ADVERTISEMENT

ಶಾದಿ ಭಾಗ್ಯ: 446 ಮಂದಿಗೆ ಸಿಗಬೇಕಿದೆ ನೆರವು

ಬಿಜೆಪಿ ಸರ್ಕಾರದಿಂದ ಬಿದಾಯಿಗೆ ವಿದಾಯ, ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ

ಸೂರ್ಯನಾರಾಯಣ ವಿ
Published 17 ಮಾರ್ಚ್ 2020, 8:58 IST
Last Updated 17 ಮಾರ್ಚ್ 2020, 8:58 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಚಾಮರಾಜನಗರ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಆರಂಭಿಸಿದ್ದ ಬಿದಾಯಿ (ಶಾದಿ ಭಾಗ್ಯ) ಯೋಜನೆಯ ಅಡಿಯಲ್ಲಿ ಜಿಲ್ಲೆಯಲ್ಲಿ ಇನ್ನೂ 446 ಮಂದಿಗೆ ಸಹಾಯಧನ ಬರಬೇಕಿದೆ.

ಈಗಿನ ಬಿಜೆಪಿ ಸರ್ಕಾರ, ಈ ಬಜೆಟ್‌ನಲ್ಲಿ ಈ ಯೋಜನೆಗಾಗಿ ಹಣ ಹಂಚಿಕೆ ಮಾಡಿಲ್ಲದಿರುವುದರಿಂದ ಯೋಜನೆ ರದ್ದಾಗಲಿದೆ ಎಂಬ ಮಾತು ಬಲವಾಗಿ ಕೇಳಿ ಬರುತ್ತಿದೆ. ಯೋಜನೆ ಅಡಿಯಲ್ಲಿ ಹೊಸದಾಗಿ ಅರ್ಜಿ ಸ್ವೀಕರಿಸುವಂತೆ ಇಲಾಖೆಗೆ ತಿಳಿಸಿಲ್ಲ. ಆದರೆ, ಬಾಕಿ ಇರುವ ಅರ್ಜಿಗಳನ್ನು ಇತ್ಯರ್ಥ ಮಾಡುವ ಬಗ್ಗೆ ಜಿಲ್ಲಾ ಅಧಿಕಾರಿಗಳಿಗೆ ಸೂಚನೆ ಬಂದಿದೆ. ಅದರಂತೆ, ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳು ಅರ್ಜಿದಾರರ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ.

ಅಲ್ಪಸಂಖ್ಯಾತ ಸಮುದಾಯದಲ್ಲಿ ಗುರುತಿಸಿಕೊಂಡಿರುವ ಸೇರಿದ ಮುಸ್ಲಿಂ, ಕ್ರಿಶ್ಚಿಯನ್‌, ಜೈನ, ಬುದ್ಧ, ಸಿಖ್‌ ಮತ್ತು ಪಾರ್ಸಿ ಧರ್ಮಗಳ ಬಡ ಕುಟುಂಬಗಳ ಹೆಣ್ಣು ಮಕ್ಕಳಿಗೆ ಮದುವೆ ಮಾಡಲು ₹50 ಸಾವಿರ ಸಹಾಯಧನವನ್ನು ನೀಡುವ ಬಿದಾಯಿ ಯೋಜನೆಯನ್ನು ಸಿದ್ದರಾಮಯ್ಯ ಸರ್ಕಾರ 2013–14ರಲ್ಲಿ ಜಾರಿಗೆ ತಂದಿತ್ತು.

