಹೆಚ್ಚಿನ ರೈತರಿಗೆ ಅನುಕೂಲವಾಗುತ್ತಿಲ್ಲ. ನೀರಾವರಿ ಇಲಾಖೆ ಅಧಿಕಾರಿಗಳು ನಾಲೆಗಳಲ್ಲಿ ಹೂಳು ತೆಗೆಸಿ, ಗಿಡಗಂಟಿಗಳನ್ನು ತೆರವುಗೊಳಿಸಿ ಬಳಿಕ ನೀರು ಹರಿಸಿದರೆ ಪ್ರಯೋಜನವಾಗಲಿದೆ’ ಎಂದು ಅಜ್ಜೀಪುರ ಗ್ರಾಮದ ಮುರುಡೇಶ್ವರಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಶಾಂತ್‌ ಕುಮಾರ್‌ ಅವರು, ‘ಉಡುತೊರೆ ಜಲಾಶಯದ ನಾಲೆಗಳು ಹಾಳಾಗಿರುವುದು ಗಮನಕ್ಕೆ ಬಂದಿದೆ. ಗಿಡಗಂಟಿಗಳ ತೆರವುಗೊಳಿಸಲು ಈಗಾಗಲೇ ಯೋಜನೆ ರೂಪಿಸಲಾಗಿದೆ. ಶೀಘ್ರದಲ್ಲೇ ನಾಲೆಗಳನ್ನು ದುರಸ್ತಿಪಡಿಸಿ, ಗಿಡಗಂಟಿಗಳನ್ನು ತೆರವುಗೊಳಿಸಿ ನಾಲೆಗಳಲ್ಲಿ ನೀರು ಬಿಡಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

ವರ್ಷಗಳ ಬಳಿಕ ಕೀರೆಪಾತಿ ಡ್ಯಾಂ ಭರ್ತಿ

ಉಡುತೊರೆ ಜಲಾಶಯ ಸಂಪೂರ್ಣ ಭರ್ತಿಯಾಗಿರುವುದರಿಂದ, ಅಲ್ಲಿಂದ ನೀರನ್ನು ಕೀರೆಪಾತಿ ಜಲಾಶಯಕ್ಕೆ ಹರಿಸುವಂತೆ ಮಾರ್ಟಳ್ಳಿ ಗ್ರಾಮಸ್ಥರು ಶಾಸಕ ಆರ್.ನರೇಂದ್ರ ಅವರಿಗೆ ಮನವಿ ಸಲ್ಲಿಸಿದ್ದರು. 15 ದಿನಗಳಿಂದ ಹದಿನೈದು ಉಡುತೊರೆಯಿಂದ ಕೀರೆಪಾತಿಗೆ ನಿರಂತರವಾಗಿ ನೀರು ಹರಿಸಲಾಗುತ್ತಿದ್ದು, ಹಲವು ವರ್ಷಗಳಿಂದ ಬರಿದಾಗಿದ್ದ ಜಲಾಶಯವೀಗ ಭರ್ತಿಯಾಗಿದೆ.

ಇದರಿಂದಾಗಿ ಸಂದನಪಾಳ್ಯ, ಸುಳ್ವಾಡಿ ಹಾಗೂ ಮಾರ್ಟಳ್ಳಿ ಗ್ರಾಮದಲ್ಲಿ ಎದುರಾಗಿದ್ದ ಕುಡಿಯುವ ನೀರಿನ ಸಮಸ್ಯೆ ನೀಗಿದಂತಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

****

ಕ್ಷೇತ್ರ ವ್ಯಾಪ್ತಿಯ ಏಳು ಜಲಾಶಯಗಳು ಭರ್ತಿಯಾಗಿವೆ. ರೈತರಿಗೆ ಅನುಕೂಲವಾಗುವಂತೆ ನೀರನ್ನು ಸಮರ್ಪಕವಾಗಿ ಬಳಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

- ಆರ್. ನರೇಂದ್ರ, ಹನೂರು ಶಾಸಕ

ಹನೂರು:

3 ವರ್ಷಗಳ ಬಳಿಕ ಗ್ರಾಮದಲ್ಲಿರುವ ಕೀರೆಪಾತಿ ಡ್ಯಾಂ ತುಂಬಿ ಕೋಡಿ ಹರಿಯುತ್ತಿದೆ. ಕೋಡಿ ಹರಿಯುತ್ತಿರುವ ನೀರನ್ನು ಚೆಕ್ ಡ್ಯಾಂ ನಿರ್ಮಿಸಿ ಸಂಗ್ರಹಿಸಲಾಗುವುದು

- ರಾಮಲಿಂಗಂ, ಉಪಾಧ್ಯಕ್ಷ, ಮಾರ್ಟಳ್ಳಿ ಗ್ರಾಮಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.