ADVERTISEMENT

ಅತಿಯಾದ ಖರ್ಚು, ಕೀಟಬಾಧೆ: ಕುಸಿದ ಸಾಂಬಾರ ಈರುಳ್ಳಿ ಸಾಗುವಳಿ ಪ್ರದೇಶ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 1:53 IST
Last Updated 18 ಫೆಬ್ರುವರಿ 2026, 1:53 IST
ಯಳಂದೂರು ತಾಲ್ಲೂಕಿನಲ್ಲಿ ಹೊನ್ನೂರು, ವೈ.ಕೆ.ಮೋಳೆ ಸುತ್ತಮುತ್ತ ನಾಟಿ ಮಾಡಿದ ಸಾಂಬಾರ ಈರುಳ್ಳಿ
ಯಳಂದೂರು ತಾಲ್ಲೂಕಿನಲ್ಲಿ ಹೊನ್ನೂರು, ವೈ.ಕೆ.ಮೋಳೆ ಸುತ್ತಮುತ್ತ ನಾಟಿ ಮಾಡಿದ ಸಾಂಬಾರ ಈರುಳ್ಳಿ   

ಯಳಂದೂರು: ತಾಲ್ಲೂಕಿನಲ್ಲಿ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗುತ್ತಿದ್ದ ಸಾಂಬಾರ ಈರುಳ್ಳಿ ತಾಕು ವರ್ಷದಿಂದ ವರ್ಷಕ್ಕೆ ಕುಗ್ಗುತ್ತ ಸಾಗಿದೆ. ಈರುಳ್ಳಿಗೆ ಸ್ಥಿರ ಬೆಲೆ ಇಲ್ಲದಿರುವುದು, ಅತಿಯಾದ ಕೀಟಬಾಧೆ ಈರುಳ್ಳಿ ಬೆಳೆಗೆ ಕಂಟಕವಾಗಿದೆ. ಸಣ್ಣ ಈರುಳ್ಳಿ ಬಿತ್ತನೆಗೆ ತಗುಲುವ ಖರ್ಚಿನಲ್ಲಿ ಏರಿಕೆ, ಕೂಲಿಕಾರರ ಸಮಸ್ಯೆ ಹಾಗೂ ನಿರ್ವಹಣೆ ಸವಾಲಿನಿಂದ ಬೆಳೆಗಾರರು ಈ ಬಾರಿ ಬಿತ್ತನೆ ಪ್ರದೇಶವನ್ನು ನಿರ್ಲಕ್ಷಿಸಿದ್ದಾರೆ.

ಡಿಸೆಂಬರ್ ಆರಂಭದಿಂದಲೇ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಸಣ್ಣ ಈರುಳ್ಳಿ ನಾಟಿಗೆ ಕೃಷಿಕರು ಸಿದ್ಧತೆ ನಡೆಸುತ್ತಿದ್ದರು. ಅಗರ ಮತ್ತು ಕಸಬಾ ಹೋಬಳಿ ವ್ಯಾಪ್ತಿಯ ಸುಮಾರು 100ಕ್ಕಿಂತಲೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ನಡೆಯುತ್ತಿತ್ತು, ಫೆಬ್ರುವರಿ-ಮಾರ್ಚ್ ನಡುವೆ ಕೊಯ್ಲಿಗೆ ಬರುತ್ತಿತ್ತು. ಆದರೆ, ಸೀಮಿತ ಮಾರುಕಟ್ಟೆ ಹಾಗೂ ದರಗಳ ಏರುಪೇರಿನಿಂದ ಕಂಗೆಟ್ಟಿರುವ ರೈತರು ಹತ್ತಾರು ಹೆಕ್ಟೇರ್ ಪ್ರದೇಶಕ್ಕೆ ಈರುಳ್ಳಿ ಬೆಳೆಯನ್ನು ಮಿತಿಗೊಳಿಸಿದ್ದಾರೆ. ಜೊತೆಗೆ ಕಳೆ, ಕೀಟ ಮತ್ತು ರೋಗ ನಿಯಂತ್ರಣಕ್ಕೆ ಮುಂದಾಗಿದ್ದಾರೆ.

