ADVERTISEMENT

ಹನೂರು | ಎಸ್ಸೆಸ್ಸೆಲ್ಸಿ ಫಲಿತಾಂಶ: ಮತ್ತೆ ಮೊದಲ ಸ್ಥಾನಕ್ಕೆ ದೃಷ್ಟಿ

ಸಿದ್ಧತೆ ಆರಂಭಿಸಿದ ಶಿಕ್ಷಣ ಅಧಿಕಾರಿಗಳು, ಶಿಕ್ಷಕರು, ವಿವಿಧ ಚಟುವಟಿಕೆಗಳು

ಬಿ.ಬಸವರಾಜು
Published 18 ನವೆಂಬರ್ 2022, 19:30 IST
Last Updated 18 ನವೆಂಬರ್ 2022, 19:30 IST
ಹನೂರು ತಾಲ್ಲೂಕಿನ ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಗುಂಪು ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳು
ಹನೂರು ತಾಲ್ಲೂಕಿನ ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಗುಂಪು ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳು   

ಹನೂರು: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಸತತ ಆರು ವರ್ಷಗಳಿಂದ ಮೊದಲ ಸ್ಥಾನ ಗಳಿಸಿರುವ ಹನೂರು ತಾಲ್ಲೂಕು, ಈ ಬಾರಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಈಗಿನಿಂದಲೇ ತಯಾರಿ ಆರಂಭಿಸಿದೆ.

ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ಪರೀಕ್ಷೆಗೆ ಐದು ತಿಂಗಳು ಬಾಕಿಯಿರುವಾಗಲೇ ಪೂರ್ವ ತಯಾರಿ ನಡೆಯುತ್ತಿದೆ. ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ವಿಶೇಷ ತರಗತಿಗಳು, ಗುಂಪು ಅಧ್ಯಯನ, ಕಿರು ಪರೀಕ್ಷೆಗಳ ಮೂಲಕ ಮಕ್ಕಳಲ್ಲಿನ ಸಂದೇಹಗಳನ್ನು ಪರಿಹರಿಸುವ ಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಕಳೆದ ಬಾರಿ ಕಡಿಮೆಫಲಿತಾಂಶ ಬಂದ ಶಾಲೆಗಳನ್ನು ಗುರುತಿಸಿ ಅಲ್ಲಿನ ಶಿಕ್ಷಕರಿಗೆ ಮಾರ್ಗದರ್ಶನ ನೀಡುವ ಮೂಲಕ ಶೇ 100 ರಷ್ಟು ಫಲಿತಾಂಶ ಪಡೆಯುವಂತೆ ಪ್ರೋತ್ಸಾಹ ನೀಡುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ.

‘ಪರೀಕ್ಷೆಯ ಬಗ್ಗೆ ಈಗಾಗಲೇ ಪ್ರತಿ ಶಾಲೆಗಳಲ್ಲೂ ಪೋಷಕರ ಸಭೆ ನಡೆಸಿ ಮಕ್ಕಳು ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿಕೊಡಲಾಗಿದೆ. ಮನೆಗಳಲ್ಲೂ ವಿದ್ಯಾರ್ಥಿಗಳು ಓದಲು ಪೂರಕ ವಾತಾವರಣ ಕಲ್ಪಿಸಿಕೊಡುವುದು ಪೋಷಕರ ಜವಬ್ದಾರಿ. ಈ ನಿಟ್ಟಿನಲ್ಲಿ ಜನವರಿಯಲ್ಲಿ ತಾಲ್ಲೂಕು ಮಟ್ಟದ ಪೋಷಕರ ಸಭೆ ಕರೆಯಲಾಗುವುದು’ ಎಂದು ಹೇಳುತ್ತಾರೆ ಅಧಿಕಾರಿಗಳು.

