ADVERTISEMENT

ಶ್ರಾವಣದ ಸಂಭ್ರಮ: ಬಿಳಿಗಿರಿರಂಗನ ಬೆಟ್ಟದಲ್ಲಿ ಭಕ್ತರ ದಂಡು

ದಾಸರಿಂದ ಗೋವಿಂದ ನಾಮ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 4:24 IST
Last Updated 27 ಜುಲೈ 2025, 4:24 IST
ಯಳಂದೂರು ತಾಲ್ಲೂಕಿನ ಬಿಳಿಗಿರಿಬೆಟ್ಟದ ರಂಗನಾಥಸ್ವಾಮಿ ದೇವಳದಲ್ಲಿ ಶ್ರಾವಣ ಶನಿವಾರದ ದಾಸರು ಬ್ಯಾಟೆಮನೆ ಉತ್ಸವ ನೆರವೇರಿಸಿದರು (ಎಡಚಿತ್ರ). ಭಕ್ತರಿಗೆ ಅನ್ನ ಪ್ರಸಾದ ವಿತರಿಸಲಾಯಿತು
ಯಳಂದೂರು ತಾಲ್ಲೂಕಿನ ಬಿಳಿಗಿರಿಬೆಟ್ಟದ ರಂಗನಾಥಸ್ವಾಮಿ ದೇವಳದಲ್ಲಿ ಶ್ರಾವಣ ಶನಿವಾರದ ದಾಸರು ಬ್ಯಾಟೆಮನೆ ಉತ್ಸವ ನೆರವೇರಿಸಿದರು (ಎಡಚಿತ್ರ). ಭಕ್ತರಿಗೆ ಅನ್ನ ಪ್ರಸಾದ ವಿತರಿಸಲಾಯಿತು   

ಯಳಂದೂರು: ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ ಬಿಳಿಗಿರಿರಂಗನ ಬೆಟ್ಟದ ರಂಗನಾಥಸ್ವಾಮಿ ದೇವಾಲಯದಲ್ಲಿ ಶ್ರಾವಣ ಶನಿವಾರದ ಪ್ರಯುಕ್ರ ಸಾವಿರಾರು ಭಕ್ತರು ತುಂತುರು ಮಳೆಯ ನಡುವೆ ಭೇಟಿ ನೀಡಿ, ಪೂಜಾ ಕೈಂಕರ್ಯ ನೆರವೇರಿಸಿದರು. ಮಳೆ, ಬೆಳೆ ಸಮೃದ್ಧಿಗೆ ಪ್ರಾರ್ಥಿಸಿ ಪೂಜೆ ಸಲ್ಲಿಸಿದರು.

ಮುಂಜಾನೆ ದೇಗುಲದ ಸುತ್ತಲೂ ತಳಿರು ತೋರಣಗಳ ಸಿಂಗಾರ ಮಾಡಿ, ಬಣ್ಣದ ರಂಗೋಲಿ ಹಾಕಿ, ಶ್ರಾವಣ ಶುದ್ಧ ಬಿದಿಗೆ ಆಶ್ಲೇಷ ನಕ್ಷತ್ರದಲ್ಲಿ ಸ್ವಾಮಿಗೆ ಪಂಚಾಮೃತ ಅಭಿಷೇಕ ಹಾಗೂ ಪೂಜಾರತಿ ಮಾಡಲಾಯಿತು. ನಂತರ ಭಕ್ತರಿಗೆ ದೇವರ ದರ್ಶನಕ್ಕಾಗಿ ದೇವಾಲಯವನ್ನು ಮುಕ್ತಗೊಳಿಸಲಾಯಿತು. ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆದರು.

ರಂಗನಾಥನ ಉತ್ಸವ ಮೂರ್ತಿಯನ್ನು ಮಧ್ಯಾಹ್ನ ಹೂವಿನ ಹಾರಗಳಿಂದ ಅಲಂಕಾರ ಮಾಡಿ, ಹಣ್ಣುಕಾಯಿ ಅರ್ಪಿಸಿ, ಪೂಜೆ ಮಾಡಿ, ಮಂಗಳವಾದ್ಯ ಮೊಳಗಿಸಲಾಯಿತು. ನಂತರ ಪಲ್ಲಕ್ಕಿಯಲ್ಲಿ ರಂಗಪ್ಪನ ಮೂರ್ತಿ ಇಟ್ಟು ದೇಗುಲದ ಸುತ್ತಲೂ ಮೆರವಣಿಗೆ ಮಾಡಲಾಯಿತು. ಈ ಸಮಯ ದೇವರ ಬೆಳ್ಳಿ ದಂಡಕ ಹೊತ್ತು
ಭಕ್ತರು ಗೋವಿಂದನಾಮ ಸ್ಮರಣೆ ಮಾಡಿದರು.

ADVERTISEMENT

ದಾಸನ ಒಕ್ಕಲಿನ ಭಕ್ತರು ಬ್ಯಾಟಮನೆ ಉತ್ಸವದಲ್ಲಿ ಪಾಲ್ಗೊಂಡರು. ದಾಸಪಡೆ ಅಕ್ಕಿ, ಕಜ್ಜಾಯ ಮತ್ತು ಪುರಿಯಿಂದ ತಯಾರಿಸಿದ ವಿಶೇಷ ಪ್ರಸಾದವನ್ನು ಇಟ್ಟು, ದೇವರ ಮುಖವಾಡ ತೊಟ್ಟು ಆಪರಾಕ್, ಗೋಪರಾಕ್ ಸಂಪ್ರದಾಯ ನೆರವೇರಿಸಿದರು. ನಂತರ ದೇವರ ಉತ್ಸವದಲ್ಲಿ ಪಾಲ್ಗೊಂಡು ಧನ್ಯತೆ ಮೆರೆದರು.

ದಾಸೋಹದಲ್ಲಿ ಸಂಜೆ ತನಕ ಅನ್ನ ಪ್ರಸಾದ ವಿತರಿಸಲಾಯಿತು. ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದರು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಸುಗಮ ಬಸ್ ಸಂಚಾರ ವ್ಯವಸ್ಥೆ ಮಾಡಲಾಗಿತ್ತು ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ
ವೈ.ಎನ್.ಮೋಹನ್ ಕುಮಾರ್ ಹೇಳಿದರು.

ರಂಗನಾಥಸ್ವಾಮಿ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು
ಭಕ್ತರಿಗೆ ಅನ್ನ ಪ್ರಸಾದ ವಿತರಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.