‘ಮೂರು ಎಕೆರೆ ಪ್ರದೇಶದಲ್ಲಿ ಸಾಂಬಾರ ಈರುಳ್ಳಿ ಬಿತ್ತನೆ ಮಾಡಿದ್ದು, ತಾಕಿನಲ್ಲಿ ಕಳೆ ತೆಗೆಯುವ ಕೆಲಸ ನಡೆಯುತ್ತಿದೆ. ಚಳಿ ಕಳೆದು ಉಷ್ಣಾಂಶದಲ್ಲಿ ಏರಿಕೆಯಾಗುತ್ತಿದ್ದು, ಹಲವು ರೋಗಗಳು ಅಡಿ ಇಟ್ಟಿವೆ, ಎರಡು ತಿಂಗಳ ಅವಧಿಯಲ್ಲಿ ಮೂರು ಬಾರಿ ಅನುಪಯುಕ್ತ ಗಿಡಗಳನ್ನು ತೆಗೆದು, ಕೀಟನಾಶಕ ಬಳಸಿ ಬೆಳೆ ರಕ್ಷಿಸಿಕೊಂಡಿದ್ಧೇನೆ. ಸುಮಾರು 3 ಎಕರೆಗೆ ₹1.5 ಲಕ್ಷ ಖರ್ಚು ತಗುಲಿದ್ದು. ವೆಚ್ಚದಲ್ಲಿ ಏರಿಕೆಯಾಗಿದೆ. ಮಾರ್ಚ್ ಆರಂಭದಲ್ಲಿ ಈರುಳ್ಳಿ ಕಟಾವಿಗೆ ಬರಲಿದ್ದು, ಗುಣಮಟ್ಟದ ಫಸಲು ಕೈ ಸೇರಿದರೆ ಮಾತ್ರ ಹಾಕಿದ ಬಂಡವಾಳವನ್ನು ನಿರೀಕ್ಷಿಸಬಹುದು. ಉತ್ಪಾದನೆಯಾದ ಈರುಳ್ಳಿಗೆ ಆಯಾ ಸಮಯದಲ್ಲಿ ಇರುವ ಬೇಡಿಕೆ, ಹೊರ ರಾಜ್ಯಗಳ ವ್ಯಾಪಾರಿಗಳ ಮನಸ್ಥಿತಿ ಹಾಗೂ ಸ್ಥಳೀಯ ವ್ಯಾಪಾರಿಗಳು ನಿರ್ಧರಿಸುವ ದರವೂ ಈರುಳ್ಳಿ ಬೆಳೆಗಾರರ ಲಾಭ ಇಲ್ಲವೆ ನಷ್ಟವನ್ನು ನಿರ್ಧರಿಸುವ ಸೂಚಿಯಾಗಿದೆ’ ಎನ್ನುತ್ತಾರೆ ಬೆಳೆಗಾರ ವೈ.ಕೆ.ಮೋಳೆ ದೊಡ್ಡಯ್ಯ.

ADVERTISEMENT

‘ಕಳೆದ ವರ್ಷ ಧಾರಣೆಯಲ್ಲಿ ಸ್ಥಿರತೆ ಇರಲಿಲ್ಲ. ಕ್ವಿಂಟಲ್ ಸಾಂಬಾರ್ ಈರುಳ್ಳಿ ₹750ರಿಂದ ₹1000 ನಡುವೆ ಗಿರಿಕಿ ಹೊಡೆಯಿತು. ಅಪರೂಪಕ್ಕೆ ಉತ್ತಮ ಈರುಳ್ಳಿಗೆ ₹4 ಸಾವಿರಕ್ಕೂ ಬೇಡಿಕೆ ತಂದಿತ್ತು. ಇದರಿಂದ ಬೇಸತ್ತು ಈರುಳ್ಳಿ ಕಟಾವು ಮಾಡಲಿಲ್ಲ. ಕೆಲವರು ಈರುಳ್ಳಿಯನ್ನು ಭೂಮಿಗೆ ಸೇರಿಸಿ ಕೊಳೆಯಲು ಬಿಟ್ಟರು. ಅಲ್ಫಾವಧಿಯಲ್ಲಿ ಬೆಳೆಯುವ ಈರುಳ್ಳಿಯ ನೀಡಿಕೆ ಕಡಿಮೆಯಾದರೆ ಧಾರಣೆ ಏರುತ್ತದೆ. ಉತ್ಪನ್ನ ಹೆಚ್ಚಾದರೆ ಇಳಿಯುತ್ತದೆ. ಹಾಗಾಗಿ, 3 ಎಕೆರೆ ಫಸಲನ್ನು ಕಟಾವು ಮಾಡದೆ ಬಿಡಬೇಕಾಯಿತು’ ಎಂದು ಯರಿಯೂರು ರೈತ ವೆಂಕಟರಂಗಶೆಟ್ಟಿ ತಿಳಿಸಿದರು.

‘ಪ್ರಸ್ತುತ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕೆಜಿಗೆ ₹40 ಇದೆ. ಆದರೆ, ಹೊಲದಲ್ಲಿ 1 ಕೆಜಿಗೆ ₹10ಕ್ಕೆ ಕೇಳುತ್ತಾರೆ. ಒಂದು ಎಕರೆಗೆ 25 ಕ್ವಿಂಟಲ್ ಫಸಲಿನ ನಿರೀಕ್ಷೆ ಇದ್ದು, ಕೊಯ್ಲಿನ ಸಮಯದಲ್ಲಿ ಹೆಚ್ಚು ಬೆಲೆ ಮತ್ತು ಬೇಡಿಕೆ ಕಂಡುಬಂದರೆ ಮಾತ್ರ ರೈತರು ಖರ್ಚಿನ ಬಾಬತ್ತು ಕೈಸೇರುತ್ತದೆ. ಇಲ್ಲದಿದ್ದರೆ, ಬೆಳೆ ತೆಗೆಯಲು ವ್ಯಯಿಸಿದ ಬಂಡವಾಳದಲ್ಲಿ ಅರ್ಧ ಭಾಗವೂ ವಾಪಸ್ ಬರುವುದಿಲ್ಲ. ಹಾಗಾಗಿ. ಈ ಸಲ ಈರುಳ್ಳಿ ಬೆಳೆ ವಿಸ್ತೀರ್ಣ ಕುಸಿದಿದೆ’ ಎಂದು ತೋಟಗಾರಿಕೆ ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.