ADVERTISEMENT

ಸಂತೇಮರಹಳ್ಳಿ: ಶಂಕರೇಶ್ವರನ ಬೆಟ್ಟದಲ್ಲಿ ಅದ್ದೂರಿ ಜಾತ್ರೆ ಇಂದು

ಮಹದೇವ್ ಹೆಗ್ಗವಾಡಿಪುರ
Published 31 ಆಗಸ್ಟ್ 2025, 2:36 IST
Last Updated 31 ಆಗಸ್ಟ್ 2025, 2:36 IST
ಸಂತೇಮರಹಳ್ಳಿ ಸಮೀಪದ ಯಡಿಯೂರು ಹಾಗೂ ಮಂಗಲ ಗ್ರಾಮಗಳ ನಡುವೆ ಇರುವ ಶಂಕರೇಶ್ವರ ಬೆಟ್ಟದ ಮೇಲಿರುವ ಶಂಕರೇಶ್ವರನ ದೇವಸ್ಥಾನ
ಸಂತೇಮರಹಳ್ಳಿ ಸಮೀಪದ ಯಡಿಯೂರು ಹಾಗೂ ಮಂಗಲ ಗ್ರಾಮಗಳ ನಡುವೆ ಇರುವ ಶಂಕರೇಶ್ವರ ಬೆಟ್ಟದ ಮೇಲಿರುವ ಶಂಕರೇಶ್ವರನ ದೇವಸ್ಥಾನ   

ಸಂತೇಮರಹಳ್ಳಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂತೇಮರಹಳ್ಳಿಯಿಂದ ಚಾಮರಾಜನಗರಕ್ಕೆ ಹೋಗುವ ಮಾರ್ಗದಲ್ಲಿರುವ ಯಡಿಯೂರು ಮತ್ತು ಮಂಗಲ ಗ್ರಾಮಗಳ ನಡುವೆ ಇರುವ ಶಂಕರೇಶ್ವರನ ಬೆಟ್ಟ ಕಣ್ಮನ ಸೆಳೆಯುತ್ತದೆ.

ಸಂತೇಮರಹಳ್ಳಿಯಿಂದ ಕೂಗಳತೆ ದೂರದಲ್ಲಿ ಹಸಿರು ಹೊದ್ದ ಶಂಕರೇಶ್ವರನ ಬೆಟ್ಟದಲ್ಲಿ ಪ್ರತಿವರ್ಷ ಬಾದ್ರಪದ ಚೌತಿಯ 5ನೇ ದಿನವಾದ ಆ.31ರಂದು ಇಲ್ಲಿ ವಿಜೃಂಭಣೆಯಿಂದ ಜಾತ್ರೆ ನಡೆಯಲಿದೆ.

ಜಾತ್ರಾ ಮಹೋತ್ಸವ ಅಂಗವಾಗಿ ಶಂಕರೇಶ್ವರ ದೇವಸ್ಥಾನ ಹಾಗೂ ತಪ್ಪಲಿನಲ್ಲಿರುವ ದೇವಸ್ಥಾನಗಳಿಗೆ ಸುಣ್ಣ ಬಣ್ಣ ಬಳಿದು ಸಿಂಗಾರ ಮಾಡಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ವಾಹನಗಳ ಸಂಚಾರಕ್ಕೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಜಾತ್ರೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ADVERTISEMENT

ಸುತ್ತಮುತ್ತಲಿನ ಗ್ರಾಮಗಳಾದ ಮಂಗಲ, ಯಡಿಯೂರು, ಮಹಾಂತಾಳಪುರ, ಹುಲ್ಲೇಪುರ, ಮಂಗಲ ಹೊಸೂರು ಗ್ರಾಮಸ್ಥರು ಜಾತ್ರೆಯಲ್ಲಿ ಭಾಗವಹಿಸಿ ಅದ್ಧೂರಿಯಾಗಿ ಹಬ್ಬ ಆಚರಿಸುತ್ತಾರೆ. ದೂರದ ಊರುಗಳಿಂದ ಬಂಧು- ಬಳಗದವರು ಈಗಾಗಲೇ ಆಗಮಿಸಿದ್ದು ಗ್ರಾಮಗಳಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ.

