ADVERTISEMENT

ಧಮ್‌ ಇದ್ದರೆ ‘40% ಕಮಿಷನ್‘ ತನಿಖೆ ಮಾಡಲಿ: ಮೋದಿಗೆ ಸಿದ್ದರಾಮಯ್ಯ ಸವಾಲು

ಭ್ರಷ್ಟಾಚಾರಕ್ಕೆ ಸಿ.ಎಂ ಬಸವರಾಜ ಬೊಮ್ಮಾಯಿ, ಪ್ರಧಾನಿ ಮೋದಿ ಕುಮ್ಮಕ್ಕು–ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2022, 12:43 IST
Last Updated 19 ಏಪ್ರಿಲ್ 2022, 12:43 IST
   

ಚಾಮರಾಜನಗರ: ‘ರಾಜ್ಯ ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಮ್ಮಕ್ಕು ಇದೆ. ಮೋದಿ ಅವರಿಗೆ ಧಮ್‌ ಇದ್ದರೆ ಶೇ 40ರಷ್ಟು ಕಮಿಷನ್‌ ಆರೋಪದ ಬಗ್ಗೆ ತನಿಖೆ ನಡೆಸಲಿ‘ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳವಾರ ಸವಾಲು ಹಾಕಿದರು.

ರಾಜ್ಯ ಸರ್ಕಾರದ ಭ್ರಷ್ಟಾಚಾರ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಗುತ್ತಿಗೆದಾರ ಸಂತೋಷ್ ಕೆ.ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಭ್ರಷ್ಟಾಚಾರ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸುವಂತೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಆಯೋಜಿಸಿದ್ದ ಪ್ರತಿಭಟನಾ ರ‍್ಯಾಲಿಯಲ್ಲಿ ಅವರು ಮಾತನಾಡಿದರು.

ರಾಜ್ಯ ಸರ್ಕಾರದ ಭ್ರಷ್ಟಾಚಾರ ಖಂಡಿಸಿ, ಬೆಲೆ ಏರಿಕೆ ವಿರುದ್ಧ, ಕೆ.ಎಸ್‌.ಈಶ್ವರಪ್ಪ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ಚಾಮರಾಜನಗರದಲ್ಲಿ ಮಂಗಳವಾರ ಪ್ರತಿಭಟನಾ ರ‍್ಯಾಲಿ ನಡೆಯಿತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನರಾಯಣ ಇತರರು ಇದ್ದರು

‘ಹಿಂದೆ ಚುನಾವಣಾ ಭಾಷಣದಲ್ಲಿ ಪ್ರಧಾನಿ ಮೋದಿ ಅವರು, ‘ಸಿದ್ದರಾಮಯ್ಯ ಸರ್ಕಾರ ಶೇ 10 ಕಮಿಷನ್‌ ಸರ್ಕಾರ’ ಎಂದು ಆರೋಪಿಸಿದ್ದರು. ‘ದಾಖಲೆ ಇದ್ದರೆ ತನಿಖೆ ನಡೆಸಿ’ ಎಂದು ಅಂದು ಪ್ರಧಾನಿಗೆ ಹೇಳಿದ್ದೆ. 2021ರ ಜೂನ್‌ನಲ್ಲಿ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಪ್ರಧಾನಿ ಅವರಿಗೆ ಪತ್ರ ಬರೆದು, ಶೇ 40 ಕಮಿಷನ್‌ ಬಗ್ಗೆ ಆರೋಪ ಮಾಡಿದ್ದರು. 10 ತಿಂಗಳಾದರೂ ಪ್ರಧಾನಿ ಮೌನವಾಗಿದ್ದಾರೆ’ ಎಂದರು.