ADVERTISEMENT

ಈ ಯೋಜನೆ ಬಗ್ಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಹಾಗಿದ್ದರೂ, ನಿರಾಂತಕವಾಗಿ ಪ್ರತಿ ವರ್ಷ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಲೇ ಬಂದಿತ್ತು. ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಅನುದಾನವನ್ನು ಸ್ವಲ್ಪ ಕಡಿತಗೊಳಿಸಿತ್ತು. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಇದಕ್ಕಾಗಿ ಯಾವುದೇ ಅನುದಾನ ಘೋಷಿಸಿಲ್ಲ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನೀಡಿರುವ ಅಂಕಿ ಅಂಶಗಳ ಪ್ರಕಾರ,ಏಳು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದ 769 ಕುಟುಂಬಗಳಿಗೆ, ಕ್ರಿಶ್ಚಿಯನ್‌ ಸಮುದಾಯದ 521 ಕುಟುಂಬಗಳಿಗೆ, ಜೈನ ಧರ್ಮದ ಎರಡು ಕುಟುಂಬಗಳಿಗೆ ತಲಾ ₹50 ಸಾವಿರದಂತೆ ಸಹಾಯಧನ ವಿತರಿಸಲಾಗಿದೆ. ಸಿಖ್‌, ಪಾರ್ಸಿ ಮತ್ತು ಬೌದ್ಧರಿಂದ ಇದುವರೆಗೆ ಒಂದೇ ಒಂದು ಅರ್ಜಿ ಸಲ್ಲಿಕೆಯಾಗಿಲ್ಲ.ಮುಸ್ಲಿಂ ಸಮುದಾಯದ 398 ಅರ್ಜಿಗಳು, ಕ್ರಿಶ್ಚಿಯನ್ನರ 47 ಮತ್ತು ಒಂದು ಜೈನ ಕುಟುಂಬದ ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇವೆ. ಜಿಲ್ಲೆಗೆ ಈ ಯೋಜನೆ ಅಡಿ ಇದುವರೆಗೆ ₹6.46 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಇನ್ನೂ ₹2.23 ಕೋಟಿ ಅಗತ್ಯವಿದೆ.

‘ನಮ್ಮಲ್ಲಿ 446 ಮಂದಿ ಸಲ್ಲಿಸಿರುವ ಅರ್ಜಿಗಳಿಗೆ ಸಹಾಯ ಧನ ನೀಡುವುದು ಬಾಕಿ ಇದೆ. ಈ ವರ್ಷ ಬಜೆಟ್‌ನಲ್ಲಿ ಈ ಯೋಜನೆ ಬಗ್ಗೆ ಪ್ರಸ್ತಾಪಿಸಲಾಗಿಲ್ಲ. ಆದರೆ, ಅರ್ಜಿ ಸಲ್ಲಿಸಿ ಧನಸಹಾಯ ಬರದವರಿಗೆ ಹಣ ಸಿಗಲಿದೆ.ಅರ್ಜಿದಾರ‌ರಿಂದ ಅಗತ್ಯ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ. ಶೀಘ್ರವಾಗಿ ಇಲಾಖೆಗೆ ಕಳುಹಿಸಲಾಗುವುದು’ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಾಜೇಂದ್ರ ಪ್ರಸಾದ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮುಸ್ಲಿಮರೇ ಜಾಸ್ತಿ: ಏಳು ವರ್ಷಗಳ ಅಂಕಿ ಅಂಶಗಳಗಳನ್ನು ಗಮನಿಸಿದರೆ, ಈ ಯೋಜನೆಗಾಗಿ ಅರ್ಜಿ ಸಲ್ಲಿಸಿದವರಲ್ಲಿ ಮುಸ್ಲಿಂ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದುವರೆಗೆ 1,184 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 17 ಅರ್ಜಿಗಳು ತಿರಸ್ಕತಗೊಂಡಿವೆ.ಎರಡನೇ ಸ್ಥಾನದಲ್ಲಿ ಕ್ರಿಶ್ಚಿಯನ್ನರಿದ್ದಾರೆ. ಇವರಿಂದ 492 ಅರ್ಜಿಗಳು ಬಂದಿದ್ದು, 24 ಅರ್ಜಿಗಳು ತಿರಸ್ಕೃತಗೊಂಡಿವೆ.

ಬಾಕಿ ಉಳಿದಿರುವ ಅರ್ಜಿಗಳನ್ನು ಇತ್ಯರ್ಥ ಮಾಡುವುದಾಗಿ ಇಲಾಖೆ ಹೇಳಿದ್ದು, ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಬರುವ ನಿರೀಕ್ಷೆ ಇದೆ ಎನ್ನುತ್ತಾರೆಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಅಧಿಕಾರಿ
ರಾಜೇಂದ್ರ ಪ್ರಸಾದ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.