ADVERTISEMENT

ಚಾಮರಾಜನಗರ- ಮನೆಗಳು ಶಿಥಿಲ: ಆತಂಕದಲ್ಲಿ ಸೋಲಿಗರು

ಪುರಾಣಿ ಪೋಡು: ಮಳೆಗೆ 40ಕ್ಕೂ ಹೆಚ್ಚು ಚಾವಣಿ ಕುಸಿಯುವ ದುಸ್ಥಿತಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 16:13 IST
Last Updated 29 ನವೆಂಬರ್ 2022, 16:13 IST
ಪುರಾಣಿಪೋಡಿನ ಮನೆಯೊಂದರ ಮಾಡಿಗೆ ಟಾರ್ಪಲ್‌ ಹಾಕಿರುವುದು
ಪುರಾಣಿಪೋಡಿನ ಮನೆಯೊಂದರ ಮಾಡಿಗೆ ಟಾರ್ಪಲ್‌ ಹಾಕಿರುವುದು   

ಚಾಮರಾಜನಗರ:ಮನೆಯ ಮಾಡು ಯಾವ ಕ್ಷಣದಲ್ಲಾದರೂ ಉದುರುವ ಭಯದಲ್ಲಿ ನಿವಾಸಿಗಳು, ಕದ ಇಲ್ಲದ ಮನೆ ಪ್ರವೇಶಿಸುವ ಶೀತಗಾಳಿ, ಮಳೆ ನೀರಿಗೆ ಕರಗಿ ಬೀಳುವ ಗೋಡೆ, ಸಂಜೆಯಾಗುತ್ತಲೇ ಆಗುತ್ತಲೇ ಕತ್ತಲೆಯಲ್ಲಿ ಕಾಲ ನೂಕಬೇಕಾದ ಸ್ಥಿತಿ...

ಜಿಲ್ಲೆಯ ಯಳಂದೂರು ತಾಲ್ಲೂಕಿನ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಪುರಾತನ ಪುರಾಣಿಪೋಡು ಸೋಲಿಗರ ಚದುರಿದ ಮನೆಗಳ ದುಃಸ್ಥಿತಿ.

ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುರಾಣಿಪೋಡಿನಲ್ಲಿ 115 ಕುಟುಂಬಗಳಿವೆ. ಆದರೆ, ಮೂಲಸೌಕರ್ಯಗಳ ಕೊರತೆಯಿಂದ ಸಮಸ್ಯೆಗಳಿಂದ ನಲುಗಿವೆ. ಇಲ್ಲಿನ ಜನಸಂಖ್ಯೆ 540 ಇದ್ದು, 301 ಮತದಾರರನ್ನು ಹೊಂದಿದೆ. ರಸ್ತೆ, ವಿದ್ಯುತ್ ಸಮಸ್ಯೆಗಳಿಂದ ಗ್ರಾಮೀಣರು ಇನ್ನೂ ಮುಕ್ತಿ ಪಡೆದಿಲ್ಲ. ಮೂರು ತಿಂಗಳಿಂದ ನಿರಂತರವಾಗಿ ಸುರಿದ ಮಳೆಗೆ ಮನೆ, ರಸ್ತೆ ಮತ್ತು ಸೋಲಾರ್ ವ್ಯವಸ್ಥೆ ಅಸ್ತವ್ಯಸ್ತವಾಗಿದೆ.

ADVERTISEMENT

'ಗ್ರಾಮದಲ್ಲಿ ಮನೆಗಳ ಚಾವಣಿ ಶಿಥಿಲವಾಗಿದೆ. ಮುಂಭಾಗದ ಬಾಗಿಲು ಕಿತ್ತು ಹೋಗಿದೆ. ಕದ ಇಲ್ಲದ ಮನೆಗಳಿಗೆ ಚಳಿ, ಗಾಳಿ ನುಗ್ಗುತ್ತಿದೆ. ಕೆಲವು ಕುಟುಂಬಗಳಲ್ಲಿ ಗೋಡೆಗಳು ಇಲ್ಲ. ಸೋಗೆ, ಪ್ಲಾಸ್ಟಿಕ್ ಬಳಸಿ ಬದುಕು ಸಾಗಿಸುತ್ತಿದ್ದೇವೆ. ಪುಟ್ಟ ಮಕ್ಕಳನ್ನು ಕೊರೆಯುವ ಚಳಿಯಲ್ಲಿ ರಕ್ಷಿಸುವುದೇ ಪೋಷಕರಿಗೆ ಸವಾಲಾಗಿದೆ. ಮಣ್ಣಿನ ಮನೆಗಳು ಗಾಳಿ, ಮಳೆಗೆ ಬೀಳುವ ಸ್ಥಿತಿಯಲ್ಲಿ ಇವೆ. ಪ್ರಾಣ ಭಯ ಪ್ರತಿದಿನ ದಿನ ಕಾಡಿದೆ' ಎಂದು ಗ್ರಾಮದ ನಿವಾಸಿ ಲಕ್ಷ್ಮಿ ಮತ್ತು ರಂಗೋಲಿ ಜಡೇಗೌಡ ಅಲವತ್ತುಕೊಂಡರು.

