ADVERTISEMENT

ಕ್ಷೇತ್ರದ ಹೆಸರು ಹೇಳುವ ಧೈರ್ಯ‌ ಸಿದ್ದರಾಮಯ್ಯಗೆ ಇಲ್ಲ: ಶ್ರೀನಿವಾಸ ಪ್ರಸಾದ್

ಈ ಕ್ಷೇತ್ರದಲ್ಲೇ ನಿಲ್ಲುವೆ ಎಂದು ಹೇಳುವ ಧೈರ್ಯ‌ ಸಿದ್ದರಾಮಯ್ಯಗೆ ಇಲ್ಲ- ಶ್ರೀನಿವಾಸ್ ಪ್ರಸಾದ್

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 11:24 IST
Last Updated 9 ನವೆಂಬರ್ 2022, 11:24 IST
ಶ್ರೀನಿವಾಸ ಪ್ರಸಾದ್
ಶ್ರೀನಿವಾಸ ಪ್ರಸಾದ್   

ಚಾಮರಾಜನಗರ: 'ರಾಜಕೀಯ ಅಲೆಮಾರಿಯಾಗಿ ಕ್ಷೇತ್ರ ಹುಡುಕಾಟದಲ್ಲಿರುವ ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೇವಲ ವೀರಾವೇಷದ ಮಾತುಗಳನ್ನಾಡುತ್ತಾರೆಯೇ ವಿನಾ ನಿರ್ದಿಷ್ಟ ಕ್ಷೇತ್ರದಲ್ಲಿ ನಿಲ್ಲುತ್ತೇನೆ ಎಂದು ಹೇಳುವ ಧೈರ್ಯ ಇಲ್ಲ' ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಬುಧವಾರ ಟೀಕಿಸಿದರು.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 'ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತು ಬಾದಾಮಿಗೆ ಹೋದರು. ಚಾಮರಾಜನಗರ, ಕೋಲಾರ, ಚಿಕ್ಕನಾಯಕನಹಳ್ಳಿ ಎಲ್ಲ ಕಡೆ ಸ್ಪರ್ಧಿಸಿ ಎಂದು ಕರೆಯುತ್ತಿದ್ದಾರೆ. ಆದರೆ ಇಲ್ಲಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಅವರು ಹೇಳಿದ್ದಾರಾ' ಎಂದು ಪ್ರಶ್ನಿಸಿದರು.

'ಮುಂದಿನ ಮುಖ್ಯಮಂತ್ರಿ ತಾನೇ ಅಂತ ಹೇಳಿದರು. ಮಣ್ಣು ಮುಕ್ಕಿದರು. ರಾಯಚೂರಿನಲ್ಲಿ ಮೋದಿ ಪ್ರಧಾನಿಯಾಗಲ್ಲ ಎಂದು ಮೇಜು ಕುಟ್ಟಿ ಹೇಳಿದರು. ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೆ ಅಂದರು. ಏನಾಯ್ತು? ಅವರು ಬರಿ ವೀರಾವೇಷ ಮಾತುಗಳನ್ನು ಆಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಒಂದು ಸ್ಥಾನ ಗೆದ್ದವರೇ ಅಷ್ಟು ಮಾತನಾಡುವಾಗ 25 ಸ್ಥಾನ ಗೆದ್ದ ಬಿಜೆಪಿ ಹೇಗೆ ಮಾತನಾಡಬೇಕು'' ಎಂದು ಪ್ರಶ್ನಿಸಿದರು.

ADVERTISEMENT

'ಸಿದ್ದರಾಮಯ್ಯ ಅವರು ಮೊದಲು, ಇಂತಹ ಕಡೆ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಲಿ' ಎಂದು ಸವಾಲು ಹಾಕಿದರು.

ಎಐಸಿಸಿ ಅಧ್ಯಕ್ಷರಾಗಿ‌ ಖರ್ಗೆ ಆಯ್ಕೆಯಾಗಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಶ್ರೀನಿವಾಸ ಪ್ರಸಾದ್, 'ಎಐಸಿಸಿಯಲ್ಲಿ ಏನಿದೆ? ಖರ್ಗೆಯವರಿಗೆ ಮರದ ಕತ್ತಿ ಕೊಟ್ಟು ಯುದ್ಧಕ್ಕೆ ಹೋಗು ಎಂದು ಕಳುಹಿಸಿದ್ದಾರೆ' ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಅವರು ಹಿಂದೂ ಪದದ ಕುರಿತು ‌ನೀಡಿರುವ ಹೇಳಿಕೆ ಬಗ್ಗೆ ಕೇಳಿದ್ದಕ್ಕೆ, 'ಪಕ್ಷಾತೀತವಾಗಿ ಎಲ್ಲರೂ ಈ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿಯೊಬ್ಬರೂ ಹೇಳಿಕೆಯನ್ನು ತಿರಸ್ಕಾರ ಮಾಡಿದ್ದಾರೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.