ADVERTISEMENT

ರಸಪ್ರಶ್ನೆ ಕಾರ್ಯಕ್ರಮ: ‘ಪರೀಕ್ಷೆಯಲ್ಲಿ ಒಂದು ಅಂಕದ ಪ್ರಶ್ನೆಗಳಿಗೆ ಮಕ್ಕಳು ಸುಲಭವಾಗಿ ಉತ್ತರಿಸುವಂತೆ ಮಾಡಲು, ಜೊತೆಗೆ ದೀರ್ಘಕಾಲ ಉತ್ತರಗಳು ನೆನಪಿನಲ್ಲಿ ಉಳಿಯುವಂತೆ ಮಾಡಲು ಎಲ್ಲ ಭಾಷಾ ಶಿಕ್ಷಕರಿಂದ ಪ್ರತಿ ಶನಿವಾರ ವಿಷಯವಾರು ರಸಪ್ರಶ್ನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ಪರೀಕ್ಷೆಯಲ್ಲೂ ಬಹು ಆಯ್ಕೆ ಮಾದರಿ ಪ್ರಶ್ನೆಗಳು ಇರುವುದರಿಂದ ರಸಪ್ರಶ್ನೆ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕೆ ಪ್ರಕ್ರಿಯೆಯಾಗಿದೆ’ ಎಂದು ಭೈರನತ್ತ ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕ ಶ್ರೀನಿವಾಸ್ ನಾಯ್ಡು ‘ಪ್ರಜಾವಾಣಿ’ಗೆ ತಿಳಿಸಿದರು.

ರಾತ್ರಿ ತರಗತಿಗಳು: ‘ವಿಶೇಷ ತರಗತಿಗಳ ಜತೆಗೆ ಖಾಸಗಿ, ಅನುದಾನಿತ ಹಾಗೂ ಸರ್ಕಾರಿ ಶಾಲೆಗಳಲ್ಲಿ ರಾತ್ರಿ ತರಗತಿಗಳನ್ನು ನಡೆಸಲು ಇಲಾಖೆ ಯೋಜನೆ ರೂಪಿಸಿದೆ. ಕಳೆದ ಬಾರಿಯೂ ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ರಾತ್ರಿ ತರಗತಿಗಳನ್ನು ಆಯೋಜಿಸಲಾಗಿತ್ತು. ಈ ಬಾರಿಯೂ ಆಯಾ ಮುಖ್ಯಶಿಕ್ಷಕರ ಅಭಿಪ್ರಾಯ ಪಡೆದು ಅಲ್ಲಿನ ಸೌಲಭ್ಯಗಳನ್ನು ಗಮನಿಸಿ ಡಿಸೆಂಬರ್ ತಿಂಗಳಿನಿಂದ ರಾತ್ರಿ ತರಗತಿಗಳನ್ನು ನಡೆಸಲಾಗುವುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜು ಹೇಳಿದರು.

ತೇರ್ಗಡೆ ಹೊಂದುವ, ಅಂಕಗಳಿಸುವ ಮಾರ್ಗ

‘ತಾಲ್ಲೂಕಿನ ಪ್ರತಿ ಪ್ರೌಢಶಾಲೆಗಳಿಗೂ ಈಗಾಗಲೇ ನಿರ್ದೇಶನಗಳನ್ನು ನೀಡಲಾಗಿದೆ. ಡಿಸೆಂಬರ್‌ನಲ್ಲಿ ವಿಷಯವಾರು ಶಿಕ್ಷಕರಿಗೆ ಕಾರ್ಯಾಗಾರ ಆಯೋಜಿಸಲಾಗುವುದು. ಅಲ್ಲಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಿ ಅದರಲ್ಲಿ ‘ಪಾಸಿಂಗ್ ಪ್ಯಾಕೇಜ್’ ಮತ್ತು ‘ಸ್ಕೋರಿಂಗ್ ಪ್ಯಾಕೇಜ್‌’ ಎಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗುವುದು. ಪ್ರತಿ ಶಾಲೆಗಳಲ್ಲೂ ವಿದ್ಯಾರ್ಥಿಗಳು ತೇರ್ಗಡೆಯಾಗುವಂತೆ ಮಾಡಲು ಪಾಸಿಂಗ್ ಪ್ಯಾಕೇಜ್ ಬಳಸಿಕೊಂಡು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು. ಅದೇ ರೀತಿಯಲ್ಲಿ ಹೆಚ್ಚು ಅಂಕ ಗಳಿಸಲು ಸಾಮಾರ್ಥ್ಯವಿರುವ ವಿದ್ಯಾರ್ಥಿಗಳಿಗೆ ಸ್ಕೋರಿಂಗ್ ಪ್ಯಾಕೇಜ್ ಅಳವಡಿಸಿಕೊಂಡು ಕಲಿಸಲಾಗುವುದು’ ಎಂದು ತಾಲ್ಲೂಕು ಶಿಕ್ಷಣ ಸಂಯೋಜಕ ಕಿರಣ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.