ADVERTISEMENT

ಇಂತಹ ಸರ್ಕಾರ ಬೇಕಾ: ‘ನಾನು 45 ವರ್ಷಗಳಿಂದ ರಾಜಕೀಯದಲ್ಲಿ ಇದ್ದೇನೆ. ಇಷ್ಟು ಭ್ರಷ್ಟಾಚಾರ, ಸುಳ್ಳು ಹೇಳುವ, ದೇಶದಲ್ಲಿ ಅಶಾಂತಿಯನ್ನು ನಿರ್ಮಾಣ ಮಾಡಿ ದ್ವೇಷ ಬಿತ್ತುವ ಸರ್ಕಾರವನ್ನು ನಾನು ಇದುವರೆಗೆ ನೋಡಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ನಾವು ಹೇಳುತ್ತಿಲ್ಲ. ಜನರೇ ಮಾತನಾಡಿಕೊಳ್ಳುತ್ತಿದ್ದಾರೆ’ ಎಂದರು.

‘ಬೊಮ್ಮಾಯಿ ಅವರು ನಮ್ಮದು ರೈತ ಪರ ಸರ್ಕಾರ ಎಂದು ಹೇಳುತ್ತಿದ್ದಾರೆ. ಆದರೆ, ರೈತರು ಬೆಳೆದಿರುವ ಭತ್ತ, ತೊಗರಿ, ಮೆಕ್ಕೆಜೋಳ, ಅರಿಸಿನ ಬೆಳೆಗಳನ್ನು ಖರೀದಿಸುವವರೇ ಇಲ್ಲ. ಬಡವರಿಗೆ ಒಂದೇ ಒಂದು ಮನೆ ಕೊಟ್ಟಿಲ್ಲ. ಬಡವರಿಗಾಗಿ 7 ಕೆಜಿ ಅಕ್ಕಿ ಕೊಟ್ಟರೆ, ಇವರು 5 ಕೆಜಿಗೆ ಇಳಿಸಿದರು. ದಲಿತರು, ಹಿಂದುಳಿದವರಿಗೆ ಸೌಲಭ್ಯ ಕಲ್ಪಿಸಿಲ್ಲ. ಕೋವಿಡ್ ಪರಿಸ್ಥಿತಿ ನಿರ್ವಹಣೆಯಲ್ಲೂ ₹2000 ಕೋಟಿ ಲೂಟಿ ಮಾಡಿದ್ದಾರೆ. ಇಂತಹ ಸರ್ಕಾರ ಇರಬೇಕಾ’ ಎಂದು ಪ್ರಶ್ನಿಸಿದರು.

‘ನಾವು ಅಧಿಕಾರಕ್ಕೆ ಬರಬೇಕು ಎಂದು ಬಿಜೆಪಿ ಸರ್ಕಾರ ತೊಲಗಬೇಕು ಎಂದು ಹೇಳುತ್ತಿಲ್ಲ. ಈ ರಾಜ್ಯ ಉಳಿಯಬೇಕು. ಸಂವಿಧಾನ ಉಳಿಯಬೇಕು. ಬಡವರಿಗೆ ಸೌಲಭ್ಯಗಳು ಸಿಗಬೇಕು. ಆ ಕಾರಣಕ್ಕಾಗಿ ನಾವು ಅಧಿಕಾರಕ್ಕೆ ಬರಬೇಕು. ಪಕ್ಷದ ಕಾರ್ಯಕರ್ತರು ಬಿಜೆಪಿ ದುರಾಡಳಿತದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು’ ಎಂದು ಸಿದ್ದರಾಮಯ್ಯ ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರು ಮಾತನಾಡಿ, ‘ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಭ್ರಷ್ಟಾಚಾರ ಕಾಣುತ್ತಿದ್ದೇವೆ. ಬಿಜೆಪಿ ಎರಡು ಬಾರಿಯೂ ಆಪರೇಷನ್‌ ಕಮಲ ಮಾಡಿ ಅಧಿಕಾರ ಬಂದಿತ್ತು. ಎರಡನೇ ಅವಧಿಯಲ್ಲಿ ಮೂವರು ಸಚಿವರು ರಾಜೀನಾಮೆ ನೀಡಿದ್ದಾರೆ.ಸರ್ಕಾರದ ವೈಫಲ್ಯವನ್ನು ಜನರಿಗೆ ತಿಳಿಸಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ನಾಲ್ಕೂ ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಳು ಗೆಲ್ಲುವಂತಾಗಬೇಕು’ ಎಂದರು.

ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಆರ್‌.ನರೇಂದ್ರ, ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ ಮಾತನಾಡಿದರು.

ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮುಖಂಡರಾದ ಗಣೇಶ್ ಪ್ರಸಾದ್, ಎ.ಆರ್.ಕೃಷ್ಣಮೂರ್ತಿ, ಜಯಣ್ಣ, ಕಾಗಲವಾಡಿ ಶಿವಣ್ಣ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮರಿಸ್ವಾಮಿ, ವೀಕ್ಷಕ‌ರಾದ ಲಕ್ಷ್ಮಣ, ಡಾ.ರವೀಂದ್ರ, ಜಿಲ್ಲಾ ಪ್ರಧಾನಕಾರ್ಯದರ್ಶಿ ಚಿಕ್ಕ ಮಹದೇವ್, ಮಹಿಳಾ ಘಟಕದ ಅಧ್ಯಕ್ಷೆ ಲತಾ ರಾಜಶೇಖರ ಜತ್ತಿ ಸೇರಿದಂತೆ ಮುಖಂಡರು, ಪದಾಧಿಕಾರಿಗಳು ಇದ್ದರು.

ಭ್ರಷ್ಟಾಚಾರ ತಡೆ ಕಾಯ್ದೆ ಪ್ರಕರಣ ದಾಖಲಿಸಲಿ

‘ಗುತ್ತಿಗೆದಾರ ಸಂತೋಷ್‌ ಜಿ.ಪಾಟೀಲ ಅವರು ಹಿಂಡಲಗಾ ಗ್ರಾಮದಲ್ಲಿ ₹4 ಕೋಟಿ ಮೊತ್ತದ ಕೆಲಸ ಮಾಡಿಸಿದ್ದರು. ‘ಕೆಲಸ ಮಾಡು‌, ನಂತರ ಹಣ ಬಿಡುಗಡೆ ಮಾಡುತ್ತೇವೆ’ ಎಂದು ಸಚಿವರಾಗಿದ್ದ ಈಶ್ವರಪ್ಪ ಹೇಳಿದ್ದರು. ಆದರೆ, ಕೆಲಸ ಮಾಡಿದ ನಂತರ ಹಣ ನೀಡಿಲ್ಲ. ಈಶ್ವರಪ್ಪ ಹಾಗೂ ಅವರ ಇಬ್ಬರು ಆಪ್ತ ಸಹಾಯಕರಾದ ಬಸವರಾಜು ಮತ್ತು ರಮೇಶ್‌ ಅವರು ಶೇ 40ರಷ್ಟು ಕಮಿಷನ್‌ ಕೇಳಿದ್ದಾರೆ. ಈ ಬಗ್ಗೆ ಸಂತೋಷ್‌ ಪಾಟೀಲ ಅವರು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್‌ ಸಿಂಗ್‌ ಅವರಿಗೂ ಪತ್ರ ಬರೆದಿದ್ದರು. ಹಣ ಬಿಡುಗಡೆ ಮಾಡದೇ ಇದ್ದಾಗ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡುವ ಬಗ್ಗೆ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶವನ್ನೂ ಕಳುಹಿಸಿದ್ದಾರೆ. ಅದಕ್ಕಿಂತ ಬೇರೆ ಸಾಕ್ಷಿ ಏನು ಬೇಕು’ ಎಂದು ಸಿದ್ದರಾಮಯ್ಯ ಹೇಳಿದರು.

‘ಈಶ್ವರಪ್ಪ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ಮಾತ್ರ ದಾಖಲಾಗಿಸಲಾಗಿದೆ. ಭಷ್ಟಾಚಾರ ವಿರೋಧಿ ಕಾಯ್ದೆಯ ಅಡಿಯಲ್ಲೂ ಪ್ರಕರಣ ದಾಖಲಿಸಿ, ಅವರನ್ನು ಬಂಧಿಸಬೇಕು. ಸಂತೋಷ ಪಾಟೀಲ ಕುಟುಂಬಕ್ಕೆ ₹1 ಕೋಟಿ ಪರಿಹಾರ ಹಾಗೂ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.