ADVERTISEMENT

Varamahalakshmi Festival | ವರವ ಕೊಡೇ ಮದ್ದೂರು ಮಹಾಲಕ್ಷ್ಮಿ!

ದೇವಿಗೆ ವಿಶೇಷ ಅಲಂಕಾರ, ಬಾಗಿನ

ನಾ.ಮಂಜುನಾಥ ಸ್ವಾಮಿ
Published 16 ಆಗಸ್ಟ್ 2024, 5:09 IST
Last Updated 16 ಆಗಸ್ಟ್ 2024, 5:09 IST
<div class="paragraphs"><p>ಯಳಂದೂರು ತಾಲ್ಲೂಕಿನ ಮದ್ದೂರು ಗ್ರಾಮದಲ್ಲಿ ಅರಿಶಿನ, ಕುಂಕುಮ, ಕವಡೆ ಮತ್ತು ಫಲ ಪುಸ್ಪಗಳಿಂದ ಮಹಾಲಕ್ಷ್ಮಿಯನ್ನು ಅಲಂಕರಿಸಲಾಗಿತ್ತು.</p></div>

ಯಳಂದೂರು ತಾಲ್ಲೂಕಿನ ಮದ್ದೂರು ಗ್ರಾಮದಲ್ಲಿ ಅರಿಶಿನ, ಕುಂಕುಮ, ಕವಡೆ ಮತ್ತು ಫಲ ಪುಸ್ಪಗಳಿಂದ ಮಹಾಲಕ್ಷ್ಮಿಯನ್ನು ಅಲಂಕರಿಸಲಾಗಿತ್ತು.

   

ಯಳಂದೂರು: ತಾಲ್ಲೂಕಿನ ಮದ್ದೂರು ಗ್ರಾಮದ ಸುವರ್ಣವತಿ ನದಿ ತಟದಲ್ಲಿ ರಾರಾಜಿಸುತ್ತಿರುವ ಮಹಾಲಕ್ಷ್ಮಿ ಆಲಯ ವರ ಮಹಾಲಕ್ಷ್ಮಿ ಹಬ್ಬಕ್ಕೆ ಸಜ್ಜುಗೊಂಡಿದೆ. ಶುಕ್ರವಾರ ನಸುಕಿನಿಂದ ಸಾವಿರಾರು ಮಹಿಳೆಯರು ದರ್ಶನಕ್ಕೆ ಸೇರುವ ನಿರೀಕ್ಷೆ ಇದೆ.  ದೇವಳದಲ್ಲಿ ಮಂತ್ರ ಘೋಷಗಳು ಮೊಳಗಲಿದೆ.

ಪಟ್ಟಣದ ಗೌರೀಶ್ವರ, ಮಾಂಬಳ್ಳಿ ಅಂಕಾಳ ಪರಮೇಶ್ವರಿ ಹಾಗೂ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ಜರುಗಲಿವೆ. ಮನೆ ಮಂದಿ ಬಾಗಿಲುಗಳನ್ನು ತಳಿರು ತೋರಣಗಳಿಂದ ಅಲಂಕರಿಸಿ, ಬಾಳೆಯ ಕಂಬ ಕಟ್ಟಿ, ಲಕ್ಷ್ಮಿ ಪೂಜೆಗೆ ಅಣಿಯಾಗುತ್ತಾರೆ.  ಮಹಿಳೆಯರು  ವ್ರತ ನಿಷ್ಠರಾಗಿ  ತನು ಮನದಿಂದ ದೇವಿಯನ್ನು ಅರ್ಚಿಸುವರು.

ADVERTISEMENT

ಕಲಶ ಸ್ವರೂಪಿಣಿ: ದಶಕಗಳ ಹಿಂದೆ ಹಬ್ಬವನ್ನು ಉಳ್ಳವರು ಆಚರಿಸುವ ಅಲಿಖಿತ ನಿಯಮ ಇತ್ತು.  ಈಗ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಶ್ರಾವಣ ಹುಣ್ಣಿಮೆಯ ಹಿಂದಿನ ಶುಕ್ರವಾರ  ಮಂಟಪ, ಪುಷ್ಪಗಳಿಂದ ಅಲಂಕೃತಳಾದ ಕಲಶ ಸ್ವರೂಪಿಣಿ ಮಹಾಲಕ್ಷ್ಮಿಯನ್ನು ಶ್ರದ್ಧೆ, ಭಕ್ತಿಯಿಂದ ಪೂಜಿಸುವ ಪರಂಪರೆ ಬೆಳೆದು ಬಂದಿದೆ. ಎಂದು ಅರ್ಚಕ ಗುಂಡಪ್ಪ ಹೇಳಿದರು.

