ADVERTISEMENT

ಚಾಮರಾಜನಗರ| ಶ್ರೇಷ್ಠ ವ್ಯಕ್ತಿತ್ವ, ನಾಯಕತ್ವಕ್ಕೆ ಶಿವಾಜಿ ಮಾದರಿ: ಟಿ.ಜವರೇಗೌಡ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 2:08 IST
Last Updated 20 ಫೆಬ್ರುವರಿ 2026, 2:08 IST
ಚಾಮರಾಜನಗರದ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಅವರ 399ನೇ ಜಯಂತಿಯಲ್ಲಿ ಶಿವಾಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು
ಚಾಮರಾಜನಗರದ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಅವರ 399ನೇ ಜಯಂತಿಯಲ್ಲಿ ಶಿವಾಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು   

ಚಾಮರಾಜನಗರ: ಭಾರತೀಯ ಇತಿಹಾಸದಲ್ಲಿ ಶಿವಾಜಿ ಮಹಾರಾಜರ ಶ್ರೇಷ್ಠ, ಆದರ್ಶ ವ್ಯಕ್ತಿತ್ವ, ನಾಯಕತ್ವ ಗುಣ, ಸ್ವರಾಜ್ಯ ಕಲ್ಪನೆ, ಸ್ವಾಭಿಮಾನಿ ರಾಷ್ಟ್ರ ಕಲ್ಪನೆ ಹಾಗೂ ಧಾರ್ಮಿಕ ಸಹಿಷ್ಣುತೆ ಸ್ಮರಣೀಯ ಹಾಗೂ ಮಾದರಿ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಹೇಳಿದರು.

ನಗರದ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಅವರ 399ನೇ ಜಯಂತಿಯಲ್ಲಿ ಶಿವಾಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಾರಾಷ್ಟ್ರದ ಶಿವನೇರಿ ದುರ್ಗದಲ್ಲಿ 1627ರಲ್ಲಿ ಜನಿಸಿದ ಶಿವಾಜಿ ತಾಯಿ ಜೀಜಾ ಬಾಯಿ ಅವರಿಂದ ಪ್ರಭಾವಿತರಾಗಿದ್ದರು. ತಾಯಿ ಹೇಳುತ್ತಿದ್ದ ರಾಮಾಯಣ, ಮಹಾಭಾರತದ ಕಥೆ, ಪರಂಪರೆ ಹಾಗೂ ಇತಿಹಾಸವನ್ನು ಅರ್ಥೈಸಿಕೊಂಡು ಮುಂದೆ ಸ್ವರಾಜ್ಯ ಕಟ್ಟಲು ಮುಂದಾದರು. ಶಿವಾಜಿ ಧೈರ್ಯ, ಸಾಹಸ, ಹೋರಾಟ ಗುಣಗಳು ಎಲ್ಲರಿಗೂ ಸ್ಫೂರ್ತಿ ಹಾಗೂ ಆದರ್ಶ ಎಂದರು.

ADVERTISEMENT

ಗೆರಿಲ್ಲಾ ಯುದ್ಧತಂತ್ರದ ಮೂಲಕ ಮೊಘಲರು ಮತ್ತು ಬಿಜಾಪುರದ ಆದಿಲ್ ಶಾಹಿಗಳಿಗೆ ಸಿಂಹಸ್ವಪ್ನರಾಗಿದ್ದ ಶಿವಾಜಿ ತಮ್ಮ ಆಡಳಿತದಲ್ಲಿ ಎಲ್ಲ ವರ್ಗದ ಜನರನ್ನು ಸಮಾನವಾಗಿ ಕಾಣುತ್ತಿದ್ದರು. ದೇಶ ಸಂರಕ್ಷಣೆಗೆ ಸೈನ್ಯವನ್ನು ಸಜ್ಜುಗೊಳಿಸಿ ಇತರೆ ರಾಜರಿಗೂ ಮಾದರಿಯಾಗಿದ್ದರು. ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದ ಶಿವಾಜಿ ಸದಾಕಾಲ ಸ್ಮರಣೀಯರು ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನ ಮಾತನಾಡಿ ‘ಬಾಲ್ಯದಲ್ಲಿಯೇ ಹೋರಾಟದ ಗುಣಗಳನ್ನು ಮೈಗೂಡಿಸಿಕೊಂಡಿದ್ದ ಶಿವಾಜಿ ಆದರ್ಶ ರಾಜನ ಪ್ರತಿರೂಪದಂತಿದ್ದರು. ಅವರ ಧೈರ್ಯ, ಶೌರ್ಯ, ವೀರತ್ವ ಹಾಗೂ ನಾಯಕತ್ವ ಗುಣಗಳು ಮಾದರಿ. ದೇಶಕ್ಕೆ, ನಾಡಿಗೆ ಅಪಾರ ಕೊಡುಗೆ ನೀಡಿರುವ ಶಿವಾಜಿ ಮಹಾರಾಜರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.

ಕ್ಷತ್ರಿಯ ಮರಾಠ ಪರಿಷತ್ ಜಿಲ್ಲಾಧ್ಯಕ್ಷ ವೆಂಕಟರಾವ್ ಸಾಠೆ ಮಾತನಾಡಿ, ಉತ್ತಮ ಚಾಣಾಕ್ಷ ಹಾಗೂ ಧರ್ಮಸಹಿಷ್ಣುವಾಗಿದ್ದ ಶಿವಾಜಿ ಮಹಾರಾಜ ಪ್ರಜೆಗಳ ವಿಶ್ವಾಸಗಳಿಸಿ ಆಡಳಿತವನ್ನು ಸಮರ್ಥವಾಗಿ ಮುನ್ನಡೆಸಿದರು. ಸರ್ವರನ್ನೂ ಸಮಾನವಾಗಿ ನೋಡಿಕೊಳ್ಳುತ್ತಿದ್ದರು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜು, ನಗರದ ಪೊಲೀಸ್ ಇನ್‌ಸ್ಟೆಕ್ಟರ್ ಜಗದೀಶ್, ಸಮುದಾಯದ ಮುಖಂಡರಾದ ಚಂದ್ರರಾವ್, ಶ್ರೀನಿವಾಸ್, ಮಮತಾ ಬಾಯಿ, ಲೋಕೇಶ್ ರಾವ್, ಬಾಬು ರಾವ್, ಅಭಿರಾಮ್, ಶಿವಕುಮಾರ್, ಅನಿತಾ ಬಾಯಿ, ಎಲ್. ಸುರೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.