ಜಾತ್ರೆಯ ಮಾರನೆಯ ದಿನವಾದ ಸೋಮವಾರ ಕಿರು ಜಾತ್ರಾ ಮಹೋತ್ಸವ ಕೂಡ ನಡೆಯಲಿದೆ. ಜಾತ್ರೆಯ ದಿನ ಸೂರ್ಯನ ಕಿರಣಗಳು ಶಿವಲಿಂಗದ ಮೇಲೆ ಬೀಳುವುದು ವಿಶೇಷ. ರಾಜ್ಯದ ವಿವಿಧೆಡೆಗಳಿಂದ ಸಾವಿರಾರು ಭಕ್ತರು ಜಾತ್ರೆಗೆ ಆಗಮಿಸುತ್ತಾರೆ.

ಶಂಕರೇಶ್ವನ ಬೆಟ್ಟಕ್ಕೆ ವಿಶೇಷ ಐತಿಹ್ಯ ಇದೆ. ಎರಡು ಶತಮಾನಗಳ ಹಿಂದೆ ಮಂಗಲದ ಗುಡ್ಡಪ್ಪ ಎಂಬುವರ ಹಸು ಮೇವು ಅರಸಿಕೊಂಡು ಬೆಟ್ಟಕ್ಕೆ ಹೋಗಿ ಸಂಜೆ ಮನೆಗೆ ಬಂದಾಗ ಹಾಲು ನೀಡುತ್ತಿರಲಿಲ್ಲವಂತೆ. ಅನುಮಾನಗೊಂಡು ಮೇವಿಗೆ ಬೆಟ್ಟಕ್ಕೆ ಹೊರಟ ಹಸುವನ್ನು ಹಿಂಬಾಲಿಸಿದಾಗ ಹಸುವಿನ ಕೆಚ್ಚಲಿನಿಂದ ಹಾಲು ಪೊದೆಯೊಳಗಿದ್ದ ಶಿವಲಿಂಗಕ್ಕೆ ಅಭಿಷೇಕವಾಗುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಶಿವಲಿಂಗಕ್ಕೆ ಗುಡಿ ಗೋಪುರ ನಿರ್ಮಿಸಲಾಯಿತು ಎಂಬ ಕಥೆ ಈ ಭಾಗದಲ್ಲಿ ಜನಜನಿತವಾಗಿದೆ.

ಶಂಕರನ ಹೆಸರಿನಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದು ಸುತ್ತಮುತ್ತಲಿನ ಗ್ರಾಮಸ್ಥರು ಮನೆ ದೇವರಂತೆ ತಲೆ ತಲಾಂತರಗಳಿಂದ ಪೂಜಿಸಿಕೊಂಡು ಬರುತ್ತಿದ್ದಾರೆ ಎನ್ನುತ್ತಾರೆ ದೇವಸ್ಥಾನದ ಅರ್ಚಕ ಮರಿಸ್ವಾಮಿ. ಬೆಟ್ಟದಲ್ಲಿ ಕಾಡು ಪ್ರಾಣಿಗಳು ವಾಸಿಸುವ ಗುಹೆಗಳು ಕಾಣಸಿಗುತ್ತವೆ. ಬೆಟ್ಟದ ತಪ್ಪಲಿನಲ್ಲಿ ಗಣಪತಿ, ವೀರಭದ್ರೇಶ್ವರ, ಬಸವೇಶ್ವರ ದೇವಾಲಯಗಳಿವೆ. ಜಾತ್ರೆಯ ಪ್ರಯಕ್ತ ಇಲ್ಲಿಯೂ ವಿಶೇಷ ಪೂಜೆಗಳು ನಡೆಯುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.