‘ಹಬ್ಬದ ಮಹತ್ವ ಅರಿತು  ವರ ಮಹಾಲಕ್ಷ್ಮಿ ಪೂಜೆಯನ್ನು ವಿಜೃಂಭಣೆಯಿಂದ ಮಹಿಳೆಯರು ನೆರವೇರಿಸುತ್ತಾರೆ. ಕಳಸದ ಮೇಲೆ ತೆಂಗಿನ ಕಾಯಿ ಇಟ್ಟು, ವೀಳ್ಯದಲೆ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ’ ಎಂದು ಹೇಳಿದರು.

‘ಶ್ರಾವಣ ಮಾಸದ ಎರಡನೇ ಶುಕ್ರವಾರ  ವರಹಾಲಕ್ಷ್ಮಿ ಹಬ್ಬದಲ್ಲಿ ಮತ್ತೈದೆಯರು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸುತ್ತಾರೆ.  ತಾವರೆ , ಗುಲಾಬಿ ಮತ್ತಿತರ ಹೂವುಗಳ ಹಾರವನ್ನು ಬೆಳ್ಳಿ ಇಲ್ಲವೇ ಪಂಚಲೋಹದಲ್ಲಿ ತಯಾರಿಸಿದ ದೇವಿ ಮೂರ್ತಿಗೆ ಸಮರ್ಪಿಸುತ್ತಾರೆ. ಕೆಲವರು ಅಷ್ಟಲಕ್ಷ್ಮಿಯರನ್ನು ಪೂಜಿಸುವುದೂ ಇದೆ. ಸಂಜೆ ಮಹಾಲಕ್ಷ್ಮಿ ಮುಂದೆ ಹೊಸ ವಸ್ತ್ರ, ಹಣ, ಕಾಸು, ಫಲ ಪುಷ್ಪ, ಬಳೆಗಳನ್ನು ಇಟ್ಟು, ನೈವೇದ್ಯ ಮಾಡಲಾಗುತ್ತದೆ. ಮನೆಗೆ ಬರುವ ಸುಮಂಗಲೆಯರಿಗೆ ಅರಿಸಿನ ಕುಂಕುಮ, ಪ್ರಸಾದ ವಿನಿಯೋಗವೂ ನಡೆಯಲಿದೆ.  ಸಕಲ ಸಂಪತ್ತು ಪ್ರಾಪ್ತವಾಗುತ್ತದೆ ಎಂಬುದು ಗೃಹಿಣಿಯರ ನಂಬಿಕೆಯಾಗಿದೆ’ ಎಂದು ಪಟ್ಟಣದ ಗೃಹಿಣಿ ಶೋಭ ಹೇಳಿದರು.

ಸಂಪತ್ತು, ರೂಪ ಸಂಪತ್ತು, ಶುದ್ದಿಯ ಅಧಿ ದೇವತೆಯನ್ನು ಅರ್ಚಿಸುವ ವ್ರತವೇ ‘ವರಮಹಾಲಕ್ಷ್ಮಿ ವ್ರತ’. ಹಿಂದೆ ಮಗಧ ರಾಜ್ಯದ ಕುಂಡಿನಪುರದ (ಅಮರಾವತಿ) ಚಾರುಮತಿ ಕನಸಿನಲ್ಲಿ ಕಂಡ ಮಹಾಲಕ್ಷ್ಮಿಯ ಇಷ್ಟದಂತೆ ದೇವಿಯನ್ನು  ಗ್ರಾಮದ ಮಹಿಳೆಯರೊಂದಿಗೆ ಆರಾಧಿಸಿ ಐಶ್ವರ್ಯ ಪಡೆದಿರುವುದು ವ್ರತದ ಹಿಂದಿನ ಕತೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.