‘ಪೋಡಿನಲ್ಲಿ ದೀನ ದಯಾಳ್ ಉಪಾದ್ಯಾಯ ಯೋಜನೆಯಡಿ ಸೌರ ಘಟಕ ನಿರ್ಮಿಸಲಾಗಿದೆ. ಇಲ್ಲಿಂದ ಮನೆ ಮತ್ತು ಬಡಾವಣೆಗಳಿಗೆ ವಿದ್ಯುತ್ ಪೂರೈಕೆ ಆಗುತ್ತಿದೆ. ಆದರೆ. ಆನೆಗಳು ಘಟಕದ ಮೇಲೆ ದಾಳಿ ಇಟ್ಟು, ತಂತಿಗಳನ್ನು ಕಿತ್ತು ಹಾಕಿವೆ. ಈ ವೇಳೆ ಗ್ರಾಮಕ್ಕೆ ಕತ್ತಲೆ ಆವರಿಸುತ್ತದೆ. ಇದರಿಂದ ವನ್ಯಜೀವಿಗಳ ಭಯದಲ್ಲಿ ನಿವಾಸಿಗಳು ಸಂಚರಿಸಬೇಕಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಸಿ.ಡಿ. ಮಾದೇವ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಜಾರಿಗೆ ತಂದಿದೆ. ಗುಡಿಸಲು ಮುಕ್ತ ಗ್ರಾಮ ನಿರ್ಮಾಣಕ್ಕೆ ಹಲವಾರು ಅವಕಾಶ ಒದಗಿಸಿದೆ. ಆದರೆ, ಇದು ಜೇನು ಕುರುಬ ವಸತಿ ಪ್ರದೇಶಗಳಿಗೆ ಮಾತ್ರ ಅನ್ವಯವಾಗುತ್ತದೆ. ಬಿಆರ್‌ಟಿ ಪೋಡುಗಳಲ್ಲಿ ಸೋಲಿಗರು ನೆಲೆಸಿದ್ದು, ಪಂಚಾಯಿತಿ ಅನುದಾನಗಳನ್ನು ಕಾಯುವಂತೆ ಆಗಿದೆ. ಇದರಿಂದ ಶಿಥಿಲ ಮನೆಗಳ ದುರಸ್ತಿಗೆ ವರ್ಷಗಟ್ಟಲೇ ಕಾಯಬೇಕಿದೆ’ ಎಂದು ಮಹದೇವಮ್ಮ ಮತ್ತು ಬೊಮ್ಮಮ್ಮ ಅವರು ಸಮಸ್ಯೆಗಳ ಸುಳಿಯನ್ನು ಬಿಚ್ಚಿಟ್ಟರು.

ಪರಿಶೀಲಿಸಿ ಕ್ರಮ: ‌ಉಮೇಶ್‌

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಯಳಂದೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಆರ್.ಉಮೇಶ್, 'ಕಚ್ಚಾ ಮನೆಗಳು ಮತ್ತು ಶಿಥಿಲ ಮನೆಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಪಿಡಿಒಗಳಿಗೆ ಸೂಚಿಸಲಾಗಿದೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಯೋಜನೆಗಳ ಅಡಿಯಲ್ಲಿ ಹಾಡಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಈ ಬಾರಿ ದೀರ್ಘ ಸಮಯ ಮಳೆ ಸುರಿದಿದ್ದು, ಮನೆಗಳ ದೃಢತೆ ಬಗ್ಗೆ ಶೀಘ್ರದಲ್ಲಿ ವರದಿ ಪಡೆಯಲಾಗುವುದು. ಹಾಳಾದ ಸೋಲಾರ್‌ಗಳ ದುರಸ್ತಿ ಕಾರ್ಯಮುಗಿಸಿದ್ದು, ಸಂಬಂಧ ಪಟ್ಟ ಕಂಪನಿಗಳು ಅವುಗಳ ನಿರ್ವಹಣೆ ಹೊಣೆ ಹೊತ್ತಿವೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.